ಬೆಂಗಳೂರು : ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸರಳೀಕರಿಸಿ ಕೇವಲ ಎರಡೇ ದಿನದಲ್ಲಿ ನಡೆಸಲು ನಿರ್ಧರಿಸಿದ್ದ ಶಿಕ್ಷಣ ಇಲಾಖೆ ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದೆ.
ಪರೀಕ್ಷೆಗಳ ಬಗ್ಗೆ ಸೂಕ್ತವಾದ ಮಾಹಿತಿಯನ್ನು ನೀಡುತ್ತಿರುವ ಶಿಕ್ಷಣ ಇಲಾಖೆ ಇದೀಗ ಅಧಿಕೃತ ಆದೇಶ ಹೊರಡಿಸಿದೆ. ಪರೀಕ್ಷಾ ವೇಳಾಪಟ್ಟಿಯನ್ನು ಜೂನ್ ಮೂರನೇ ವಾರ ಪ್ರಕಟಿಸುವ ಸಾಧ್ಯತೆ ಇದೆ.
ಈ ಮೊದಲು ಸೂಚಿಸಿದಂತೆಯೇ ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಪರೀಕ್ಷೆ ನಡೆಯಲಿದ್ದು, ಮೂರು ಭಾಷೆ ವಿಷಯಗಳಿಗೆ ಒಂದೇ ದಿನ ಪರೀಕ್ಷೆ ನಡೆಯಲಿದೆ.
2020-21ನೇ ಸಾಲಿನ ಎಸೆಸೆಲ್ಸಿ ಮುಖ್ಯ ಪರೀಕ್ಷೆಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳಿಗೆ ನಿಯಮಾನುಸಾರ ಕನಿಷ್ಠ ಉತ್ತೀರ್ಣತೆಯ ಅಂಕ ನೀಡಿ, ವಿದ್ಯಾರ್ಥಿಗಳು ಗಳಿಸುವ ಅಂಕದ ಆಧಾರದಲ್ಲಿ ಶ್ರೇಣಿ ನೀಡಲು ಸೂಚಿಸಲಾಗಿದೆ.
90ರಿಂದ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಎ+, 80ರಿಂದ 89 ಅಂಕ ಪಡೆಯುವ ವಿದ್ಯಾರ್ಥಿ ಗಳಿಗೆ ಎ, 60ರಿಂದ 79 ಅಂಕ ಪಡೆಯುವ ವಿದ್ಯಾರ್ಥಿ ಗಳಿಗೆ ಬಿ ಮತ್ತು 35ರಿಂದ 59 ಅಂಕ ಪಡೆ ಯುವ ವಿದ್ಯಾರ್ಥಿಗಳಿಗೆ ಸಿ ಶ್ರೇಣಿ ನೀಡಲು ತಿಳಿಸಿದೆ. ಪ್ರತೀ ವಿಷಯದ ಪರೀಕ್ಷೆಗೆ 40 ಅಂಕಗಳಿಗೆ ನಡೆಯಲಿದ್ದು, ಅವುಗಳನ್ನು 80 ಅಂಕಗಳಿಗೆ ಪರಿವರ್ತಿಸಬೇಕು (ಪ್ರಥಮ ಭಾಷೆ 125 ಅಂಕ), ಒಟ್ಟು 625 ಅಂಕಕ್ಕೆ ಅನುಗುಣವಾಗಿ ಫಲಿತಾಂಶ ನೀಡಲು ಸೂಚಿಸಿದೆ.
ಇದು 2020-21ನೇ ಸಾಲಿಗೆ ಸೀಮಿತವಾಗಿ ಇರಲಿದೆ. ಜತೆಗೆ ಎಸೆಸೆಲ್ಸಿ ಮುಖ್ಯ ಪರೀಕ್ಷೆಗೆ ಸಂಬಂಧಿಸಿ ಛಾಯಾಪ್ರತಿ, ಅಂಕಗಳ ಮರು ಎಣಿಕೆ, ಮರು ಮೌಲ್ಯಮಾಪನ ಇರುವುದಿಲ್ಲ.
ಕೊರೊನಾ ಕಾರಣಕ್ಕೆ ಅನಾರೋಗ್ಯದಿಂದ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಪ್ರಥಮ ಅವಕಾಶ ಎಂದು ಮರು ಪರೀಕ್ಷೆಯಲ್ಲಿ ಅವಕಾಶ ನೀಡಲಾಗುತ್ತದೆ. ಎಲ್ಲವೂ ಬಹು ಆಯ್ಕೆಯ ಪ್ರಶ್ನೆಗಳು ಆಗಿರಲಿದ್ದು, 8.77 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.
ಈ ಮಾಹಿತಿಯ ಜೊತೆಗೆ ಪ್ರಶ್ನೆಪತ್ರಿಕೆಯ ಮಾದರಿಗಳು ಹಾಗೂ ಪರೀಕ್ಷೆಗೆ ಅಗತ್ಯವಾದ ಸಂಪನ್ಮೂಲಗಳನ್ನು ಇಲಾಖೆ ಒದಗಿಸುತ್ತಿದೆ.