ಕಾರವಾರ : ವಾಹನ ಸೌಕರ್ಯವೇ ಇಲ್ಲದ ತಾಲ್ಲೂಕಿನ ಅಮದಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ದಟ್ಟಾರಣ್ಯದ ಮಧ್ಯ ಭಾಗದಲ್ಲಿರುವ ಗ್ರಾಮ ಮಚ್ಚಳ್ಳಿ. ಈ ಗ್ರಾಮಕ್ಕೆ ವಾಹನ ಸೌಕರ್ಯ ಕಲ್ಪಿಸುವುದೂ ಕಷ್ಟ ಸಾಧ್ಯವಾದ ಕೆಲಸ.
ಕಾರವಾರದ ಕುಗ್ರಾಮ ಮಚ್ಚಳ್ಳಿಯಲ್ಲಿ ಅನಾರೋಗ್ಯಕ್ಕೊಳಗಾದ ವೃದ್ಧೆಯೋರ್ವರನ್ನು ಕುರ್ಚಿಯ ಜೋಲಿಯಲ್ಲಿ ಸುಮಾರು 7 ಕಿ.ಮೀ ಕಡಿದಾದ ಕಾಡುದಾರಿಯಲ್ಲಿ ಹೊತ್ತು ತಂದು ಆಸ್ಪತ್ರೆ ಸೇರಿಸಿರುವ ಮನ ಕಲಕುವ ಘಟನೆ ವರದಿಯಾಗಿದೆ.
ಮಚ್ಚಳ್ಳಿಯಲ್ಲಿ ನೇಮಿಗೌಡ ಎನ್ನುವವರು ಅನಾರೋಗ್ಯಕ್ಕೊಳಗಾಗಿದ್ದರು. ರಸ್ತೆ ಸಂಪರ್ಕ ಇಲ್ಲದ ಕಾರಣ ಗ್ರಾಮಕ್ಕೆ ಯಾವುದೇ ಆಂಬ್ಯುಲೆನ್ಸ್ ಅಥವಾ ಇತರೆ ವಾಹನ ಬರಲು ಸಾಧ್ಯವಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಗ್ರಾಮದ ಯುವಕರೇ ಸೇರಿ ಪ್ಲಾಸ್ಟಿಕ್ ಕುರ್ಚಿಯೊಂದನ್ನು ಕೋಲಿಗೆ ಬಳ್ಳಿಯ ಸಹಾಯದಿಂದ ತೊಟ್ಟಿಲಿನ ರೀತಿಯಲ್ಲಿ ಕಟ್ಟಿಕೊಂಡು ಅದರಲ್ಲಿ ವೃದ್ಧೆಯನ್ನು ಕೂರಿಸಿ ಹೆಗಲ ಮೇಲೆ ಹೊತ್ತು ಅಮದಳ್ಳಿ ಗ್ರಾಮವನ್ನು ತಲುಪಿ, ಬಳಿಕ ಅಲ್ಲಿಂದ ವಾಹನದ ಮೂಲಕ ಆಸ್ಪತ್ರೆ ತಲುಪಿಸುವ ಮಾನವೀಯ ಕಾರ್ಯ ಮಾಡಿದ್ದಾರೆ.
ಇವರೆಲ್ಲರ ಮಾನನೀಯ ಹಾಗೂ ಮಾನವೀಯ ಕಾರ್ಯದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ವೃದ್ಧೆಗೆ ಚಿಕಿತ್ಸೆ ಲಭಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಕಾರವಾರ ತಾಲ್ಲೂಕಿನ ಅಮದಳ್ಳಿ ಗ್ರಾಮದಿಂದ ಸುಮಾರು 10 ಕಿ.ಮೀ ದೂರದಲ್ಲಿ ಗುಡ್ಡದ ಮೇಲಿರುವ ಮಚ್ಚಳ್ಳಿ ಗ್ರಾಮಕ್ಕೆ ವಾಹನ ಸಂಚಾರ ಅಸಾಧ್ಯವಾಗಿದ್ದು, ಹತ್ತು ಕಿಲೋಮೀಟರ್ ಕಡಿದಾದ ದುರ್ಗಮ ರಸ್ತೆಯಲ್ಲಿ ಕಾಲು ನಡಿಗೆಯಲ್ಲೇ ಬರಬೇಕು. ಅದರಲ್ಲೂ ಮಳೆಗಾಲ ಪ್ರಾರಂಭವಾದ ಬಳಿಕ ಸಂಚಾರಕ್ಕೆ ಇಲ್ಲಿ ಹರಸಾಹಸ ಪಡಬೇಕು.
ಕಠಿಣ ಪರಿಸ್ಥಿತಿಯಲ್ಲಿಯೂ ವೃದ್ಧೆಯನ್ನು ಆಸ್ಪತ್ರೆಗೆ ಸೇರಿಸುವಲ್ಲಿ ಯಶಸ್ವಿಯಾದ ಎಲ್ಲರಿಗೆ ಕುಟುಂಬಸ್ಥರು ಧನ್ಯವಾದ ಸಮರ್ಪಿಸಿದ್ದಾರೆ.