ಕುಮಟಾ: ಕೊರೊನಾ ಲಾಕ್‌ಡೌನ್‌ನಿಂದ ಕಳೆಗುಂದಿದ್ದ ಕುಮಟಾ ಬಸ್ ನಿಲ್ದಾಣಕ್ಕೆ ಈಗ ಹೊಸ ಕಳೆ ಸಿಗುವ ಕಾಲ ಸನ್ನಿಹಿತವಾಗಿದೆ. ಮೂರು ತಿಂಗಳಿಂದ ಸ್ಥಗಿತಗೊಂಡಿದ್ದ ಬಸ್ ಸಂಚಾರ ಸೋಮವಾರದಿಂದ ಆರಂಭವಾಗಿದ್ದು ಮೊದಲ ದಿನ ಸ್ಥಳೀಯ ಮಾರ್ಗಗಳಿಗೆ ಕೆಲವು ಬಸ್ ಗಳು ಓಡಾಡಿವೆ.
ಮಾರ್ಚ್ ತಿಂಗಳಿನಲ್ಲೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಈಗ ಕೊರೊನಾ ಸೋಂಕಿನ ಪ್ರಮಾಣ ಇಳಿಮುಖವಾಗಿದ್ದರಿಂದ ಸೋಮವಾರ ರಾಜ್ಯದಲ್ಲಿ ಲಾಕ್‌ಡೌನ್ ತೆರವಾಗಿದ್ದು, ಬಸ್‌ಗಳು ಸಂಚಾರ ಆರಂಭಿಸಿವೆ. ಕುಮಟಾ ಹೊಸ ಬಸ್ ನಿಲ್ದಾಣದಿಂದ ಅಂಕೋಲಾ, ಕಾರವಾರ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, ಗೇರುಸೊಪ್ಪ ಸೇರಿದಂತೆ ಅಘನಾಶಿನಿ, ಗೋಕರ್ಣ ಮಾರ್ಗಗಳಲ್ಲಿ ಬಸ್ ಗಳ ಸಂಚಾರ ಶುರುವಾಗಿದೆ.
ಪ್ರಯಾಣಿಕರು ಕೊವಿಡ್ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಬಸ್‌ನಲ್ಲಿ ಸಂಚರಿಸಬೇಕು. ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರೆ ಮತ್ತಷ್ಟು ಬಸ್‌ಗಳನ್ನು ಓಡಿಸಲು ಸಹಾಯವಾಗುತ್ತದೆ. ಯಾವ ಕಡೆಗಳಲ್ಲಿ ಹೆಚ್ಚು ಪ್ರಯಾಣಿಕರಿದ್ದಾರೋ ಆ ಕಡೆಗಳಿಗೆ ಆದ್ಯತೆ ಮೇರೆಗೆ ಬಸ್ ಸಂಚಾರ ಆರಂಭಿಸಲು ಕ್ರಮ ವಹಿಸಲಾಗಿದೆ ಎಂದು ಕುಮಟಾ ಘಟಕದ ವ್ಯವಸ್ಥಾಪಕಿ ಸೌಮ್ಯ ನಾಯಕ ತಿಳಿಸಿದರು.
ಕೊರೊನಾ ಒಂದನೆಯ ಅಲೆಯ ಆರ್ಭಟ ಕಡಿಮೆಯಾಗುತ್ತಿದ್ದಂತೆ ಬಸ್ ಸಂಚಾರ ಆರಂಭಿಸಲಾಗಿತ್ತು. ಇದರ ಬೆನ್ನಲ್ಲೇ ಸಾರಿಗೆ ಸಂಸ್ಥೆ ನೌಕರರು ಅನಿರ್ಧಿಷ್ಟಾವಧಿ ಮುಷ್ಕರ ಕರೆ ನೀಡಿದರು. ಆಗ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಆಗ ಪ್ರಯಾಣಿಕರಿದ್ದರೆ ಬಸ್‌ಗಳಿರಲಿಲ್ಲ. ಈಗ ಬಸ್‌ಗಳಿದ್ದರೆ ಕೊರೊನಾ ಭಯಕ್ಕೆ ಪ್ರಯಾಣಿಕರು ಬಸ್‌ನಲ್ಲಿ ಸಂಚಾರ ಮಾಡುತ್ತಿಲ್ಲ ಎನ್ನುವುದು ವಿಪರ್ಯಾಸದ ಸಂಗತಿ.
ಇಂದಿನಿಂದ ಬೆಂಗಳೂರಿಗೆ ಬಸ್
ಮಂಗಳವಾರದಿಂದ ಬೆಳಿಗ್ಗೆ ೭ ಘಂಟೆಗೆ ಬೆಂಗಳೂರಿಗೆ ಬಸ್ ಆರಂಭಿಸಲಾಗುತ್ತದೆ. ಮೈಸೂರು ಮತ್ತು ದಕ್ಷಿಣಕನ್ನಡ, ಮಂಗಳೂರು ಜಿಲ್ಲೆಗಳಲ್ಲಿ ಕೋವಿಡ್ ನಿಯಮ ಇನ್ನೂ ಸಡಿಲಿಕೆ ಆಗದ ಕಾರಣ ಅವುಗಳನ್ನು ಹೊರತುಪಡಿಸಿ, ಪ್ರಯಾಣಿಕರ ಸಂಖ್ಯೆಯನ್ನು ಆದರಿಸಿ, ಉಳಿದ ಕಡೆಗಳಿಗೆ ಬಸ್ ಸಂಚರಿಸಲಿದೆ. ಉಡುಪಿತನಕ ಬಸ್ ಬಿಡಲು ನಮಗೆ ಅವಕಾಶವಿದೆ. ಪ್ರಯಾಣಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಘಟಕ ವ್ಯವಸ್ಥಾಪಕಿ ತಿಳಿಸಿದ್ದಾರೆ.
ಗ್ರಾಮೀಣ ಭಾಗಗಳಿಗೆ ತಕ್ಷಣವೇ ಬಸ್ ಸಂಚಾರ ಶುರುವಾಗುವುದಿಲ್ಲ. ಎಷ್ಟು ಮಂದಿ ಬಸ್ ನಲ್ಲಿ ಪ್ರಯಾಣ ಮಾಡಲು ಆಸಕ್ತಿವಹಿಸುತ್ತಾರೆ, ಅವರಿಂದ ಯಾವ ರೀತಿಯ ಸ್ಪಂದನೆ ಸಿಗುತ್ತದೆ ಎಂಬುದರ ಮೇಲೆ ಅವಲಂಬಿತ. ಜೊತೆಗೆ ಚಾಲಕ ನಿರ್ವಾಹಕರು ಕೂಡ ಲಸಿಕೆ ಪಡೆದಿರಬೇಕಾಗುವುದು ಕಡ್ಡಾಯ ಆಗಿರುವ ಕಾರಣ ಎಷ್ಟು ಸಿಬ್ಬಂದಿ ಸದ್ಯಕ್ಕೆ ಲಭ್ಯರಿದ್ದಾರೆ ಎನ್ನುವುದು ಕೂಡ ಪ್ರಮುಖ ಅಂಶವಾಗಿದೆ.
-ಸೌಮ್ಯಾ ನಾಯಕ, ಕುಮಟಾ ಘಟಕ ವ್ಯವಸ್ಥಾಪಕಿ