ಕುಮಟಾ: ಪಟ್ಟಣದ ಸರ್ಕಾರಿ ತಾಲೂಕಾಸ್ಪತ್ರೆಗೆ ಅಗತ್ಯವಾಗಿದ್ದ 1 ಲಕ್ಷ ರೂ. ಮೌಲ್ಯದ ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ಬುಧವಾರ ಲಾಯನ್ಸ್ ಕ್ಲಬ್ ಕುಮಟಾ ಘಟಕವು ಲಾಯನ್ಸ್ ಜಿಲ್ಲಾ ಗವರ್ನರ್ ಗಿರೀಶ ಕುಚ್ಚಿನಾಡ ಅವರ ಮೂಲಕ ತಾಲೂಕಾಸ್ಪತ್ರೆಯ ವೈದ್ಯಕೀಯ ಮಂಡಳಿಗೆ ಹಸ್ತಾಂತರಿಸಿದೆ.
ತಾಲೂಕಾಸ್ಪತ್ರೆಗೆ ಅಗತ್ಯವಾಗಿದ್ದ ಮೂರು ವೀಲ್ ಚೇರ್, ಮೂರು ಟ್ರಾಲಿ ಹಾಗೂ 100 ಎನ್.95 ಮಾಸ್ಕ್‌ಗಳನ್ನು ವಿತರಿಸಿದ ಜಿಲ್ಲಾ ಗವರ್ನರ್ ಗಿರೀಶ ಕುಚಿನಾಡು ಮಾತನಾಡಿ, ಲಾಯನ್ಸ್ ಕ್ಲಬ್ ಕೊರೊನಾ ಸಂದರ್ಭದಲ್ಲಿಯೂ ಸಹ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ತಾಲೂಕಾಸ್ಪತ್ರೆಗೆ ಮುಂದಿನ ದಿನಗಳಲ್ಲಿ ಆಕ್ಸಿಮೀಟರ್ ಹಾಗೂ ಪಿಪಿಇ ಕಿಟ್ ನೀಡಲಿದೆ. ಅಲ್ಲದೇ, ತಾಲೂಕಾಸ್ಪತ್ರೆಯ ಕುಂದುಕೊರತೆಗಳ ಬಗ್ಗೆ ವೈದ್ಯರ ಬಳಿ ಚರ್ಚಿಸಿದ್ದು, ಹಂತಹಂತವಾಗಿ ಲಾಯನ್ಸ್ ಕ್ಲಬ್ ಅಗತ್ಯ ಪರಿಕರಗಳನ್ನು ನೀಡಲಿದೆ ಎಂದರು.
ಈ ಸಂದರ್ಭದಲ್ಲಿ ಲಾಯನ್ಸ್ ಕ್ಲಬ್‌ನ ತಾಲೂಕಾಧ್ಯಕ್ಷೆ ವಿನಯಾ ಹೆಗಡೆ, ಕಾರ್ಯದರ್ಶಿ ಪ್ರೊ.ಎಸ್.ಎಸ್.ಹೆಗಡೆ, ಆಸ್ಪತ್ರೆಯ ವೈದ್ಯ ಡಾ. ಶ್ರೀನಿವಾಸ ನಾಯಕ, ಶುಶ್ರೂಷಕಿ ಸುರೇಖಾ ಶೆಟ್ಟಿ, ಕ್ಲಬ್‌ನ ಪ್ರಮುಖರಾದ ಪ್ರಕಾಶ ಪಂಡಿತ, ರಾಮ ಪೈ, ಎನ್.ಕೆ ಶಾನಭಾಗ ಸೇರಿದಂತೆ ಇನ್ನಿತರರು ಇದ್ದರು.