ಕುಮಟಾ: ಜಿಲ್ಲೆಯ ಆಯ್ದ ನಾಲ್ಕು ಕ್ಲಬ್ ವ್ಯಾಪ್ತಿಯಲ್ಲಿ ಹೆಣ್ಣುಮಕ್ಕಳಿಗೆ ಲಯನ್ಸ್ ಕ್ಲಬ್ ವತಿಯಿಂದ ಉಚಿತವಾಗಿ ಹೊಲಿಗೆ ತರಬೇತಿ ನೀಡಿ ಸ್ವ ಉದ್ಯೋಗಕ್ಕೆ ಪ್ರೋತ್ಸಾಹಿಸಲಾಗುವುದು. ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಮಾನವ ಸಬಲೀಕರಣ ಯೋಜನೆಯಡಿ ಇದನ್ನು ಹಮ್ಮಿಕೊಳ್ಳಲಾಗಿದೆ ಎಂದು ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಡಾ. ಗಿರೀಶ ಕುಚಿನಾಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕುಮಟಾ, ಮುರುಡೇಶ್ವರ, ಶಿರಸಿ, ಸಿದ್ದಾಪುರ ತಾಲೂಕಿನ ಕ್ಲಬ್‌ಗಳಡಿಯಲ್ಲಿ ಶಾಲೆ ಬಿಟ್ಟ, ನಿರುದ್ಯೋಗಿ ಹೆಣ್ಣುಮಕ್ಕಳಿಗೆ ಹೊಲಿಗೆ ತರಬೇತಿ ನೀಡಲಾಗುವುದು. ಪ್ರತಿ ಕ್ಲಬ್‌ಗೆ ತಲಾ ೨೦ ಹೊಲಿಗೆ ಯಂತ್ರಗಳಂತೆ ೮೦ ಹೊಲಿಗೆಯಂತ್ರಗಳನ್ನು ಹಾಗೂ ಸ್ವ ಉದ್ಯೋಗ ಪೂರಕ ಸಾಮಗ್ರಿಗಳನ್ನು ನೀಡಲಾಗುತ್ತದೆ. ನಿಯೋಜಿತ ತರಬೇತಿದಾರರು ಸಂಪನ್ಮೂಲ ವ್ಯಕ್ತಿಯಾಗಿ ಮೂರು ತಿಂಗಳ ಕಾಲ ತರಗತಿ ನಡೆಸಲಿದ್ದಾರೆ. ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ಈ ಕಾರ್ಯಕ್ಕಾಗಿ ೧೦ ಸಾವಿರ ಡಾಲರ್ ಅನುದಾನ ಒದಗಿಸಿದೆ ಎಂದರು.

RELATED ARTICLES  ಸೋಮವಾರ ಕೊರೊನಾ ಸ್ಥಿತಿಗತಿ ಬಗ್ಗೆ ಚರ್ಚಿಸಿ ಮಾರ್ಗಸೂಚಿ ಪ್ರಕಟಿಸಲಾಗುವುದು : ಸಿ.ಎಂ

ದಾನಿಗಳ ನೆರವಿನಿಂದ ಮುಂದಿನ ದಿನದಲ್ಲಿ ತರಬೇತಿ ಪಡೆದ ಎಲ್ಲಾ ಹೆಣ್ಣುಮಕ್ಕಳಿಗೆ ಉಚಿತವಾಗಿ ಹೊಲಿಗೆ ಯಂತ್ರ ಕೊಡುವ ಯೋಜನೆಯೂ ಇದೆ. ಜೂನ್ ೩೦ ಕ್ಕೆ ನನ್ನ ಅಧಿಕಾರಾವಧಿ ಮುಗಿಯಲಿದೆ. ಅಷ್ಟರೊಳಗೆ ತರಬೇತಿ ಯೋಜನೆ ಕಾರ್ಯರೂಪಕ್ಕೆ ಬರಲಿದೆ.

RELATED ARTICLES  ಧಾರವಾಡದ ಸಂಸ್ಥೆಯಲ್ಲಿ ಉದ್ಯೋಗಾವಕಾಶ

ಅಂತಾರಾಷ್ಟ್ರೀಯ ಲಯನ್ಸ ಕ್ಲಬ್‌ನಿಂದ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ದೊಡ್ಡ ಅನುದಾನ ಲಭ್ಯವಾಗಿದ್ದು ನನ್ನ ಅವಧಿಯಲ್ಲಿ ಈವರೆಗೆ ಸುಮಾರು ೨ಲಕ್ಷ ಡಾಲರ್ ಅನುದಾನ ದೊರಕಿದೆ. ಅದರಲ್ಲಿ ೧೧ ಸಾವಿರ ಡಾಲರ್ ಸಾಮಾಜಿಕ ಪ್ರಭಾವ ಬೀರುವ ಕಾರ್ಯಚಟುವಟಿಕೆ ನಡೆಸುವುದಕ್ಕಾಗಿ ಬಂದಿದೆ. ಲಯನ್ಸ ಕ್ಲಬ್ ನಿಂದ ಉತ್ತಮ ಸೇವಾ ಕಾರ್ಯ ನಡೆದಿದೆ ಎಂದರು.

ಈ ವೇಳೆ ಲಯನ್ಸ ಕ್ಲಬ್ ಅಧ್ಯಕ್ಷೆ ವಿನಯಾ ಹೆಗಡೆ, ಕಾರ್ಯದರ್ಶಿ ಎಸ್. ಎಸ್. ಹೆಗಡೆ ಹೊಲನಗದ್ದೆ, ಮಂಗಲಾ ನಾಯಕ, ನೀರಜಾ ನಾಯಕ ಇದ್ದರು.