ಭಟ್ಕಳ: ಕರೋನಾ ಲಾಕ್ ಡೌನ್ ನಿಂದಾಗಿ ಕಳೆದೆರಡು ವರ್ಷಗಳಿಂದ ಪ್ರತಿದಿನ ದುಡಿದು ತಿನ್ನುವ ದುಡಿಮೆಯ ಮಾರ್ಗವನ್ನು ಕಳೆದುಕೊಂಡ ಶ್ರಮಿಕ ವರ್ಗದವರ ಪರಿಸ್ಥಿತಿ ನಿಜಕ್ಕೂ ಸಂಕಷ್ಟದಲ್ಲಿದೆ. ಇಂಥ ಸಂದರ್ಭದಲ್ಲಿ ತಾಲೂಕಿನ ಕಡುಬಡವರ ಸಹಾಯಕ್ಕೆ ನೆರಳಾಗಿ ಸ್ಪಂದನ ಸಂಸ್ಥೆ ದಾನಿಗಳ ಸಹಕಾರದಿಂದ ಕಡುಬಡತನದಲ್ಲಿರುವ ಕುಟುಂಬಗಳಿಗೆ ಉಚಿತ ಆಹಾರ ಕಿಟ್ ವಿತರಣೆ, ಆರ್ಥಿಕ ಸಹಾಯ ನೀಡುವಂತಹ ಮಾನವೀಯ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಇವರ ಪ್ರಾಮಾಣಿಕ ಸೇವೆಯನ್ನು ಮನಗಂಡು ಅನೇಕ ದಾನಿಗಳು ಆರ್ಥಿಕ ಸಹಾಯ ಮಾಡಿ ಇವರ ಕಾರ್ಯಕ್ಕೆ ಸ್ವಇಚ್ಛೆಯಿಂದಲೇ ಕೈಜೋಡಿಸುತ್ತಿರುವುದು ವಿಶೇಷ.
ಸಾಮಾಜಿಕ,ಶೈಕ್ಷಣಿಕ ಮತ್ತು ಔದ್ಯೋಗಿಕ ಮಾರ್ಗದರ್ಶನ ಮಾಡುವ ಉದ್ದೇಶದಿಂದ ಸಮಾನ ಮನಸ್ಕ ಸದಸ್ಯರಿಂದ ಸ್ಪಂದಿಸುವ ಕೈಗಳು ಎಂಬ ಧ್ಯೇಯ ವಾಕ್ಯದೊಂದಿಗೆ ಸ್ಪಂದನ ಸಂಸ್ಥೆ ಮೂರು ವರ್ಷದ ಹಿಂದೆ ಪ್ರಾರಂಭವಾಯಿತು. ಈ ಸಂಸ್ಥೆಯಲ್ಲಿ ಒಟ್ಟೂ ಹನ್ನೆರಡು ಜನ ಸದಸ್ಯರಿದ್ದು ರಾಘವೇಂದ್ರ ನಾಯ್ಕ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಭವಾನಿಶಂಕರ ನಾಯ್ಕ, ಕಾರ್ಯದರ್ಶಿಯಾಗಿ ಪಾಂಡುರAಗ ನಾಯ್ಕ, ಖಜಾಂಚಿಯಾಗಿ ಶಿವಾನಂದ ನಾಯ್ಕ, ಸದಸ್ಯರಾಗಿ ಭಾಸ್ಕರ ನಾಯ್ಕ, ಗಂಗಾಧರ ನಾಯ್ಕ, ಮಹೇಶ ನಾಯ್ಕ, ರಾಜೇಶ ನಾಯ್ಕ, ಈಶ್ವರ ನಾಯ್ಕ, ವೆಂಕಟೇಶ ನಾಯ್ಕ, ಜಗನ್ನಾಥ ನಾಯ್ಕ ಪರಮೇಶ್ವರ ನಾಯ್ಕ ಮುಂತಾದವರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಎಲ್ಲ ಸದಸ್ಯರು ಪ್ರತಿ ತಿಂಗಳು ಒಂದಿಷ್ಟು ಹಣವನ್ನು ಸಂಸ್ಥೆಯ ಖಾತೆಗೆ ವರ್ಗಾಯಿಸುವ ಮೂಲಕ ಸಂಪನ್ಮೂಲವನ್ನು ಕ್ರೋಢಿಕರಿಸುತ್ತಾರೆ. ಆ ಮೂಲಕ ಆದ್ಯತೆಯ ಮೇರೆಗೆ ವಿವಿಧ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಬಂದಿದ್ದಾರೆ.
ಈ ಬಾರಿಯ ಕರೋನಾ ಸಂಕಷ್ಟ ಸಂದರ್ಭದಲ್ಲಿ ಸಂಸ್ಥೆಯು ಇಪ್ಪತೈದು ಕರೋನಾ ಸೋಂಕಿತ ಕುಟುಂಬಗಳನ್ನೂ ಒಳಗೊಂಡಂತೆ ಇನ್ನೂರು ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ಜೊತೆಗೆ ಆರ್ಥಿಕ ಸಹಾಯವನ್ನು ನೀಡಿದೆ. ಸಂಸ್ಥೆಯು ದಾನಿಗಳಿಂದ ಸಂಗ್ರಹವಾದ ಹಣಕಾಸಿನ ವಿವರ ಹಾಗೂ ಅದನ್ನು ವ್ಯಯಿಸಿದ ವಿವರವನ್ನು ನೀಡಲು ಸುದ್ದಿಗೋಷ್ಠಿಯನ್ನು ಕರೆಯಲಾಗಿತ್ತು. ಸಂಸ್ಥೆಯು ಕೈಗೊಂಡ ಕಾರ್ಯಗಳ ಕುರಿತು ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ನಾಯ್ಕ ವಿವರಿಸಿ ಕರೋನಾ ಸಂಕಷ್ಟದಲ್ಲಿ ದಿನನಿತ್ಯದ ಕೆಲಸವಿಲ್ಲದೇ ದುಡಿಮೆಯನ್ನು ಕಳೆದುಕೊಂಡು ತೀರ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನಮ್ಮ ಮಿತಿಯಲ್ಲಿ ಸಾಧ್ಯವಾಗಬಹುದಾದ ಸಹಾಯವನ್ನು ಮಾಡಬೇಕೆಂದು ಯೋಚಿಸಿ ಕಾರ್ಯಪ್ರವೃತ್ತರಾದಾಗ ನಮ್ಮ ನಿರೀಕ್ಷೆಗೂ ಮೀರಿ ರಾಜ್ಯದ ಮೂಲೆ ಮೂಲೆಗಳಿಂದ ಮಾತ್ರವಲ್ಲದೇ ವಿದೇಶಗಳಲ್ಲಿ ನೆಲೆಸಿರುವ ಸ್ಥಳೀಯರೂ ನಮ್ಮೊಂದಿಗೆ ಕೈಜೋಡಿಸಿದ್ದರಿಂದಾಗಿ ಸುಮಾರು ೨೦೦ ಕುಟುಂಬಗಳಿಗೆ ಸುಮಾರು ಮೂರು ಲಕ್ಷದ ಎಂಬತ್ತಮೂರು ಸಾವಿರದಷ್ಟು ಮೌಲ್ಯದ ಆಹಾರದ ಕಿಟ್ ಹಾಗೂ ಆರ್ಥಿಕ ನೆರವನ್ನು ನೀಡಲು ಸಾಧ್ಯವಾಗಿದೆ. ಸ್ಪಂದನ ಸಂಸ್ಥೆಯ ಮೇಲೆ ನಂಬಿಕೆಯಿಟ್ಟು ಸಹಾಯ ಹಸ್ತ ಚಾಚಿದ ಎಲ್ಲ ದಾನಿಗಳಿಗೆ ಸಂಸ್ಥೆ ಸದಾ ಋಣಿಯಾಗಿದೆ. ದಾನಿಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ನಮಗೆ ನೆರವನ್ನು ನೀಡಿರುವಾಗ ಅವರ ಹಣ ಯಾವ ರೀತಿ ಖರ್ಚು ಮಾಡಿದ್ದೇವೆ ಎಂಬುದನ್ನು ತಿಳಿಸುವುದೂ ಕೂಡ ನಮ್ಮ ಕರ್ತವ್ಯ ಎಂದು ಭಾವಿಸಿ ಪತ್ರಿಕಾಗೋಷ್ಠಿ ಕರೆದು ಈ ಹಣಕಾಸಿನ ವಿವರವನ್ನು ಸಾರ್ವಜನಿಕರಿಗೆ ನೀಡುತ್ತಿದ್ದೇವೆ ಎಂದರಲ್ಲದೇ ಕರೋನಾ ನಂತರದ ದಿನಗಳಲ್ಲಿಯೂ ಸಹಾಯದ ಅಗತ್ಯವಿರುವ ಕುಟುಂಬಗಳನ್ನು ಗುರುತಿಸಿಕೊಂಡಿದ್ದು ನಮ್ಮಿಂದಾದ ನೆರವನ್ನು ಅವುಗಳಿಗೆ ನೀಡಲು ಯೊಚಿಸಿದ್ದೇವೆ ಎಂದು ಹೇಳಿದರು.
ಸಂಸ್ಥೆಯ ಸದಸ್ಯ ಗಂಗಾಧರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ದಾನಿಗಳಿಂದ ಸಂಗ್ರಹವಾದ ಹಣ ಮತ್ತು ಸಂಸ್ಥೆಯು ಭರಿಸಿದ ಹಣಗಳ ವಿವರ ನೀಡಿ ೧೫೦ ಕ್ಕೂ ಹೆಚ್ಚಿನ ದಾನಿಗಳಿಂದ ಸಂಗ್ರಹವಾದ ೩,೩೪,೯೪೮/- ರೂಪಾಯಿ ಮತ್ತು ಸ್ಪಂದನ ಸಂಸ್ಥೆಯು ೪೮,೬೬೩ ರೂಗಳನ್ನು ಭರಿಸಿ ಒಟ್ಟೂ ೩,೮೩,೬೧೧/- ವೆಚ್ಛದಲ್ಲಿ ಭಟ್ಕಳ ತಾಲೂಕಿನ ವಿವಿದೆಡೆ ತೀರ ಅವಶ್ಯವಿರುವ ೨೦೦ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ಹಾಗೂ ಆರ್ಥಿಕ ಸಹಾಯವನ್ನು ನೀಡಲಾಗಿದೆ ಎಂದರು. ದುಡಿಮೆಯ ಮಾರ್ಗವನ್ನು ಕಂಡುಕೊಳ್ಳಲು ಬಡ ಕುಟುಂಬದ ಯುವತಿಯೋರ್ವಳಿಗೆ ಹೊಲಿಗೆ ಯಂತ್ರವನ್ನು ಸಂಸ್ಥೆಯ ಮೂಲಕ ನೀಡಿದ ವಿವರ ನೀಡಿದರು. ಪತ್ರಿಕಾ ಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಭವಾನಿಶಂಕರ ನಾಯ್ಕ, ಕಾರ್ಯದರ್ಶಿ ಪಾಂಡುರಂಗ ನಾಯ್ಕ, ಖಜಾಂಚಿ ಶಿವಾನಂದ ನಾಯ್ಕ, ಸದಸ್ಯರಾದ ಭಾಸ್ಕರ ನಾಯ್ಕ, ರಾಜೇಶ ನಾಯ್ಕ, ವೆಂಕಟೇಶ ನಾಯ್ಕ ಮಹೇಶ ನಾಯ್ಕ ಉಪಸ್ಥಿತರಿದ್ದರು.
ಒಟ್ಟಿನಲ್ಲಿ ಸ್ಪಂದನ ಸಂಸ್ಥೆಯ ಮಾನವೀಯ ಕಾರ್ಯಕ್ಕೆ ಎಲ್ಲೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.