ಕುಮಟಾ: ಜಾನುವಾರುಗಳ ಅಕ್ರಮ ಸಾಗಾಟ ಜಾಲ ಮತ್ತೆ ತನ್ನ ಕಾರ್ಯ ಪ್ರಾರಂಭಿಸಿದಂತಿದ್ದು, ನಿನ್ನೆ 14 ದನಗಳನ್ನು ಸಾಗಿಸುವಾಗ ಪೊಲೀಸ್ ರು ಆರೋಪಿತರನ್ನು ಬಂಧಿಸಿ, ಜಾನುವಾರುಗಳನ್ನು ರಕ್ಷಿಸಿದ ಘಟನೆ ವರದಿಯಾಗಿತ್ತು. ಇಂದೂ ಸಹ ಕೋಣಗಳ ಅಕ್ರಮ ಸಾಗಾಟ ಪ್ರಕರಣ ವರದಿಯಾಗಿದೆ.
ರವಿವಾರ ಹೀರೆಗುತ್ತಿ ಚೆಕ್ ಪೋಸ್ಟ್ ನಲ್ಲಿ ಲಾರಿಯೊಂದರಲ್ಲಿ ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಕೋಣಗಳನ್ನು ಸಾಗಿಸುತ್ತಿದ್ದ ಮೂವರನ್ನು ಪೋಲಿಸರು ವಶಕ್ಕೆ ಪಡೆದು ಕೋಣಗಳನ್ನು ರಕ್ಷಿಸಿದ ಘಟನೆ ನಡೆದಿದೆ.
ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ 2 ಲಕ್ಷ ಸುಮಾರು ಮೌಲ್ಯದ 13 ಕಪ್ಪು ಮತ್ತು ಕಂದು ಬಣ್ಣದ ಕೋಣಗಳನ್ನು ಹಿಂಸಾತ್ಮಕವಾಗಿ ತುಂಬಿಕೊಂಡು ಸಾಗಿಸುತ್ತಿರುವುದು ಪತ್ತೆಯಾಗಿದೆ.
ಲಾರಿಯಲ್ಲಿದ್ದವರನ್ನು ವಿಚಾರಿಸಿದಾಗ ಕೋಣಗಳನ್ನು ಸಾಗಾಟ ಮಾಡಲು ಯಾವುದೇ ಪರವಾನಿಗೆ ಇಲ್ಲದಿರುವುದು ತಿಳಿದು ಬಂದಿದ್ದು,ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಹಿಂಸ್ಮಾತಕವಾಗಿ ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.
ಚಿಕ್ಕಬಳ್ಳಾಪುರ ಮೂಲದ ಲಾರಿ ಚಾಲಕ ಅಹಮ್ಮದ್ ಅಜೀಬ್ ಸಾಬ, ಮಂಡ್ಯದ ರವಿ ಕುಮಾರ್, ಹಾವೇರಿಯ ಅನಿಲಕುಮಾರ ಪಾಟೀಲ್, ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳನ್ನು ಹಾಗೂ ಲಾರಿಯನ್ನು ವಶಕ್ಕೆ ಪಡೆದಿದ್ದು ಕೋಣಗಳನ್ನು ಹಿಂಸಾತ್ಮಕ ರೀತಿಯಲ್ಲಿ ಲಾರಿಗೆ ತುಂಬಿದ ಪರಿಣಾಮ13 ರಲ್ಲಿ ಒಂದು ಕೋಣ ಮೃತಪಟ್ಟಿದೆ ಎನ್ನಲಾಗಿದೆ. 12 ಕೋಣಗಳನ್ನು ರಕ್ಷಿಸಲಾಗಿದೆ.
ಈ ಕುರಿತು ಗೋಕರ್ಣ ಠಾಣೆ ಪಿ ಎಸ್ ಐ ನವೀನ್ ಕುಮಾರ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಲಿದ್ದಾರೆ.