ಕುಮಟಾ: 18.40 ನಿಮಿಷದ ಅವಧಿಯ ಅಂಕೋಲಾದ ಕೆಲವು ಪ್ರತಿಭಾವಂತ ಯುವಕರಿಂದ ಸತ್ಯಾಂಬ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾದ ‘ದಿ ಡೆಲಿವರಿ ಬಾಯ್’  ಬಿಡುಗಡೆಗೊಂಡು ಮೂರೇ ದಿನಗಳಲ್ಲಿ 12 ಸಾವಿರ ಮಂದಿ ವೀಕ್ಷಣೆ ಮೂಲಕ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಕಾರ್ತಿಕ್ ನಾಯಕ ಅಂಕೋಲಾ ಅವರ ಮೊದಲ ಪ್ರಯತ್ನ ಇದಾಗಿದ್ದು, ಕಥೆ ಬರೆದು ಚಿತ್ರಕಥೆ ಜೊತೆಗೆ ನಿರ್ದೇಶನವನ್ನು ಅತ್ಯುತ್ತಮವಾಗಿ ನಿರ್ವಹಿಸಿ ಇಡೀ ಕಿರುಚಿತ್ರವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ.

“ಇವೆಲ್ಲವೂ ನನ್ನ ಜೀವನದಲ್ಲೇ ಯಾಕೆ ಆಗ್ತಿದೆ ಅಂತ ಗೊತ್ತಾಗ್ತಿಲ್ಲ ಸರ್.. ಅವರೆಲ್ಲ ಸೇರಿ ನನ್ನನ್ನ ಮೂರ್ಖನನ್ನಾಗಿ ಮಾಡ್ಬಿಟ್ರು..” ಹೀಗೆ ಹತಾಶೆಯಲ್ಲಿ ಹೇಳುವ ಡೆಲಿವರಿ ಬಾಯ್ ಎದುರಿಗಿದ್ದ ಪೊಲೀಸ್ ಅಧಿಕಾರಿಯನ್ನೇ ಯಾಮಾರಿಸಿಬಿಡ್ತಾನೆ. ಕ್ಲೈಮ್ಯಾಕ್ಸ್ ಹೊತ್ತಿಗೆ ವೀಕ್ಷಕರೇ ಅವಾಕ್ಕಾಗುತ್ತಾರೆ. ಅಷ್ಟಕ್ಕೂ ಆತ ವಾಸ್ತವವಾಗಿ ಯಾರು? ಎಂಬುದನ್ನು ಕೊನೆಯ ಒಂದು ನಿಮಿಷದಲ್ಲಿ ತೋರಿಸುವ ಸಸ್ಪೆನ್ಸ್ ಕಿರುಚಿತ್ರ ‘ದಿ ಡೆಲಿವರಿ ಬಾಯ್’

ಈ ಬಗ್ಗೆ  ಅಭಿಪ್ರಾಯ ಹಂಚಿಕೊಂಡ ನಿರ್ದೇಶಕ ಕಾರ್ತಿಕ್ ನಾಯಕ, ಕಾಲೇಜು ದಿನಗಳಲ್ಲಿ ಬರೆದ ಕಥೆ ಆಗಿತ್ತು. ಇದನ್ನು ಕಿರುಚಿತ್ರ ಮಾಡುವ ಬಯಕೆ ಇದ್ದರೂ ಆಗ ಕ್ಯಾಮೆರಾ ಹಾಗೂ ಇತರೆ ಸಲಕರಣೆಗಳು ಇರಲಿಲ್ಲ. ಬೆಂಗಳೂರಿನಲ್ಲಿ ಸಾಫ್ಟವೇರ್ ಎಂಜಿನಿಯರ್ ಆಗಿದ್ದ ನಾನು ನಮ್ಮದೇ ತಂಡವನ್ನು ಬಳಕೆ ಮಾಡಿಕೊಂಡು ಹಿಂದಿನ ವರ್ಷದ ಲಾಕ್ ಡೌನ್ ಸಂದರ್ಭದಲ್ಲಿ ಚಿತ್ರೀಕರಣ ಮಾಡಿದ್ದೆ. ತದ ನಂತರ ನಾನು ಉದ್ಯೋಗ ಬಿಟ್ಟು ಊರಿನಲ್ಲೇ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡ ಕಾರಣ ಸಂಕಲನ ಮಾಡಲು ಸಾಧ್ಯವಾಗಿರಲಿಲ್ಲ. ಅಂತೂ ಈಗ ಬೆಂಗಳೂರಿನ ಸ್ನೇಹಿತರೊಬ್ಬರಿಂದ ಎಡಿಟಿಂಗ್ ಮಾಡಿಸಿ ಬಿಡುಗಡೆ ಮಾಡಲು ಸಾಧ್ಯವಾಗಿದೆ ಎಂದು ವಿವರಿಸಿದರು.

RELATED ARTICLES  ಅಪಘಾತವಾದ ಗೋವಿನ ನೋವಿಗೆ ಸ್ಪಂದನೆ

ಅಂಕೋಲಾ ಮಾರುಕಟ್ಟೆ, ಹಿಲ್ಲೂರು, ಉದಯಣ್ಣ ಅವರ ಕಟ್ಟಿಗೆ ಮಿಲ್ ಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಟೀಸರ್ ಮಾಡುವ ಚಿಂತನೆ ಇತ್ತಾದರೂ ಬಹಳ ವಿಳಂಬವಾದ ಕಾರಣ ನೇರವಾಗಿ ರಿಲೀಸ್ ಮಾಡಿದೆವು. ಜನರಿಂದ ಯಾವ ರೀತಿ ಪ್ರತಿಕ್ರಿಯೆ ಬರಬಹುದೆಂಬ ನಿರೀಕ್ಷೆ ಜೊತೆಗೆ ಮೊದಲ ಪ್ರಯತ್ನವಾದ ಕಾರಣ ಆತಂಕವೂ ಇತ್ತು. ಆದರೆ, ನಿರೀಕ್ಷೆಗೂ ಮೀರಿ ಯಶಸ್ಸು ಸಿಕ್ಕಿರುವುದು ಸಂತಸ ತಂದಿದೆ. ನಮ್ಮ ಮನೆ ಬಳಿ ಇಂಟರ್ ನೆಟ್ ಕೂಡ ಇಲ್ಲದ ಕಾರಣ ಎಲ್ಲಾ ಸ್ನೇಹಿತರು ಚಿತ್ರದ ಲಿಂಕ್ ಶೇರ್ ಮಾಡುವಲ್ಲಿ ಸಹಾಯ ಮಾಡಿದ್ದಾರೆ. ಜೀರೋ ಬಜೆಟ್ ಚಿತ್ರವಾದ ಕಾರಣ ತಂಡದ ಸದಸ್ಯರು, ತಂತ್ರಜ್ಞರ ಸಹಕಾರಕ್ಕೆ ಎಂದಿಗೂ ಋಣಿ. ಚಿತ್ರೀಕರಣದ ಸಂದರ್ಭದಲ್ಲಿ ಸಹಕರಿಸಿದ ಎಲ್ಲರಿಗೂ ಮುಂಜಾವು ಪತ್ರಿಕೆ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

RELATED ARTICLES  ಮುಖ್ಯಮಂತ್ರಿಗಳು ಬರುವ ದಾರಿಯಲ್ಲಿ ಬಿಜೆಪಿ ವಿರುದ್ಧ ಪೋಸ್ಟರ್ ಅಭಿಯಾನ

ಶಶಾಂಕ್ ನಾಯಕ, ಶಶಿಕಾಂತ್ ನಾಯಕ, ಸುರೇಂದ್ರ ಗೌಡ ಗೋಕರ್ಣ, ಉದಯ ನಾಯಕ ಬಾವಿಕೇರಿ, ಜಗದೀಶ ಗೌಡ, ಆಕಾಶ್ ಮೆಟ್ರಿಯೇ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಘವೇಂದ್ರ ಕವರಿ, ಮಾದನಗೇರಿ ಸಹಕರಿಸಿದ್ದಾರೆ. ಯುವ ಅಭಿಷೇಕ್ ಕುಮಟಾ ಅವರದ್ದು ಸಿನಿಮಾಟೋಗ್ರಫಿ ನಿರ್ವಹಣೆ. ಹರಿ ಕೃಷ್ಣ ಸಂಗೀತ ಹಾಗೂ ಶಮಂತ್ ನಾಯಕ ಎಡಿಟಿಂಗ್ ಮಾಡಿದ್ದಾರೆ.

ಚಿತ್ರದ ಪ್ಲಸ್ ಪಾಯಿಂಟ್ಸ್
* ಸರಣಿ ಕಳ್ಳತನದ ಸರಳ ಕಥೆಯಿದ್ದರೂ ಅತ್ಯಂತ ಕುತೂಹಲಕಾರಿಯಾಗಿ ನಿರೂಪಿಸಿದ್ದು ವಿಶೇಷ
* ಬೆಳಕುಗಳಲ್ಲಿ ಅತ್ಯಂತ ಪರಿಣಾಮಕಾರಿ ದೃಶ್ಯ ಸೆರೆಹಿಡಿದಿರುವ ಅಭಿಷೇಕ್
* ಸೆಟ್ ಹಾಕಿ ಮಾಡಿದಂತೆ ಫೀಲ್ ನೀಡುವ ಕೆಲವು ದೃಶ್ಯಗಳು
* ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಸಿಗುವ ಟ್ವಿಸ್ಟ್
* ಅತ್ಯಂತ ಶಾರ್ಪ್ ಆಗಿ ಚಿತ್ರಕಥೆ ಮಾಡಿರುವ ನಿರ್ದೇಶಕ

ಟೀಮ್ ವರ್ಕ್ ತುಂಬಾ ಚೆನ್ನಾಗಿದೆ. ಹವ್ಯಾಸಿ ಕಲಾವಿದರೆಂದು ಅನಿಸದ ರೀತಿಯಲ್ಲಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಇವರ ತಂಡದಲ್ಲಿ ಪಾಲ್ಗೊಂಡು ವಿಲನ್ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು ಖುಷಿ ಇದೆ. ಜಿಲ್ಲೆಯ ಜನರು ಚಿತ್ರವನ್ನು ನೋಡಿ ಲಿಂಕನ್ನು ಹೆಚ್ಚೆಚ್ಚು ಶೇರ್ ಮಾಡುವ ಮೂಲಕ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು.
– ಸುರೇಂದ್ರ ಗೌಡ, ಚಿತ್ರನಟ