ಕಾರವಾರ: ಗುಣ- ದೋಷಗಳೆರಡಕ್ಕೂ ಸಹವಾಸವೇ ಕಾರಣ. ಆದ್ದರಿಂದ ವಿದ್ಯಾರ್ಥಿಗಳ ಕಲಿಕೆಗೆ ಉತ್ತಮ ಪರಿಸರ ಮತ್ತು ಉತ್ತಮ ಸಂಸರ್ಗ ಕಲ್ಪಿಸುವ ಮೂಲಕ ಅವರನ್ನು ಭವಿಷ್ಯದ ಪ್ರಜೆಗಳಾಗಿ ರೂಪುಗೊಳಿಸುವ ಅಗತ್ಯವಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಸ್ವಾಮೀಜಿಯವರು ಅಭಿಪ್ರಾಯಪಟ್ಟರು.

ಶ್ರೀಮಠದ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಗುರುಕುಲಗಳ ವಿದ್ಯಾರಂಭ ಸಮಾರಂಭದಲ್ಲಿ ಪರಮಪೂಜ್ಯರು ಆಶೀರ್ವಚನ ನೀಡಿದರು. ರಾಮಾಯಣದ ರಾಮ ಅಭಯ ಸ್ತೋತ್ರವನ್ನು ಆನ್‍ಲೈನ್ ಮೂಲಕ ಗುರುಕುಲದ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಮೂಲಕ ವಿದ್ಯಾರಂಭಕ್ಕೆ ಶ್ರೀಗಳು ಚಾಲನೆ ನೀಡಿದರು.
ಕಾದ ಕಬ್ಬಿಣದ ಮೇಲೆ ಮಳೆಹನಿ ಬಿದ್ದರೆ ಮಳೆಹನಿಯ ಅಸ್ತಿತ್ವವೇ ನಾಶವಾಗುತ್ತದೆ. ಅದೇ ಹನಿ ತಾವರೆ ಎಲೆ ಮೇಲೆ ಬಿದ್ದರೆ ಸೂರ್ಯ ರಶ್ಮಿಗೆ ಆವಿಯಾಗುವವರೆಗೂ ಮುತ್ತಾಗಿ ಕಂಗೊಳಿಸುತ್ತದೆ. ಆದರೆ ಸ್ವಾತಿ ಮಳೆ ಹನಿ, ಬಾಯ್ದೆರೆದ ಚಿಪ್ಪಿನ ಬಾಯಿಗೆ ಬಿದ್ದರೆ ನಿಜವಾದ ಮುತ್ತಾಗುತ್ತದೆ. ಹೀಗೆ ಉತ್ತಮ ಸಂಸರ್ಗದಿಂದ ವಿದ್ಯಾರ್ಥಿಗಳು ಕೂಡಾ ಭವಿಷ್ಯದ ಮುತ್ತಾಗಿ ಕಂಗೊಳಿಸಬಹುದು ಎಂದು ಹೇಳಿದರು.

RELATED ARTICLES  20ವರ್ಷದ ಬಳಿಕ ಮತ್ತೆ ಚಾಂಪಿಯನ್ ಆಯ್ತು ಫ್ರಾನ್ಸ್!

ಜೀವನದಲ್ಲಿ ಎಷ್ಟೇ ದೊಡ್ಡ ತಪ್ಪುಗಳನ್ನು ಮಾಡಿದರೂ, ಮತ್ತೆ ಒಳ್ಳೆಯದಾಗಲು ಅವಕಾಶವಿದೆ. ದಾಸಿಪುತ್ರನಾದ ಬಾಲಕ ನಾರದ ಉತ್ತಮ ಸಹವಾಸದಿಂದಾಗಿ ಬ್ರಹ್ಮರ್ಷಿಯಾಗಲು, ಬ್ರಹ್ಮನ ಮಾನಸಪುತ್ರನಾಗಲು ಸಾಧ್ಯವಾಯಿತು. ಇದೇ ನಾರದರ ಜತೆಗಿನ ಸಂವಾದ ಮಾತ್ರದಿಂದಲೇ
ಬೇಡನಾಗಿದ್ದ ರತ್ನಾಕರ ಕಾವ್ಯರ್ಷಿ ವಾಲ್ಮೀಕಿಯಾಗಲು ಸಾಧ್ಯವಾಯಿತು ಎಂದು ನಿದರ್ಶನ ಸಹಿತ ವಿವರಿಸಿದರು.
ಸಹವಾಸದಿಮದ ಜೀವನದಲ್ಲಿ ಎಷ್ಟು ಕೆಟ್ಟದಾಗಲು ಮತ್ತು ಎಷ್ಟು ಒಳ್ಳೆಯದಾಗಲು ಸಾಧ್ಯ ಎನ್ನುವುದಕ್ಕೆ ವಾಲ್ಮೀಕಿ ಒಳ್ಳೆಯ ಉದಾಹರಣೆ. ಭೃಗುವಂಶದಲ್ಲಿ ಜನಿಸಿದ ಅಗ್ನಿಶರ್ಮ, ಕಾಡಿನಲ್ಲಿ ಕಳೆದುಹೋಗಿ ಬೇಡ, ದರೋಡೆಕೋರರ ಕುಟುಂಬದಲ್ಲಿ ರತ್ನಾಕರನಾಗಿ ಬೆಳೆದು ಅದೇ ಪ್ರವೃತ್ತಿ ಬೆಳೆಸಿಕೊಂಡಿರುತ್ತಾನೆ. ಬಳಿಕ ನಾರದರ ಸಂಪರ್ಕದಿಂದ, ಅವರ ಜತೆಗಿನ ಸಂವಾದದಿಂದ ಮಹರ್ಷಿಯಾಗಿ ಬದಲಾಗಿ ರಾಮಚರಿತೆಯನ್ನು ವಿಶ್ವಕ್ಕೆ ನೀಡಲು ಸಾಧ್ಯವಾಯಿತು ಎಂದು ಬಣ್ಣಿಸಿದರು.

ಮಕ್ಕಳು ಯಾವ ಪರಿಸರದಲ್ಲಿ ಬೆಳೆಯುತ್ತಾರೋ ಅವರಿಗೆ ಅದೇ ಸಂಸ್ಕಾರ ಸಿಗುತ್ತದೆ. ಗುಣ- ದೋಷಗಳು ಬರುವುದು ಸಂಸರ್ಗದಿಂದಲೇ. ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳು ಅನೇಕ ಸಾಧಕರ, ಸಾತ್ವಿಕರ, ಗೋ ಸಂಕುಲದ, ಗುರು, ದೇವರ, ಪುಣ್ಯ ವೃಕ್ಷಗಳ ಸಹವಾಸದಲ್ಲಿ ಬೆಳೆಯುತ್ತಾರೆ. ಈ ಒಳಿತಿನ ಸಂಗ ವಿದ್ಯಾರ್ಥಿಗಳ ಭವಿಷ್ಯದ ಜೀವನಕ್ಕೆ ಶಕ್ತಿಯಾಗಿ ಪರಿಣಮಿಸುತ್ತದೆ ಎಂದು ಹೇಳಿದರು.
ಒಳ್ಳೆಯವರು, ಸಾತ್ವಿಕರ ಜತೆ ಒಡನಾಟ, ಆಹಾರ ವಿಹಾರ, ಸಂವಾದ, ಮಾತುಕತೆ ರೂಢಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

RELATED ARTICLES  ಉಡುಪಿ: ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣ – ವಿದ್ಯಾರ್ಥಿನಿ ಆತ್ಮಹತ್ಯೆ

ವಿದ್ಯಾ ಪರಿಷತ್ ಅಧ್ಯಕ್ಷ ಎಂ.ಆರ್.ಹೆಗಡೆ, ಉಪಾಧ್ಯಕ್ಷ ಮರುವಳ ನಾರಾಯಣ ಭಟ್, ಆಡಳಿತಾಧಿಕಾರಿ ಸುರೇಂದ್ರ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ವಿವಿವಿ ವಿದ್ಯಾ ಪರಿಷತ್ ಕಾರ್ಯದರ್ಶಿ ನೀಲಕಂಠ ಯಾಜಿ ಸ್ವಾಗತಿಸಿದರು. ಡಿ.ಡಿ.ಶರ್ಮಾ ಮತ್ತು ಸತ್ಯನಾರಾಯಣ ಶರ್ಮಾ ಫಲ ಸಮರ್ಪಿಸಿದರು. ವರಿಷ್ಠಾಚಾರ್ಯ ಎಸ್.ಜಿ.ಭಟ್ ಕಬ್ಬಿನಗದ್ದೆ ಕಾರ್ಯಕ್ರಮ ನಿರೂಪಿಸಿದರು.