ಕುಮಟಾ: ತಾಲೂಕಿನ ತಂಡ್ರಕುಳಿ ಕ್ರಾಸ್ ಬಳಿ ಪದೇ ಪದೇ ಅಪಘಾತ ಸಂಭವಿಸುತ್ತಿರುವುದಕ್ಕೆ ಅವೈಜ್ಞಾನಿಕ ಚತುಷ್ಪಥ ಕಾಮಗಾರಿಯೇ ಕಾರಣ ಎಂದು ಆ ಭಾಗದ ಜನರು ಆರೋಪಿಸಿದ್ದಾರೆ.
ತಂಡ್ರಕುಳಿ ಕ್ರಾಸ್ ಬಳಿ ಕೈಗೊಳ್ಳಲಾದ ಚತುಷ್ಪಥ ಕಾಮಗಾರಿಯು ಅಸಮರ್ಪಕವಾಗಿದೆ. ಹೆದ್ದಾರಿಯ ಒಂದು ಕಡೆ ಮಣ್ಣು ತುಂಬಿ ರಾಶಿ ಹಾಕಿದರೆ, ಇನ್ನೊಂದು ಕಡೆ ಮಣ್ಣು ತುಂಬದೇ ಹಾಗೇ ಬಿಟ್ಟಿದ್ದಾರೆ. ಈ ಭಾಗದ ಚತುಷ್ಪಥ ಹೆದ್ದಾರಿ ತಿರುವಿನಲ್ಲೆ ಸಿಂಗಲ್ ರಸ್ತೆ ಇರುವುದರಿಂದ ವೇಗವಾಗಿ ಬಂದ ವಾಹನಗಳು ಒಮ್ಮೆಲೆ ನಿಯಂತ್ರಣ ತಪ್ಪುವ ಸಾಧ್ಯತೆ ಅಧಿಕವಾಗಿದೆ. ಶಕ್ರವಾರ ಬೆಳಗ್ಗೆ ಕೂಡ ವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ, ಪಲ್ಟಿ ಹೊಡೆದು ಹೆದ್ದಾರಿ ಪಕ್ಕಕ್ಕೆ ಬಂದು ಬಿದ್ದಿದೆ.
ಅದೃಷ್ಟವಶಾತ್ ಕಾರಿನಲ್ಲಿದ್ದ ಮೂವರಿಗೆ ಏನೂ ಅಪಾಯವಾಗಿಲ್ಲ. ಬಳಿಕ ಆ ಪ್ರಯಾಣಿಕರು ಬೇರೆ ಕಾರಿನ ವ್ಯವಸ್ಥೆ ಮಾಡಿಕೊಂಡು ಕಾರವಾರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಕುಮಟಾ ಪೊಲೀಸರು ಅಪಘಾತಕ್ಕೊಳಗಾದ ಕಾರನ್ನು ಎತ್ತಿ, ಠಾಣೆಗೆ ಸಾಗಿಸಿದ್ದಾರೆ.
ಮಿರ್ಜಾನ್ ಭಾಗಗಳಲ್ಲಿ ರಸ್ತೆಯುದ್ದಕ್ಕೂ ಬೀದಿದೀಪಗಳಿವೆ. ಇಲ್ಲಿನ ತಿರುವು ಅಪಾಯಕಾರಿ ಆಗಿದ್ದರೂ ಒಂದೇ ಒಂದು ಬೀದಿದೀಪವನ್ನು ಅಳವಡಿಕೆ ಮಾಡಿಲ್ಲ. ಏಕಮುಖ ಸಂಚಾರದ ರಸ್ತೆ ಎಂದುಕೊಂಡು ವೇಗವಾಗಿ ಬರುವ ವಾಹನ ಚಾಲಕರು ತಿರುವಿನ ಅರಿವಿಲ್ಲದೇ ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಹಾಗಾಗಿ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಅಗತ್ಯ ಕ್ರಮ ವಹಿಸಬೇಕು ಎಂದು ಆ ಭಾಗದ ಸ್ಥಳೀಯರು ಎಚ್ಚರಿಸಿದ್ದಾರೆ.