ಕಾರವಾರ: ಕೊರೋನಾ ನಂತರದಲ್ಲಿ ಇದೀಗ ಡೆಲ್ಟಾ ವೈರಸ್ ಬಗ್ಗೆ ಭೀತಿ ಪ್ರಾರಂಭವಾಗಿದ್ದು, ಉತ್ತರಕನ್ನಡದ ಜಿಲ್ಲಾಡಳಿತ ಈ ವೈರಸ್ ತಡೆಗೆ ಅಗತ್ಯ ಕ್ರಮ ಕೈಗೊಂಡಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಡೆಲ್ಟಾ ವೈರಸ್ ಸೋಂಕಿನ ಮಾದರಿ ಪತ್ತೆಯಾಗಿಲ್ಲ. ಮಹಾರಾಷ್ಟ್ರದಲ್ಲಿ ಕಂಡು ಬಂದಿರುವುದು ತಿಳಿದಿದೆ. ಜಿಲ್ಲೆಯಲ್ಲಿ ರೈಲ್ವೆ ಸ್ಟೇಷನ್, ಹಾಗೂ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡಿಯೇ ಒಳಗೆ ಬಿಡುತ್ತಿದ್ದು, ಡೆಲ್ಟಾ ಪ್ಲಸ್ ವೈರಸ್ ಹರಡದಂತೆ ಹೆಚ್ಚಿನ ನಿಗಾ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಹೇಳಿದ್ದಾರೆ.
ನಂತರ ಮಾತನಾಡಿದ ಅವರು ಪ್ರತಿ ಹದಿನೈದು ದಿನಕೊಮ್ಮೆ ವಿವಿಧ ವಿಭಾಗದಲ್ಲಿ ಇರುವ ಸೋಂಕಿತರನ್ನ ಗಂಟಲು ದ್ರವದ ಪರೀಕ್ಷೆಯನ್ನ ಬೆಂಗಳೂರಿಗೆ ಕಳಿಸಲಾಗುತ್ತಿದೆ. ಲಸಿಕೆ ತೆಗೆದುಕೊಂಡ ನಂತರವೂ, ಕೊರೋನಾ ಧೃಡಪಟ್ಟಿದ್ದರೆ ಅವರಿಗೆ ಕೋವಿಡ್ ರೂಪಾಂತರ ವೈರಸ್ ಲಕ್ಷಣ ಇದೆಯೇ, ಎರಡನೇ ಬಾರಿಗೆ ಸೋಂಕು ದೃಢಪಟ್ಟರೇ ಅವರಲ್ಲಿ ಬೇರೆ ವೈರಸ್ ಕಂಡು ಬಂದಿದೆಯೇ ಎನ್ನುವುದನ್ನ ತಿಳಿಯುವ ನಿಟ್ಟಿನಲ್ಲಿ ಕಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸರ್ಕಾರದ ಮಟ್ಟದಲ್ಲಿ ಅಂತರ ಜಿಲ್ಲೆ ರಾಜ್ಯ ಓಡಾಟಕ್ಕೆ ನಿರ್ಬಂಧ ಇರುವುದಿಲ್ಲ. ಆದರೆ ಜಿಲ್ಲಾಡಳಿತ ರೈಲ್ವೆ ನಿಲ್ದಾಣ ಹಾಗೂ ಚೆಕ್ ಪೋಸ್ಟ್ ನಲ್ಲಿ ನಿಗಾ ಇಡಲಾಗಿದ್ದು, ಮಹಾರಾಷ್ಟ್ರದಿಂದ ಬರುವವರಿಗೆ ಕೈಗೆ ಸೀಲ್ ಹಾಕುವುದು, ಕ್ವಾರಂಟೈನ್ ಮಾಡುವ ಕಾರ್ಯವನ್ನ ಜಿಲ್ಲಾಡಳಿತ ಮಾಡಲಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಕರೋನಾದಿಂದ ಜನರ ರಕ್ಷಣೆಗೆ ಅನೇಕ ಕಾರ್ಯಗಳನ್ನು ಮಾಡಿದ್ದ ಜಿಲ್ಲಾಡಳಿತ. ಇದೀಗ ಡೆಲ್ಟಾ ವೈರಸ್ ತಡೆಗೆ ಮುಂಜಾಗ್ರತೆ ಕೈಗೊಂಡಿದೆ.