ಕುಮಟಾ : ತಾಲ್ಲೂಕಿನ ಕೊಂಕಣ ಎಜುಕೇಶನ್ ಟ್ರಸ್ಟ್ ನ ಎಲ್ಲಾ ಅಂಗ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕೊರೋನಾ ಕಾರಣದಿಂದಾಗಿ ವಿದ್ಯಾರ್ಥಿಗಳು ಶಾಲೆಗೆ ಭೌತಿಕವಾಗಿ ಹಾಜರಾಗುತ್ತಿಲ್ಲವಾದರೂ ಎಲ್ಲ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ವಿಶ್ವಯೋಗ ದಿನದಲ್ಲಿ ಭಾಗವಹಿಸುವಂತೆ ಮಾಡುವ ಮೂಲಕ ವಿಭಿನ್ನವಾಗಿ ಕಾರ್ಯಕ್ರಮ ಆಚರಿಸಲಾಯಿತು.
ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ ಯೋಗದ ಕುರಿತಾಗಿ ಸಂದೇಶ ನೀಡಿದ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಡಾ. ರವೀಂದ್ರ ಭಟ್ ಸೂರಿಯವರು ಭಾರತೀಯರು ಜ್ಞಾನವನ್ನು ನಂಬಿ ಬದುಕು ಕಟ್ಟಿಕೊಂಡವರು, ಜ್ಞಾನದ ಪ್ರತಿಫಲವಾಗಿ ಬದುಕಿಗೆ ಯೋಗ ಪ್ರಾಣಾಯಾಮ ಹಾಗೂ ಜೀವನ ಮೌಲ್ಯಗಳನ್ನು ಕಟ್ಟಿಕೊಟ್ಟವರು. ನಮ್ಮ ಪೂರ್ವಜರು ನೀಡಿದ ಕೊಡುಗೆಯನ್ನು ನಾವು ಮರೆಯುತ್ತಿದ್ದೇವೆ. ಹಿರಿಯರು ನೀಡಿದ ಕೊಡುಗೆಗಳನ್ನು ಗಂಟು ಕಟ್ಟಿ ಬದಿಗೆ ಇಡುತ್ತಿದ್ದೇವೆ. ಪಾಶ್ಚಾತ್ಯರ ಪ್ರಭಾವ ನಮ್ಮ ಮೇಲೆ ಬೀಳುತ್ತಿರುವುದು ವಿಪರ್ಯಾಸವಾಗಿದೆ ಎಂದರು.
ಭಾರತೀಯರನ್ನು ತೆಂಗಿನ ಕಾಯಿಗೆ ಹೋಲಿಸಲಾಗುತ್ತದೆ. ಎಲ್ಲ ಸಂಪತ್ತನ್ನು ಹೊಂದಿದ್ದರೂ ಹೊರಗೆ ಕಠೋರತೆ ಇದ್ದರೂ ಒಳಗೆ ಬಿಳಿ ಎಂಬ ಅರ್ಥವೂ ಅದರಲ್ಲಿದೆ. ಆದರೆ ನಾವಿನ್ನೂ ಒಳಗೆ ಬಿಳಿಯರ ಅನುಕರಣೆ ಮಾಡುತ್ತಿದ್ದೇವೆ ಎಂಬುದು ವಿಪರ್ಯಾಸ ಎಂದರು.
ಯಾವುದನ್ನು ಮಾಡಬೇಕಿತ್ತೋ ಅದನ್ನು ಬಿಟ್ಟು ನಾವೇ ಬೇರೆ ಮಾಡುತ್ತಿದ್ದೇವೆ. ಅಂತರಂಗದ ಶುದ್ಧತೆಗೆ ಬಹಳ ಪ್ರಾಮುಖ್ಯತೆ ಇದೆ. ಆದರೆ ನಾವು ಬಹಿರಂಗದ ಸಂಪತ್ತು ಹಾಗೂ ಅಧಿಕಾರವನ್ನೇ ಸೌಂದರ್ಯ ಅಂದುಕೊಂಡು ಬದುಕುತ್ತಿದ್ದೇವೆ. ಬಾಹ್ಯದ ಸೌಂದರ್ಯದ ಚಿಂತನೆ ಬಿಟ್ಟು ಅಂತರಂಗವನ್ನು ಶುದ್ಧ ಮಾಡಿಕೊಳ್ಳುವಲ್ಲಿ ಗಮನ ನೀಡಬೇಕು, ಮನಸ್ಸು ಹರಿಯುವ ನೀರಾಗಬೇಕು, ಅದರಲ್ಲಿ ಶುದ್ಧತೆ ಇರುತ್ತದೆ ಎಂದರು. ಮನಸ್ಸು ನಿಂತ ನೀರಾದರೆ ಕೊಳೆತು ನಾರುತ್ತದೆ, ಸೊಳ್ಳೆಗಳು ಮೊಟ್ಟೆಯನ್ನಿಟ್ಟು ಮರಿ ಮಾಡುವಂತೆ ಹೊಲಸು ಚಿಂತನೆ ಮನಸ್ಸಿನಲ್ಲಿ ಒಡಮೂಡುತ್ತದೆ ಎಂದರು.
ಮಕ್ಕಳಿಗೆ ಹಿರಿಯರಾದ ನಾವುಗಳು ಆದರ್ಶವಾಗಬೇಕು, ಮಕ್ಕಳು ಸೂಕ್ತವಾದ ಮಾರ್ಗ ಆಯ್ದುಕೊಂಡು ನಮ್ಮೊಳಗಿನ ಅರಿವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು. ಆ ದಿಶೆಯಲ್ಲಿ ಇಂದಿನ ಕಾರ್ಯಕ್ರಮ ಸಾರ್ಥಕವಾಗಿದೆ ಎನ್ನುತ್ತಾ ತಮ್ಮ ಹಾಗೂ ಸಂಸ್ಥೆಯ ಜೊತೆಗಿನ ಬಾಂಧವ್ಯವನ್ನು ಸ್ಮರಿಸಿದರು.
ದೈಹಿಕ ಶಿಕ್ಷಕರಾದ ಜಯರಾಜ ಶೇರುಗಾರ, ನಾಗರಾಜ ಭಂಡಾರಿ, ಈಶ್ವರ ಗೌಡ ಹಾಗೂ ಸುಮಂಗಲಾ ನಾಯ್ಕ ಯೋಗಾಸನಗಳ ವಿವಿಧ ಆಸನಗಳನ್ನು ಪ್ರದರ್ಶಿಸಿ ಮಕ್ಕಳಿಗೂ ಆನ್ ಲೈನ್ ಮೂಲಕ ಯೋಗ ತರಬೇತಿ ನೀಡುವ ಮೂಲಕ ಗಮನ ಸೆಳೆದರು. ಸುಮಾರು 1000 ಕ್ಕೂ ಅಧಿಕ ವಿದ್ಯಾರ್ಥಿಗಳು ಯೋಗ ದಿನದಲ್ಲಿ ಭಾಗವಹಿಸಿ ಗಮನ ಸೆಳೆದರು.
ವೇದಿಕೆಯಲ್ಲಿ ಶೈಕ್ಷಣಿಕ ಸಲಹೆಗಾರರಾದ ಆರ್.ಎಚ್ ದೇಶಭಂಡಾರಿ, ವಿಧಾತ್ರಿ ಅಕಾಡಮಿಯ ಪ್ರಮುಖರಾದ ಗುರುರಾಜ ಶೆಟ್ಟಿ, ಸರಸ್ವತಿ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಮಹೇಶ ಉಪ್ಪಿನ್, ಸಿ.ವಿ.ಎಸ್.ಕೆ ಮುಖ್ಯಶಿಕ್ಷಕಿ ಸುಮಾ ಪ್ರಭು, ಸರಸ್ವತಿ ವಿದ್ಯಾ ಕೇಂದ್ರದ ಮುಖ್ಯ ಶಿಕ್ಷಕಿ ಸುಜಾತಾ ನಾಯ್ಕ, ಬಾಲಮಂದಿರದ ಮುಖ್ಯ ಶಿಕ್ಷಕಿ ಸಾವಿತ್ರಿ ಹೆಗಡೆ ಉಪಸ್ಥಿತರಿದ್ದರು. ಶಿಕ್ಷಕ ಚಿದಾನಂದ ಭಂಡಾರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಗಣೇಶ ಜೋಶಿ ವಂದಿಸಿದರು, ಸಂಗೀತ ಶಿಕ್ಷಕಿ ಲಕ್ಷ್ಮೀ ಹೆಗಡೆ ಪ್ರಾರ್ಥನೆ ಗೈದರು.