ಗೋಕರ್ಣ : ಲಾಕ್ ಡೌನ್ ತೆರವಾಗುತ್ತಿರುವಂತೆ ಒಂದಿಲ್ಲೊಂದು ದುರ್ಘಟನೆಗಳು ವರದಿಯಾಗುತ್ತಿದ್ದು, ಇದೀಗ ಗೋಕರ್ಣದ ಕೋಟಿ ತೀರ್ಥದಲ್ಲಿ ಸ್ನಾನ ಮಾಡಲು ಹೋದ ಬೆಂಗಳೂರಿನ ವ್ಯಕ್ತಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಬೆಂಗಳೂರಿಂದ ಗೋಕರ್ಣಕ್ಕೆ ಬಂದಿದ್ದ ವ್ಯಕ್ತಿ ಗೋಕರ್ಣದ ಕೋಟಿ ತೀರ್ಥದಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ. ಧಾರ್ಮಿಕ ಕಾರ್ಯದ ನಿಮಿತ್ತ ಗೋಕರ್ಣಕ್ಕೆ ಬಂದವರೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ನೀರಿನಲ್ಲಿ ಮುಳುಗಿ ಮೃತಪಟ್ಟವರು ಬೆಂಗಳೂರಿನ ನಿವಾಸಿ ಕೆ ಎಸ್ ಕಮಲಾಕ್ಷ (67) ಎಂದು ಗುರುತಿಸಲಾಗಿದೆ. ಐವರು ಕುಟುಂಬದ ಸದಸ್ಯರೊಡನೆ ಗೋಕರ್ಣಕ್ಕೆ ಬಂದು ತಂದೆಯ ಅಸ್ತಿ ವಿಸರ್ಜನೆ ಮಾಡುವ ನಿಮಿತ್ತದಲ್ಲಿದ್ದರು. ದೇವರ ದರ್ಶನ ಮಾಡಿ ಸ್ನಾನಕ್ಕಾಗಿ ಕೋಟಿ ತೀರ್ಥದಲ್ಲಿ ಇಳಿದಿದ್ದರು.
ಮಳೆಗಾಲವಾದ ಕಾರಣ ಕೋಟಿ ತೀರ್ಥ ತುಂಬಿಕೊಂಡಿದ್ದು, ಮೆಟ್ಟಿಲುಗಳ ಮೇಲೆ ಪಾಚಿ ಬೆಳೆದ ಕಾರಣ ಜಾರುತಿತ್ತು. ಕಮಲಾಕ್ಷ ಅವರು ಕೋಟಿ ತೀರ್ಥದ ಮೆಟ್ಟಿಲು ಇಳಿಯುತ್ತಿರುವಾಗ ಆಕಸ್ಮಿಕವಾಗಿ ಜಾರಿಬಿದ್ದು, ತೀರ್ಥದಲ್ಲಿ ಮುಳುಗಿ, ಮೃತಪಟ್ಟಿದ್ದಾರೆ.
ಇವರು ನೀರಿಗೆ ಇಳಿಯುವ ಸಂದರ್ಭದಲ್ಲಿ ಮೆಟ್ಟಿಲುಗಳನ್ನು ಇಳಿಯುತ್ತಿರುವಾಗಲೇ ಸ್ಥಳೀಯರು ಅಲ್ಲಿ ಜಾರುತ್ತದೆ ಆ ಕಡೆಗೆ ಹೋಗಬೇಡಿ ಎಂದು ಎಚ್ಚರಿಕೆಯನ್ನು ಸಹ ನೀಡುತ್ತಿರುವಾಗಲೇ ಅವರು ನೀರಿಗಿಳಿಯುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.
ತಕ್ಷಣ ಮಾಹಿತಿ ಪಡೆದ ಗೋಕರ್ಣ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ, ಕೋಟಿ ತೀರ್ಥದಲ್ಲಿ ಶೋಧ ಕಾರ್ಯ ನಡೆಸುವ ಮೂಲಕ ಶವವನ್ನು ಮೇಲಕ್ಕೆತ್ತಿದ್ದಾರೆ.
ಮೃತರ ಕುಟುಂಬದ ಆಕೃಂದನ ಮುಗಿಲು ಮುಟ್ಟಿತ್ತು. ಸ್ಥಳೀಯರ ಸಹಕಾರದೊಂದಿಗೆ ಆಂಬುಲೆನ್ಸ್ ಮೂಲಕ ಮೃತ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಪೊಲೀಸರು ಮುಂದಿನ ಕಾರ್ಯಾಚರಣೆ ಕೈಗೊಂಡಿದ್ದಾರೆ.