ಕುಮಟಾ: ಜೂನ್ ಪ್ರಾರಂಭದಲ್ಲಿಯೇ ಸುರಿಯಲು ಪ್ರಾರಂಭಿಸಿರುವ ಮಳೆ, ಒಂದಿಲ್ಲೊಂದು ಅವಾಂತರವನ್ನು ಸೃಷ್ಟಿಸುತ್ತಿದ್ದು ಮಳೆಯ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ರಸ್ತೆಗಳ ಮೇಲೆ ನೀರು ತುಂಬಿ ಹರಿದರೆ ಇನ್ನು ಕೆಲವೆಡೆ ಧರೆ ಕುಸಿತ ಮನೆಗಳ ಮೇಲೆ ಮರಗಳು ಬಿದ್ದು ಅವಾಂತರ ಸೃಷ್ಟಿಯಾಗಿದೆ.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ವಿಪರೀತ ಗಾಳಿ ಮಳೆಗೆ ತಾಲೂಕಿನ ಉಪ್ಪಿನಪಟ್ಟಣದ ತಿಮ್ಮಣ ನಾಯಕ ಎನ್ನುವವರ ಮನೆಯ ಮೇಲೆ ತೆಂಗಿನ ಮರ ಮುರಿದು ಬಿದ್ದು ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.
ಗಾಳಿ ಮಳೆಗೆ ಮನೆ ಸಮೀಪದಲ್ಲಿರುವ ತೆಂಗಿನ ಮರ ಮುರಿದು ಬಿದ್ದಿದ್ದು, ಮನೆಯ ಒಂದು ಭಾಗದ ಮೇಲ್ಛಾವಣಿ ಸಂಪೂರ್ಣ ನೆಲಸಮವಾಗಿದೆ. ವಿಷಯ ತಿಳಿದ ತಕ್ಷಣ ಗ್ರಾ.ಪಂ ಸದಸ್ಯರೊಂದಿಗೆ ಸ್ಥಳಕ್ಕೆ ತೆರಳಿದ ಅಳಕೋಡ ಗ್ರಾಮ ಪಂಚಾಯತ ಉಪಾಧ್ಯಕ್ಷ ಶ್ರೀಧರ ಪೈ, ಕಂದಾಯ ಇಲಾಖೆಗೆ ಮಾಹಿತಿ ನೀಡಿ, ಸ್ಥಳಕ್ಕೆ ಕರೆಯಿಸಿ, ಹಾನಿಯ ಬಗ್ಗೆ ಪರಿಶೀಲನೆ ನಡೆಸಿದರು. ಅಲ್ಲದೇ, ಕುಟುಂಬಸ್ಥರಿಗೆ ಶೀಘ್ರದಲ್ಲೇ ಪರಿಹಾರ ಒದಗಿಸುವಂತೆ ಒತ್ತಾಯಿಸಿದರು.
ಇನ್ನು, ಉಪಾಧ್ಯಕ್ಷ ಶ್ರೀಧರ ಪೈ, ಸದಸ್ಯರಾದ ಮಹೇಶ ದೇಶಭಂಡಾರಿ, ಶ್ರೀಧರ ಗೌಡ ಅವರು ತಾವೇ ಸ್ವತಃ ಸ್ಥಳೀಯರ ಸಹಕಾರದೊಂದಿಗೆ ಮನೆಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಿ, ವಾಸಿಸಲು ಅನುಕೂಲ ಕಲ್ಪಿಸಿದರು. ಇವರ ಕಾರ್ಯಕ್ಕೆ ಸ್ಥಳೀಯರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿದ್ದರು.
ಜಾಜಿ ಗುಡ್ಡದಲ್ಲಿ ಭೂ ಕುಸಿತ
ಮಳೆಗೆ ಶಿರಸಿ ತಾಲೂಕಿನ ಜಾಜಿ ಗುಡ್ಡದಲ್ಲಿ ಭೂ ಕುಸಿತ ಉಂಟಾಗಿದ್ದು ಈ ಗ್ರಾಮದ ಏಳು ಮನೆಗಳ ಜನರನ್ನು ಸ್ಥಳಾಂತರಿಸಲು ಶಿರಸಿ ತಹಶಿಲ್ದಾರ್ ಎಂ.ಆರ್ .ಕುಲಕರ್ಣಿ ಆದೇಶ ನೀಡಿದ್ದಾರೆ.
ಇನ್ನು ಶಿರಸಿಯ ಹುಣಸೆ ಕೊಪ್ಪದಲ್ಲೂ ಭೂ ಕುಸಿತದಿಂದ ನಿನ್ನೆದಿನ ಮಂಜುನಾಥ್ ಗಣಪ ಗೌಡ ಎಂಬುವವರು ಮೃತಪಟ್ಟಿದ್ದರು. ಜಿಲ್ಲೆಯ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅಬ್ಬರದ ಮಳೆ ಮುಂದುವರೆದಿದ್ದು ಈ ತಿಂಗಳ 18 ರ ವರೆಗೂ ಜಿಲ್ಲೆಯಾದ್ಯಂತ ರೆಡ್ ಅಲರ್ಟ ಘೋಷಣೆ ಮಾಡಲಾಗಿದೆ. ಹವಾಮಾನ ಇಲಾಖೆ ಮಾಹಿತಿಯಂತೆ ಜಿಲ್ಲೆಯಲ್ಲಿ ಅಬ್ಬರದ ಮಳೆ ಇನ್ನೂ ಒಂದು ವಾರಗಳ ಕಾಲ ಮುಂದುವರೆಯುವ ಸೂಚನೆ ನೀಡಿದ್ದಾರೆ.