ಭಟ್ಕಳ: ವೀಸಾ ಹೊಂದದೆ ವಾಸ್ತವ್ಯ ಮಾಡಿದ ಆರೋಪಿಯನ್ನು ಭಟ್ಕಳದಲ್ಲಿ ಹೆಡೆಮುರಿ ಕಟ್ಟಿದ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಪಾಕ್ ಹಾಗೂ ಇತರೆಡೆಗಳಿಂದ ಬರುತ್ತಿದ್ದ ಫೋನ್ ಕಾಲ್ ಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತನೆ ಮಾಡುವ ಜಾಲಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಭಟ್ಕಳದಲ್ಲಿ ಬಂಧಿಸಿ, ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ಭಟ್ಕಳ ತಾಲೂಕಿನ ನವಾಯತ್ ಕಾಲೋನಿಯ ತಕಿಯಾ ಸ್ಟ್ರೀಟ್ ನಿವಾಸಿ ನಿಸಾರ್ ಮಹಮ್ಮದ್ ಬಂಧಿತ ಆರೋಪಿ ಎಂದು ಸ್ಥಳೀಯ ಸುದ್ದಿಪತ್ರಿಕೆ ವರದಿಮಾಡಿದೆ.
ಅನಧಿಕೃತ ಟೆಲಿಫೋನ್ ಎಕ್ಸ್ಚೇಂಜ್ ಮೂಲಕ ಐಎಸ್ಡಿ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುವ ಜಾಲವನ್ನು ಬೆಂಗಳೂರಿನ ಬಿಟಿಎಂ ಲೇಔಟ್ನಲ್ಲಿ ಗುರುತಿಸಿ ಈ ಸಂಬಂಧ ಇಬ್ರಾಹಿಂ ಮತ್ತು ಗೌತಮ್ ಎಂಬುವರನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಅವರ ಬಂಧನವಾಗುತ್ತಿದ್ದಂತೆ ನಿಸಾರ್ ಬೆಂಗಳೂರಿನಿಂದ ಭಟ್ಕಳಕ್ಕೆ ಬಂದಿದ್ದ ಎನ್ನಲಾಗಿದೆ. ಆರೋಪಿ ನಿಸಾರ್ ಒಂದೇ ಬಾರಿಗೆ 32 ಸಿಮ್ ಕಾರ್ಡ್‌ಗಳನ್ನು ಬಳಸುವ ಸಿಮ್ ಬಾಕ್ಸ್ ಹೊಂದಿದ್ದ ಎಂದು ತಿಳಿದು ಬಂದಿದೆ.
ಪಾಕಿಸ್ತಾನ, ಯುಎಇ ಸೇರಿದಂತೆ ವಿವಿಧ ದೇಶಗಳಿಂದ ಬರುವ ಕರೆಗಳನ್ನು ಸ್ಥಳೀಯ ಕರೆಗಳಾಗಿ ಮಾರ್ಪಾಡು ಮಾಡುವ ದಂಧೆಯಲ್ಲಿ ಆರೋಪಿಗಳು ತೊಡಗಿಸಿಕೊಂಡಿದ್ದು ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು ಎಂದು ಪ್ರಾಥಮಿಕ ಮಾಹಿತಿ ಬಂದಿದೆ.
ಈಗಾಗಲೇ ಆರೋಪಿಗಳಿಂದ 30 ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಅಳವಡಿಸಲಾಗಿದ್ದ, 960 ಸಿಮ್ ಕಾರ್ಡ್ ಗಳನ್ನು ಜಪ್ತಿ ಮಾಡಿಕೊಂಡಿದ್ದ ಎಟಿಸಿ ಅಧಿಕಾರಿಗಳು ಮತ್ತೆ ಬಿಟಿಎಂ ಲೇಔಟ್‌ನಲ್ಲಿದ್ದ ಇಬ್ರಾಹಿಂಗೆ ಸೇರಿದ ಜಾಗದಿಂದ ಇನ್ನೂ 15 ಸಿಮ್ ಬಾಕ್ಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಪ್ರಕರಣದಲ್ಲಿ ಬೆಂಗಳೂರಿನಲ್ಲಿ ಬಂಧಿತರಾಗಿರುವ ಇಬ್ರಾಹಿಂ ಹಾಗೂ ಗೌತಮ್ ಬಾಯ್ಬಿಟ್ಟ ಮಾಹಿತಿ ಆಧರಿಸಿ ಎಟಿಸಿ ತಮಿಳುನಾಡು ಮೂಲದ ನಾಲ್ವರನ್ನು ವಶಕ್ಕೆ ಪಡೆದುಕೊಂಡು ಅವರನ್ನು ನಗರಕ್ಕೆ ಕರೆತಂದಿದ್ದಾರೆ.
ಇವರು ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಮಾರ್ಪಡಿಸಲು ಬೇಕಾದ ಸಿಮ್ ಕಾರ್ಡ್‌ಗಳನ್ನು ತಮಿಳುನಾಡು, ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದ ಪಡೆದು ಕೊರಿಯರ್ ಮುಖಾಂತರ ತಲುಪಿಸುತ್ತಿದ್ದರು ಎಂದು ತಿಳಿದುಬಂದಿದೆ. ಈ ರೀತಿ ಇದುವರೆಗೂ ಎಷ್ಟು ಸಿಮ್ ಕಾರ್ಡ್‌ಗಳನ್ನು ಪಡೆಯಲಾಗಿದೆ?, ಕೃತ್ಯದಲ್ಲಿ ಇನ್ನಿತರರ ಪಾತ್ರಗಳ ಬಗ್ಗೆ ಆರೋಪಿಗಳಿಂದ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಪಾಕಿಸ್ತಾನ, ದುಬೈನಿಂದ ಭಾರತೀಯ ಸೇನಾಧಿಕಾರಿಗಳ ಕಚೇರಿಗಳಿಗೆ ತಾವು ನಿವೃತ್ತ ಮಿಲಿಟರಿ ಅಧಿಕಾರಿಗಳು ಪರಿಚಯಿಸಿಕೊಂಡು ಫೋನ್ ಮಾಡುತ್ತಿದ್ದ ಅಪರಿಚಿತರು ಕರ್ನಲ್ ಸೇರಿದಂತೆ ಕೆಲ ಪ್ರಮುಖ ಮಿಲಿಟರಿ ಅಧಿಕಾರಿಗಳ ವಿಳಾಸ ಕೇಳುತ್ತಿದ್ದರು. ಉಗ್ರಗಾಮಿಗಳ ಜೊತೆ ನೇರಾನೇರ ಸಂಪರ್ಕ ಹೊಂದಿದ್ದರಾ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.