ಭಟ್ಕಳ: ನಗರದ ಹೃದಯಭಾಗದಲ್ಲಿರುವ ಶಂಸುದ್ದೀನ್ ಸರ್ಕಲ್ ನಲ್ಲಿ ಆಂಬುಲೆನ್ಸ್ ಮತ್ತು ಆಟೋ ರಿಕ್ಷಾ ನಡುವೆ ಅಪಘಾತ ಸಂಭವಿಸಿದ ಬಗ್ಗೆ ವರದಿಯಾಗಿದೆ.
ಶಂಸುದ್ದೀನ್ ಸರ್ಕಲ್ ನಲ್ಲಿ ಆಂಬುಲೆನ್ಸ್ ಮತ್ತು ಆಟೋ ರಿಕ್ಷಾ ನಡುವೆ ನಡೆದ ಅಪಘಾತದಲ್ಲಿ ಅಂಬುಲೆನ್ಸ್ ಗುದ್ದಿದ ಪರಿಣಾಮ ಆಟೋರಿಕ್ಷಾ ಸಂಪೂರ್ಣ ಜಖಂಗೊಂಡಿದ್ದು ಅಪಘಾತದಿಂದ ಆಂಬ್ಯುಲೆನ್ಸ್‌ನ ಮುಂಭಾಗವೂ ಹಾನಿಗೊಳಗಾಗಿದೆ.
ಅಪಘಾತದಿಂದಾಗಿ ಆಟೋರಿಕ್ಷಾದ ಮುಂಬಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು ಆಟೋ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಆಂಬ್ಯುಲೆನ್ಸ್ ಹೊನ್ನಾವರದಿಂದ ಮಣಿಪಾಲ್‌ಗೆ ರೋಗಿಯೊಂದಿಗೆ ಪ್ರಯಾಣಿಸುತ್ತಿದ್ದರೆ, ಆಟೋ ರಿಕ್ಷಾ ಸಾಗರ್ ರಸ್ತೆಯಿಂದ ಬಂದರ್ ರಸ್ತೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಅದೃಷ್ಟವಶಾತ್ ಆಟೋ ರಿಕ್ಷಾದಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ಹೀಗಾಗಿ ಆಟೋರಿಕ್ಷಾ ಜಕಂ ಗೊಂಡಿದ್ದರೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಆಂಬ್ಯುಲೆನ್ಸ್ ಎಮರ್ಜನ್ಸಿ ಇರುವ ಕಾರಣ ಮಣಿಪಾಲ್ ಕಡೆಗೆ ವೇಗವಾಗಿ ಚಲಿಸುತ್ತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಸಂಶುದ್ದೀನ್ ವೃತ್ತದಲ್ಲಿ ಅಪಘಾತ ಸಂಭವಿಸಿದ್ದು ಆಟೋ ರಿಕ್ಷಾ ಪಲ್ಟಿಯಾಗಿ ಬಂದರ್ ರಸ್ತೆಯ ಕಡೆಗೆ ಬಿದ್ದಿದೆ ಎನ್ನಲಾಗಿದೆ.
ಆಟೋ ಚಾಲಕ ನಾಗರಾಜ ತಿಮ್ಮಪ್ಪ ದೇವಾಡಿಗ ಅವರ ತಲೆ ಮತ್ತು ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಂಬ್ಯುಲೆನ್ಸ್‌ನಲ್ಲಿದ್ದ ರೋಗಿಯೊಬ್ಬರು ಮತ್ತು ಅವರೊಂದಿಗೆ ಬಂದ ಮಹಿಳೆ ಇಬ್ಬರನ್ನೂ ತಕ್ಷಣ ಭಟ್ಕಳನಿಂದ ಮತ್ತೊಂದು ಆಂಬ್ಯುಲೆನ್ಸ್ ಮೂಲಕ ಮಣಿಪಾಲ್‌ಗೆ ಕಳುಹಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಪೊಲೀಸ್ ತನಿಖೆಯ ನಂತರದಲ್ಲಿ ಪರಿಪೂರ್ಣ ಮಾಹಿತಿ ಲಭ್ಯವಾಗಲಿದೆ ಎನ್ನಲಾಗಿದೆ.