ಕುಮಟಾ : ಕೋವಿಡ್ ಕಾಲಿಟ್ಟ ದಿನದಿಂದಲೂ ಆಯಕಟ್ಟಿನ ಸ್ಥಳದಲ್ಲಿದ್ದು ಪಟ್ಟಣ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿನ ನಿಯಂತ್ರಣಕ್ಕೆ ಸಾಕಷ್ಟು ಶ್ರಮವಹಿಸಿದ್ದ ಕುಮಟಾ ಪುರಸಭೆಯ ಮುಖ್ಯಾಧಿಕಾರಿ ಎಂ.ಕೆ ಸುರೇಶ ಅವರಿಗೆ ಕೋವಿಡ್ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಮಟಾ ಪುರಸಭೆಯ ಕಾರ್ಯಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸುತ್ತಾ, ಪುರಸಭಾ ಮುಖ್ಯಾಧಿಕಾರಿಯಾಗಿ ಕರ್ತವ್ಯದಲ್ಲಿರುವಾಗ ನಗರದಲ್ಲಿನ ಕುಂದು ಕೊರತೆಗಳ ಬಗ್ಗೆ ಸಾರ್ವಜನಿಕರ ಟೀಕೆಯನ್ನು ಎದುರಿಸಿಯೂ ಯಾರೊಬ್ಬರಮೇಲೂ ರೇಗಾಡದೆ ತನ್ನ ಇತಿ ಮಿತಿಯಲ್ಲಿ ಸಮಸ್ಯೆಗಳಿಗೆ ಮುಕ್ತಿ ನೀಡುತ್ತಿದ್ದರು ಎನ್ನುವ ಅಭಿಪ್ರಾಯ ಅವರ ಮೇಲಿದೆ.
ಜೊತೆಗೆ ಬೀದಿ ಬದಿಯಲ್ಲಿ ತಳ್ಳುಗಾಡಿ, ತರಕಾರಿ
ಮುಂತಾವನ್ನಿಟ್ಟುಕೊಡು ಕಷ್ಟಪಟ್ಟು ಅನ್ನ ಸಂಪಾದಿಸಿಕೊಳ್ಳುತ್ತಿದ್ದವರನ್ನು ಕಾನೂನಿನ ಹೆಸರಲ್ಲಿ ಹಿಂಸಿಸದೇ ಜನಾನುರಾಗಿಯಾಗಿ ನಡೆದುಕೊಳ್ಳುತ್ತಾರೆ ಎನ್ನುವ ಮೆಚ್ಚುಗೆಯನ್ನು ಇವರು ಸಂಪಾದಿಸಿದ್ದರು.
ಕುಮಟಾ ಪಟ್ಟಣ ವ್ಯಾಪ್ತಿಯಲ್ಲಿ ಸ್ಯಾನಿಟೈಸ್ ಮಾಡುವುದು, ಲಾಕ್‌ಡೌನ್ ಸಮಯದಲ್ಲಿ ಮನೆ ಮನೆಗೆ ಅಗತ್ಯ ವಸ್ತುಗಳ ಪೂರೈಕೆಯಂತ ಕ್ರಮಗಳೊಂದಿಗೆ ಕೋವಿಡ್ ಸೋಂಕು ವ್ಯಾಪಿಸದಂತೆ ಸಕ್ರೀಯವಾಗಿ ಮುಂಚೂಣಿಯಲ್ಲಿ ತೊಡಗಿಸಿಕೊಂಡು ಈಗ ಸ್ವತ: ಸೋಂಕಿಗೆ ಒಳಗಾಗಿರುವ ಮುಖ್ಯಾಧಿಕಾರಿಯವರು ಶೀಘ್ರ ಗುಣಮುಖರಾಗಲಿ ಎಂದು ಎಲ್ಲರೂ ಹಾರೈಸಿದ್ದಾರೆ.
ಇವರು ಕೋವಿಡ್ ೧೯ ಪ್ರಕರಣಗಳು ಕುಮಟಾ ಪಟ್ಟಣದಲ್ಲಿಯೂ ವ್ಯಾಪಕವಾಗಿ ಪತ್ತೆಯಾಗಲು ಪ್ರಾರಂಭವಾದ ನಂತರ ಜನ ಸಾಮಾನ್ಯರು ಮನೆಯಿಂದ ಹೊರಗೆ ಬರುವುದಕ್ಕೂ ಭಯಪಡುವ ಹೊತ್ತಲ್ಲಿಯೂ ಮುಖ್ಯಾಧಿಕಾರಿಯಾಗಿ ತನ್ನ ಜವಾಬ್ದಾರಿಯನ್ನು ಅರಿತು ರಜೆ ಪಡೆಯದೇ ಜನರ ಆರೋಗ್ಯ ರಕ್ಷಣೆಯ ಬಗ್ಗೆ ಕಾಳಜಿ ವಹಿಸಿದ್ದರು.