ಕುಮಟಾ : ಮಾಹಿತಿಯನ್ನು ಪಡೆಯುವುದು ಸಾರ್ವಜನಿಕರ ಅಧಿಕಾರವಾಗಿದೆಯೆಂದು ಸರ್ಕಾರವು 2005 ನೇ ವರ್ಷದಲ್ಲಿ ಮಾಹಿತಿ ಹಕ್ಕು ಅಧಿನಿಯಮವನ್ನು ಜಾರಿಗೊಳಿಸಿದೆ. ಈ ಕಾಯಿದೆಯ ಅಡಿಯಲ್ಲಿ ಭಾರತದ ನಾಗರಿಕರಿಗೆ ದೇಶದ ಯಾವುದೇ ಸಂಸ್ಥೆಯಲ್ಲಿ ನಡೆಯುತ್ತಿರುವ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಲು ಮತ್ತು ಮುದ್ರಿತ ರೂಪದಲ್ಲಿ ಬೇಕಾಗಿರುವ ಮಾಹಿತಿಯನ್ನು ಪಡೆಯಲು ಅವಕಾಶವಿದೆ. ಆದರೆ ಇತ್ತೀಚೆಗೆ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ  ಅಥವಾ ಅಪೂರ್ಣ ಮಾಹಿತಿ ನೀಡುವ ಮೂಲಕ ಮಾಹಿತಿ ಹಕ್ಕು ಅಧಿನಿಯಮವನ್ನು ತಪ್ಪುದಾರಿಗೆ ಕೊಂಡೊಯ್ಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಹೀಗೆ ತಪ್ಪು ಮಾಹಿತಿ ನೀಡಿ ಇಕ್ಕಟ್ಟಿಗೆ ಸಿಲುಕಿದ್ದಾರೆ ಕೋಡಕಣಿ ಗ್ರಾಮ ಪಂಚಾಯತ ಕಾರ್ಯದರ್ಶಿ ಮತ್ತು ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿಯಾಗಿರುವ ತಿರುಮಲೇಶ.

ಮಾಹಿತಿ ಹಕ್ಕು ಕಾರ್ಯಕರ್ತರಾದ ಕೋಡಕಣಿಯ ಅರವಿಂದ ಶ್ಯಾನಭಾಗ, ಬಾಳೇರಿಯವರು 25 ಮಾರ್ಚ 2021 ರಂದು ಕೋಡಕಣಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಎಪ್ರೀಲ್ 2016 ರಿಂದ ಮಾರ್ಚ 2021 ರವರೆಗೆ ವಿವಿಧ ರೀತಿಯ ಕರಗಳನ್ನು ಪಾವತಿಸಿದವರ ಮತ್ತು ಪಾವತಿಸದೇ ಇರುವವರ ಹೆಸರು ಮತ್ತು ಮೊಬಲಗು ಮಾಹಿತಿಯೊಂದಿಗೆ ಕರಬಾಕಿ ಉಳಿಸಿಕೊಂಡಿರುವ ಗ್ರಾಮಸ್ಥರಿಂದ ಹಣಸಂದಾಯ ಮಾಡಿಸಿಕೊಳ್ಳಲು ಗ್ರಾಮ ಪಂಚಾಯತಿಯು ಕೈಗೊಂಡಿರುವ ಕ್ರಮಗಳ ಕುರಿತಾದ ಮಾಹಿತಿಯನ್ನು ಕೇಳಿದ್ದರು. ಇದಕ್ಕೆ ಪ್ರತಿಯಾಗಿ ಕೋಡಕಣಿ ಗ್ರಾಮ ಪಂಚಾಯತದ ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿ 29 ಮೇ 2021 ರಂದು 33 ಪುಟಗಳ ಮಾಹಿತಿಯನ್ನು ನೀಡಿರುತ್ತಾರೆ. ಮೇಲ್ನೋಟಕ್ಕೆ ಮಾಹಿತಿ ಸರಿ ಇರುವಂತೆ ಕಂಡುಬಂದರೂ, ಪ್ರತ್ಯೇಕವಾಗಿ ಕರದಾತರು ಪಾವತಿಸಿದ ರಶೀದಿಯೊಂದಿಗೆ ತಾಳೆ ಹಾಕಿ ನೋಡಿದಾಗ ಗ್ರಾಮ ಪಂಚಾಯತದ ಕಾರ್ಯದರ್ಶಿ ನೀಡಿರುವ ಮಾಹಿತಿ ತಪ್ಪೆನ್ನುವದು ಅರ್ಜಿದಾರರಾದ ಅರವಿಂದ ಶ್ಯಾನಭಾಗ, ಬಾಳೇರಿಯವರ ಗಮನಕ್ಕೆ ಬಂದಿದೆ. ಈ ಕುರಿತು ಅಧಿಕಾರಿಯವರನ್ನು ವಿಚಾರಿಸಿದರೆ ಅದು ವೆಬ್‍ಸೈಟ್‍ನಿಂದ ತೆಗೆದುಕೊಟ್ಟಿರುವದರಿಂದ ಹಾಗಾಗಿದೆ, ಡಾಟಾ ಎಂಟ್ರಿಯವರ ಕಣ್ತಪ್ಪು ಎನ್ನುವುದಾಗಿ ಸಮಜಾಯಿಷಿ ನೀಡಿದ್ದಾರೆ. ಈ ಉತ್ತರದಿಂದ ಸಮಾಧಾನಿತರಾಗದ ಅರವಿಂದ ಶ್ಯಾನಭಾಗರು ತಪ್ಪು ಮತ್ತು ಅಪೂರ್ಣ ಮಾಹಿತಿ ನೀಡಿರುವ ಕಾರ್ಯದರ್ಶಿಯ ವಿರುದ್ಧ ಪ್ರಥಮ ಮೇಲ್ಮನವಿ ಪ್ರಾಧಿಕಾರಿಯಾಗಿರುವ ಕೋಡಕಣಿ ಗ್ರಾಮ ಪಂಚಾಯತದ ಅಭಿವೃದ್ಧಿ ಅಧಿಕಾರಿಯವರಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.

RELATED ARTICLES  ಕಾರು ಪಲ್ಟಿಯಾಗಿ ಗಟಾರಕ್ಕೆ ಬಿದ್ದು ಕಾರಿನಲ್ಲಿದ್ದವರಿಗೆ ಪೆಟ್ಟು.

ಕೇಳಿರುವ ಮಾಹಿತಿ 2016 ರಿಂದ 2021 ರ ವರ್ಷಗಳಿಗೆ ಸಂಬಂಧಪಟ್ಟಿದ್ದಾದರೂ ಮಾಹಿತಿ ಅಧಿಕಾರಿ ನೀಡಿರುವುದು 2020-21 ನೇ ವರ್ಷದ್ದು. 30 ದಿನಗಳಲ್ಲಿ ನೀಡಬೇಕಾದ ಮಾಹಿತಿಯನ್ನು 64 ದಿನಗಳಷ್ಟು ಸುದೀರ್ಘ ಅವಧಿಯನ್ನು ತೆಗೆದುಕೊಂಡರೂ ತಪ್ಪಾಗಿ ನೀಡಲಾಗಿದೆ. ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸಂಗ್ರಹಿಸುವ ಎಲ್ಲಾ ವಿಧದ ಕರಗಳ ಮಾಹಿತಿಯನ್ನು ನೀಡಿಲ್ಲ. 178 ರೂಪಾಯಿ ಕರ ಪಾವತಿಸಿದವರ ಮಾಹಿತಿಯು 128 ರೂಪಾಯಿ ಎಂದು ತೋರಿಸಲಾಗಿದೆ. ಹಾಗೆಯೇ 183 ರೂಪಾಯಿ ಕರ ಪಾವತಿಸಿದವರ ಮಾಹಿತಿ 363 ರೂಪಾಯಿ ಪಾವತಿಸಿದ್ದಾಗಿ ನಮೂದಿಸಲಾಗಿದೆ. ಧಾರ್ಮಿಕ ಕ್ಷೇತ್ರಗಳಿಗೆ ಕರದ ಆಕರಣೆಯಿರುವುದಿಲ್ಲವಾದರೂ ಶ್ರೀ ವಿಶ್ವಂಭರ ದೇವಾಲಯ ಸೇವಾ ಟ್ರಸ್ಟ್‍ನಿಂದ 2821 ರೂಪಾಯಿ ವಸೂಲಿ ಮಾಡಲಾಗಿದೆ. ವಿಶ್ವಂಭರ ದೇವಾಲಯದ ಸಬಾಭವನವು ನಿರ್ಮಾಣದ ಹಂತದಲ್ಲಿದ್ದು ಪ್ರಸ್ತುತ ಸಾಲಿನಲ್ಲಿ ಯಾವುದೇ ವಿವಾಹ ಇನ್ನಿತರ ಕಾರ್ಯಗಳು ನಡೆಯದೇ ಇದ್ದಾಗ ಇಷ್ಟೊಂದು ಮೊತ್ತದ ಕರದ ಆಕರಣೆ ಪ್ರಶ್ನಾರ್ಹವಾಗಿದೆ. ನೋಂದಾಯಿತ ಸೇವಾ ಟ್ರಸ್ಟ್‍ನವರು ಗ್ರಾಮ ಪಂಚಾಯತಿಗೆ ಕರ ಪಾವತಿಸಬೇಕಾದ ಅಗತ್ಯವಿದೆಯೇ ಎನ್ನುವದೂ ವಿಮರ್ಶೆಗೆ ಕಾರಣವಾಗಿದೆ. ವೀರವಿಟ್ಟಲ ದೇವಸ್ಥಾನ ಕಟ್ಟಡದ ಕೆನರಾ ಬ್ಯಾಂಕಿಗೆ 3829 ರೂಪಾಯಿ ಕರ, ದೂರವಾಣಿ ಕೇಂದ್ರಕ್ಕೆ 2977 ಕರ, ಸಂತ ಜೋಸೆಫರ ಚರ್ಚಿನ ಧರ್ಮಗುರುಗಳ ಕಟ್ಟಡಕ್ಕೆ 544 ರೂಪಾಯಿ ಕರವನ್ನು ಸ್ವೀಕರಿಸಲಾಗಿದೆ ಎನ್ನುವುದು ಮಾಹಿತಿ ಹಕ್ಕಿನಡಿ ನೀಡಿದ ಮಾಹಿತಿಯಲ್ಲಿದೆ. ಆದರೆ ಈ ಪಟ್ಟಿಯಲ್ಲಿ ಕೋಡಕಣಿ ಗ್ರಾಮದ ಅಧಿದೇವಿಯಾದ ಶ್ರೀ ಶಾಂತಿಕಾ ಪರಮೇಶ್ವರಿ ಮತ್ತು ಶ್ರೀ ಜಟಕ ಮಹಾಸತಿ ದೇವಸ್ಥಾನದ ಉಲ್ಲೇಖಗಳಿಲ್ಲ. ಗ್ರಾಮದ ಕೆಲವು ಅಂಗಡಿ ಮಾಲಿಕರಿಂದ ಕರವನ್ನು ಆಕರಿಸಲಾಗಿದೆ. ಇನ್ನುಳಿದ ಕರ ಪಾವತಿಸದ ಅಂಗಡಿಗಳು ಅನಧಿಕೃತವೇ? ಹಾಗಾದರೆ ಇವರಿಗೆ ಅನುಮತಿಯನ್ನು ನೀಡಿದ ಪ್ರಾಧಿಕಾರಿ ಯಾರು? ಇಂಥಹ ಸವಾಲುಗಳಿಗೆ ಪಿ.ಡಿ.ಓ. ಕೂಡ ಸಮರ್ಪಕವಾಗಿ ಉತ್ತರಿಸುತ್ತಿಲ್ಲ. ಒಟ್ಟಿನಲ್ಲಿ ಮಾಹಿತಿ ಹಕ್ಕಿನಡಿ ಪಡೆದ ಮಾಹಿತಿಯು ಸಂದೇಹಗಳನ್ನು ನಿವಾರಿಸುವುದಕ್ಕಿಂತ ಹೊಸ ಪ್ರಶ್ನೆಗಳನ್ನು ಹುಟ್ಟು ಹಾಕುವಂತಿದೆ. ಹತ್ತು ವರ್ಷಗಳಿಗೂ ಅಧಿಕ ಸಮಯದಿಂದ ಕೋಡಕಣಿಯ ಗ್ರಾಮ ಪಂಚಾಯತ ಕಾರ್ಯದರ್ಶಿಯಾಗಿರುವ ಮಾಹಿತಿ ಹಕ್ಕು ಅಧಿಕಾರಿಯು ನೀಡಿರುವ ಈ ತಪ್ಪು ಮಾಹಿತಿಯು ಅಧಿನಿಯಮದ ಸ್ಪಷ್ಟ ಉಲ್ಲಂಘನೆಯಾಗಿದ್ದನ್ನು ಎತ್ತಿ ತೋರಿಸಿದೆ.

RELATED ARTICLES  ಬಿಎಸ್ಸಿ ಪ್ರಥಮ ಸೆಮಿಸ್ಟರ್ ಪರೀಕ್ಷೆ: ಶಿರಾಲಿ ಸಿದ್ದಾರ್ಥ ಕಾಲೇಜ್ ಶೇ.100 ಫಲಿತಾಂಶ

ಈ ಎಲ್ಲ ಕಾರಣಗಳಿಂದ ಆರ್.ಟಿ.ಐ. ಕಾರ್ಯಕರ್ತರಾಗಿರುವ ಅರವಿಂದ ಶ್ಯಾನಭಾಗರು ತಪ್ಪು ಮತ್ತು ಅಪೂರ್ಣ ಮಾಹಿತಿ ನೀಡಿರುವ ಅಧಿಕಾರಿಗೆ 25000 ರೂಪಾಯಿ ಗರಿಷ್ಟ ದಂಡ ವಿಧಿಸುವಂತೆ ರಾಜ್ಯ ಮಾಹಿತಿ ಆಯೋಗಕ್ಕೂ ಅಪೀಲು ಹೋಗಲು ತೀರ್ಮಾನಿಸಿದ್ದಾರೆ. ಅಧಿಕಾರಿಯು ನೀಡುವ ಮಾಹಿತಿಯು ಸತ್ಯವಿರುತ್ತದೆ ಎಂದು ನಂಬುವ ಸಾಮಾನ್ಯ ಪ್ರಜೆಗೆ, ಇಂಥ ತಪ್ಪು ಮಾಹಿತಿಯಿಂದ ಮರ್ಮಾಘಾತವಾಗುತ್ತದೆ ಎನ್ನುವ ಅರವಿಂದ ಶ್ಯಾನಭಾಗರು ನಿಮ್ಮ ಕಛೇರಿಯಲ್ಲಿ ಲಭ್ಯವಿರುವ ಮಾಹಿತಿಯನ್ನು ಅರ್ಜಿದಾರರಿಗೆ ಪ್ರಾಮಾಣಿಕವಾಗಿ ನೀಡಿ ಎಂದಷ್ಟೇ ಆಗ್ರಹಿಸುತ್ತಿದ್ದಾರೆ.

ಅರವಿಂದ ಶ್ಯಾನಭಾಗ(ಮಾಹಿತಿ ಹಕ್ಕಿನಿಂದ ಮಾಹಿತಿ ಪಡೆದವರು) aravind