ಅಂಕೋಲಾ: ಇಂದು ಮುಂಜಾನೆ 11 ಗಂಟೆಗೆ ಪಟ್ಟಣದ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ಕೋವಿಡ್ ಲಸಿಕೆ ಪಡೆದಿದ್ದ ಪಟ್ಟಣದ ಕಂತ್ರಿ ಮಾಧವ ನಗರದ ನಿವಾಸಿ ಮಹಾದೇವ ಪುತ್ತು ನಾಯ್ಕ ಲಸಿಕೆ ಪಡೆದ ಒಂದು ಗಂಟೆಯ ಬಳಿಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಗುರುವಾರ ತಾಲ್ಲೂಕಿನಲ್ಲಿ ನಡೆದಿದೆ.
ಕೋವಿಡ್ ಲಸಿಕೆ ಪಡೆದ ವ್ಯಕ್ತಿಯೋರ್ವರು, ಒಂದು ಗಂಟೆ ಬಳಿಕ ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಕೆಲವು ಮಾತುಗಳು ಹರಿದಾಡಿತ್ತಾದರೂ ಲಸಿಕೆಯಿಂದ ಈ ಸಾವು ಸಂಭವಿಸಿಲ್ಲ ಎಂಬುದು ಕುಟುಂಬದವರ ಮಾತು ಹಾಗೂ ಅವರ ಚಟುವಟಿಕೆಗಳಿಂದ ಸಾಬೀತಾಗಿದೆ.
ಇಂದು ಮುಂಜಾನೆ 11 ಗಂಟೆಗೆ ಪಟ್ಟಣದ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ಕೋವಿಡ್ ಲಸಿಕೆ ಪಡೆದಿದ್ದ ಪಟ್ಟಣದ ಕಂತ್ರಿ ಮಾಧವ ನಗರದ ನಿವಾಸಿ ಮಹಾದೇವ ಪುತ್ತು ನಾಯ್ಕ ಮಧ್ಯಾಹ್ನ 12 ಗಂಟೆಗೆ ತಾಲ್ಲೂಕು ಆಸ್ಪತ್ರೆಗೆ ಮಾತ್ರೆಗಳನ್ನು ಕೊಂಡೊಯ್ಯಲು ಪತ್ನಿಯೊಂದಿಗೆ ಬಂದಿದ್ದರು ಎನ್ನಲಾಗಿದೆ.
ಈ ವೇಳೆ ನಿತ್ರಾಣಗೊಂಡಿದ್ದ ಅವರನ್ನು ಆಸ್ಪತ್ರೆಯ ತುರ್ತು ಘಟಕಕ್ಕೆ ದಾಖಲಿಸುವ ವ್ಯವಸ್ಥೆ ಮಾಡಲಾಯಿತು. ಅಷ್ಟರಲ್ಲಿಯೇ ಅವರು ಮೃತಪಟ್ಟಿದ್ದರು. ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಪರೀಕ್ಷೆಯಿಂದ ತಿಳಿದುಬಂದಿದೆ.
ಮರಣೋತ್ತರ ಪರೀಕ್ಷೆ ನಡೆಸಿ ಸೂಕ್ತ ಕಾರಣ ತಿಳಿದುಕೊಳ್ಳುವ ಬಗ್ಗೆ ತಾಲ್ಲೂಕು ಆರೋಗ್ಯ ಅಧಿಕಾರಿಗಳು ಕುಟುಂಬಸ್ಥರಿಗೆ ತಿಳಿಸಿದರು. ಹಿಂದಿನಿಂದಲೂ ಅವರಿಗೆ ಹೃದಯದ ಸಮಸ್ಯೆಯಿದ್ದು, ಮರಣೋತ್ತರ ಪರೀಕ್ಷೆ ನಡೆಸದೆ ಶವವನ್ನು ನೀಡುವಂತೆ ಕುಟುಂಬಸ್ಥರು ಪತ್ರದ ಮೂಲಕ ಮನವಿ ಮಾಡಿದ ಹಿನ್ನೆಲೆಯಲ್ಲಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಕುಟುಂಬದವರ ಈ ನಡೆ ಲಸಿಕೆಯಿಂದ ಏನೂ ಸಮಸ್ಯೆ ಇಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿದಂತಿದೆ ಎನ್ನುತ್ತಿದ್ದಾರೆ ಸಾರ್ವಜನಿಕರು.
ಮೃತರಿಗೆ ಕೋವಿಡ್ ಪರೀಕ್ಷೆ ನಡೆಸಿದ್ದು, ಸೋಂಕು ಧೃಡಪಟ್ಟಿಲ್ಲ. ತಾಲ್ಲೂಕು ಆರೋಗ್ಯ ಅಧಿಕಾರಿ ನಿತಿನ್ ಹೊಸ್ಮೇಲ್ಕರ್, ಸಿಪಿಐ ಕೃಷ್ಣಾನಂದ ನಾಯಕ, ಪಿಎಸ್ಐ ಪ್ರೇಮನ ಗೌಡ ಪಾಟೀಲ್ ಇದ್ದರು.