ಕುಮಟಾ: ಭಟ್ಕಳದಲ್ಲಿ ಅನಧಿಕೃತವಾಗಿ ವಾಸವಿದ್ದ ಪಾಕಿಸ್ತಾನ ಮೂಲದ ಮಹಿಳೆಯನ್ನು ಬಂಧಿಸಲಾಗಿದ್ದು, ಆಕೆಯ ಹಿನ್ನೆಲೆಯ ಕುರಿತು ಸಮಗ್ರ ತನಿಖೆಯಾಗಬೇಕೆಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆಯ ಕುಮಟಾ ಘಟಕದ ವತಿಯಿಂದ ಸೋಮವಾರ ಸಹಾಯಕ ಆಯುಕ್ತ ಎಂ.ಅಜಿತ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ದೇಶದ ಯಾವ ಮೂಲೆಯಲ್ಲಿ ಭಯೋತ್ಪಾದನೆ ಕೃತ್ಯ ನಡೆದರೂ ಅದರ ಸಂಬಂಧ ಭಟ್ಕಳದೊಂದಿಗೆ ಜೋಡಣೆ ಆಗುತ್ತಿರುವುದು ಬಹಳ ನೋವಿನ ಸಂಗತಿ. ಈ ಮತೀಯ ವಾದ ಭಟ್ಕಳಕ್ಕೆ ಕಳಂಕ. ಈ ಪರಿಸ್ಥಿತಿಯನ್ನು ಈ ಹಂತದಲ್ಲಿ ಕಡಿವಾಣ ಹಾಕದಿದ್ದಲ್ಲಿ ಮುಂದಿನ ದಿನ ದೊಡ್ಡ ಪ್ರಮಾಣದಲ್ಲಿ ಅನಾಹುತಕ್ಕೆ ಕಾರಣವಾಗುವುದರಲ್ಲಿ ಸಂಶಯವಿಲ್ಲ ಎಂದು ತಿಳಿಸಲಾಗಿದೆ.
ಸಾಕಷ್ಟು ನುಸುಳುಕೋರರು ನಕಲಿ ಪಾಸಪೋರ್ಟ್, ನಕಲಿ ಆಧಾರ ಕಾರ್ಡ್, ನಕಲಿ ವೋಟರ್ ಕಾರ್ಡ್ನೊಂದಿಗೆ ಭಟ್ಕಳದಲ್ಲಿ ವಾಸವಿದ್ದ ಬಗ್ಗೆ ಹಲವಾರು ಸಂಶಯವಿದೆ. ಇದು ನಮ್ಮ ದೇಶದ ರಕ್ಷಣಾತ್ಮಕ ವಿಚಾರ ಆಗಿರುವುದರಿಂದ ಈ ಬಗ್ಗೆ ಸಮಗ್ರವಾದ ತನಿಖೆ ಆಗಲೇಬೇಕಾಗಿದೆ. ಮಹಿಳೆಗೆ ನಕಲಿ ದಾಲೆಗಳನ್ನು ಯಾರು ಸೃಷ್ಟಿ ಮಾಡಿಕೊಟ್ಟಿದ್ದಾರೆ. ಇಷ್ಟು ದಿನ ಯಾರು ಇವಳಿಗೆ ಆಶ್ರಯ ನೀಡಿದ್ದಾರೆ. ಮತ್ತೆಷ್ಟು ಜನರಿಗೆ ಇವರು ನಕಲಿ ದಾಖಲೆ ಸೃಷ್ಟಿಮಾಡಿ ಕೊಟ್ಟಿದ್ದಾರೆ. ಈ ಮಹಿಳೆ ಭಟ್ಕಳದಲ್ಲಿ ಯಾವ ಚಟುವಟಿಕೆಗಳನ್ನು ನಡೆಸಿದ್ದಾಳೆ. ಇದೆಲ್ಲಾ ವಿಚಾರಗಳನ್ನು ಬಯಲಿಗೆಳೆಯಬೇಕಾಗಿದೆ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ಸದಾನಂದ ಕಾಮತ್, ಪ್ರಾಂತ ಕಾರ್ಯದರ್ಶಿ ಭಾಸ್ಕರ ನಾಯ್ಕ, ಜಿಲ್ಲಾ ಕಾರ್ಯದರ್ಶಿ ವಿವೇಕ ನಾಯಕ, ಪ್ರಮುಖರಾದ ರವಿ ಮಿರ್ಜಾನ, ವಿನಯ ಅಘನಾಶಿನಿ, ವಿನಾಯಕ ನಾಯ್ಕ, ಮಂಗಲದಾಸ ಬಾಡ ಇದ್ದರು.