ಕುಮಟಾ: ಕಳೆದ ಎರಡು ತಿಂಗಳಿನಿಂದ ವೇತನವಿಲ್ಲದೇ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಪಟ್ಟಣದ ತಾಲೂಕಾಸ್ಪತ್ರೆಯ ಡಯಾಲಿಸಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಆಧಾರಿತ ಆರೋಗ್ಯ ಸಿಬ್ಬಂದಿಗಳಿಗೆ ಶಾಸಕ ದಿನಕರ ಶೆಟ್ಟಿಯವರು ಆರ್ಥಿಕ ಸಹಾಯ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ವಿವಿಧ ಕಾರಣಗಳಿಂದ ತಾಲೂಕಾಸ್ಪತ್ರೆಯ ಡಯಾಲಿಸಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಆಧಾರಿತ ಆರೋಗ್ಯ ಸಿಬ್ಬಂದಿಗಳಿಗೆ ಕಳೆದ ಎರಡು ತಿಂಗಳಿನಿಂದ ವೇತನ ದೊರೆಯಲಿಲ್ಲ. ಇದರಿಂದ ಸಿಬ್ಬಂದಿಗಳು ಸಾಕಷ್ಟು ಆರ್ಥಿಕ ಕಷ್ಟ ಅನುಭವಿಸುವಂತಾಗಿತ್ತು. ಇದನ್ನು ಮನಗಂಡ ಶಾಸಕ ದಿನಕರ ಶೆಟ್ಟಿಯವರು ಶನಿವಾರ ಡಯಾಲಿಸಸ್ ಘಟಕಕ್ಕೆ ತೆರಳಿ, ಸ್ವಂತ ಹಣದಿಂದ 7 ಸಿಬ್ಬಂದಿಗಳಿಗೆ ತಲಾ 6 ಸಾವಿರ ರೂ.ಗಳಂತೆ ಒಟ್ಟೂ 42 ಸಾವಿರ ರೂ. ನೀಡಿ, ಮಾನವೀಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ಹಿರಿಯ ವಿನೋದ ಪ್ರಭು, ಪ್ರಧಾನ ಕಾರ್ಯದರ್ಶಿ ವಿನಾಯಕ ನಾಯ್ಕ ಬಗ್ಗೋಣ, ತಾಲೂಕಾಸ್ಪತ್ರೆಯ ವೈದ್ಯ ಡಾ. ಶ್ರೀನಿವಾಸ ನಾಯಕ, ಪುರಸಭಾ ಸದಸ್ಯ ತುಳಸು ಗೌಡ ಸೇರಿದಂತೆ ಇತರರು ಇದ್ದರು