ಗೋಕರ್ಣ: ಗೋಕರ್ಣದಲ್ಲಿ ಕೋಟಿತೀರ್ಥ ಅಭಿವೃದ್ಧಿ ಯೋಜನೆಗೆ ಸಚಿವ ಈಶ್ವರಪ್ಪ ಚಾಲನೆ ನೀಡಿದರು. ಗೋಕರ್ಣದ ಕೋಟಿತೀರ್ಥವು ಉತ್ತರದ ವಾರಣಾಸಿಯ ಪವಿತ್ರ ಗಂಗೆಯ ಸ್ಥಾನವನ್ನು ಪಡೆದಿದ್ದು, ಇದರ ಪುನರುಜ್ಜೀವನಗೊಳಿಸಲು ರಾಜ್ಯದ ಬಿಜೆಪಿ ಸರ್ಕಾರ ಹಣ ಮಂಜೂರಿ ಮಾಡಿದ್ದು, ಅದರ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಗೋಕರ್ಣದ ಕೋಟಿತೀರ್ಥದ ಸ್ವಚ್ಛತೆ ಹಾಗೂ ಅಭಿವೃದ್ಧಿಯಿಂದ ದೇಶಕ್ಕೆ ಒಳಿತಾಗಲಿದೆ ಎಂದು ಸಚಿವ ಈಶ್ವರಪ್ಪ ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಕೋಟಿತೀರ್ಥ ಅಭಿವೃದ್ಧಿ ಕಾಮಗಾರಿಗೆ 1.50 ಕೋಟಿ ಮಂಜೂರು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಕ್ಷೇತ್ರಕ್ಕೆ ಆಗಮಿಸುವ ಯಾತ್ರಿಕರನ್ನು, ಪಿತೃ ಕಾರ್ಯಾದಿಗಳನ್ನು ನಡೆಸುವ ಭಕ್ತರಿಗೆ ಅನುಕೂಲ ಒದಗಿಸುವ ಹಿನ್ನೆಲೆಯಲ್ಲಿ ಇಲ್ಲಿ ಕೊಳದ ಹೂಳೆತ್ತುವಿಕೆ ಸುಸಜ್ಜಿತ ಸ್ನಾನಗೃಹ, ಶೌಚಾಗೃಹ, ಮಹಿಳೆಯರಿಗೆ ಪ್ರತ್ಯೇಕ ಕೊಠಡಿ, ಸೋಲಾರ್ ವಿದ್ಯುತ್ ಅಳವಡಿಸುವಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಕೋಟಿತೀರ್ಥದ ನೀರಿನ ಶುದ್ಧೀಕರಣ ತಾಂತ್ರಿಕತೆ ಒಳಗೊಂಡಿದ್ದು ಕ್ಷೇತ್ರದ ಪಾವಿತ್ರತ್ರ್ಯ ಮೆರಗು ನೀಡುವಂತಾಗಲಿ ಎಂದು ಹೇಳಿದರು.
ರಾಘವೇಶ್ವರ ಶ್ರೀಗಳ ಮಾತು ಸ್ಮರಿಸಿದ ಸಚಿವರು : ಈ ಹಿಂದೆ ಗೋಕರ್ಣ ಬಂದಾಗ ಶ್ರೀ ರಾಘವೇಶ್ವರ ಸ್ವಾಮೀಜಿಗಳು ಕೋಟಿತೀರ್ಥದ ಮಹತ್ವ ತಿಳಿಸಿ ಅಭಿವೃದ್ಧಿ ಬಗ್ಗೆ ನನಗೆ ಸೂಚಿಸಿದ್ದರು. ಶ್ರೀ ಮಹಾಬಲೇಶ್ವರ ದೇವರ ಅಭೀಷ್ಟೆ ಹಾಗೂ ಶ್ರೀ ರಾಘವೇಶ್ವರ ಶ್ರೀಗಳ ಇಚ್ಛೆಯಂತೆ ಕೋಟಿತೀರ್ಥದ ಅಭಿವೃದ್ಧಿಗೆ ಕಾಲಕೂಡಿಬಂದಿದೆ. ಈ ಹಿಂದೆಕಾಶಿಯೂ ಗಲೀಜಿನಿಂದ ಕೂಡಿತ್ತು ಈಗ ಕಾಶಿಯೂ ಸ್ವಚ್ಛವಾಗುತ್ತಿದೆ. ಗಂಗಾನದಿಯನ್ನು ಸ್ವಚ್ಚಗೊಳಿಸುವ ಕಾರ್ಯ ನಡೆದಿದೆ. ಆದಷ್ಟು ಬೇಗ ಸ್ಥಳೀಯರ ಸಹಕಾರದಿಂದ ಭಕ್ತರ ಕೋಟಿತೀರ್ಥ ಕಾಮಗಾರಿ ಬೇಗನೆ ಪೂರ್ಣವಾಗಲಿದೆ. ಕೋಟಿ ತೀರ್ಥವು ಕೇವಲ ಸ್ಥಳೀಯರಿಗಷ್ಟೇ ಅಲ್ಲದೆ, ಇಡೀ ದೇಶದ ಜನರಿಗೆ ಇದು ಪವಿತ್ರ ತೀರ್ಥವಾಗಿದೆ ಎಂದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ ಕಾಮಗಾರಿಗೆ ಮುತುವರ್ಜಿ ವಹಿಸಿ ಹಣ ಮಂಜೂರಿ ಮಾಡಿದ್ದಕ್ಕೆ ಸಚಿವರಿಗೆ ಅಭಿನಂದನೆ ಸಲ್ಲಿಸಿದರು. ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ. ಪ್ರಮೋದ ಹೆಗಡೆ ಮತ್ತಿತರರು ಮಾತನಾಡಿದರು.
ಗ್ರಾಪಂ ಅಧ್ಯಕ್ಷ ಮಂಜುನಾಥ ಜನ್ಹು, ಉಪಾಧ್ಯಕ್ಷೆ ಶಾರದಾ ಮೂಡಂಗಿ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಗಾ, ತಹಶೀಲ್ದಾರ್ ಉಮೇಶ್, ತಾಪಂ ಇಒ ಸಿ.ಟಿ.ನಾಯ್ಕ, ಬ್ರಾಹ್ಮಣ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಅಡಿ ಮೂಳೆ, ಗಜಾನನ ಹಿರೇ, ಪಟ್ಟವಿನಾಯಕ ಗೆಳೆಯರ ಬಳಗದ ಅಧ್ಯಕ್ಷ ಸದಾನಂದ ಉಪಾಧ್ಯ, ಎಪಿಎಂಸಿ.ಅಧ್ಯಕ್ಷ ರಮೇಶ್ ಪ್ರಸಾದ್, ಬಿಜೆಪಿ ಪ್ರಮುಖ ಗೋವಿಂದ ನಾಯ್ಕ ಭಟ್ಕಳ, ಬಿಜೆಪಿ ಜಿಲ್ಲಾ ಪ್ರಭಾರಿ ನಾಗರಾಜ ನಾಯಕ ತೊರ್ಕೆ, ಕುಮಾರ್ ಕವರಿ, ತದಡಿ ಮೀನುಗಾರರ ಸಂಘದ ಉಪಾಧ್ಯಕ್ಷ ಹಾ ಮೋಹನ್ ಮೂಡಂಗಿ, ಗ್ರಾಪಂ ಸದಸ್ಯರು ಇದ್ದರು.