ಗೋಕರ್ಣ: ಬಾಹ್ಯಾಕಾಶ ವಿಜ್ಞಾನಕ್ಕೆ ಪ್ರಾಚೀನ ಭಾರತೀಯರ ಕೊಡುಗೆ ಅಪಾರ ಎಂದು ತಿರುವನಂತಪುರದಲ್ಲಿರುವ ಇಸ್ರೋ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್‍ನ ವಿಜ್ಞಾನಿ ಶ್ರೀದೇವಿ ಭಟ್ ಪ್ರತಿಪಾದಿಸಿದರು.

ಶ್ರೀರಾಮಚಂದ್ರಾಪುರ ಮಠದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವತಿಯಿಂದ ಜ್ಞಾನ-ವಿಜ್ಞಾನ ಚಿಂತನ ಸತ್ರದಲ್ಲಿ “ನಭಸ್ಪರ್ಶಮ್” ಎಂಬ ಅಂತರ್ಜಾಲ ವಿಚಾರ ಸಂಕಿರಣದಲ್ಲಿ ವಿಚಾರ ಮಂಡಿಸಿದ ಅವರು, ವರಾಹಮೀರನ ‘ಬೃಹತ್ ಸಂಹಿತೆ’ ಕೃತಿಯಲ್ಲಿ ಸೂರ್ಯನ ಕಿರಣ ಚಂದ್ರನ ಮೇಲೆ ಪ್ರತಿಫಲಿಸುವಲ್ಲಿಂದ ಹಿಡಿದು ಬಾಹ್ಯಾಕಾಶ ವಿಜ್ಞಾನದ ಹಲವು ವಿಷಯಗಳು ಒಳಗೊಂಡಿವೆ. ಇದು ಅಂದಿನ ಕಾಲದಲ್ಲಿ ಭಾರತೀಯರಿಗೆ ಇದ್ದ ಬಾಹ್ಯಾಕಾಶ ಜ್ಞಾನಕ್ಕೆ ಸಾಕ್ಷಿ ಎಂದು ವಿವರಿಸಿದರು.

ಅಂತೆಯೇ ವಿಷ್ಣುಶರ್ಮನ ಕೃತಿಯಲ್ಲೂ ಸೂರ್ಯೋದಯ, ಸೂರ್ಯಾಸ್ತದ ಬಗ್ಗೆ ಸ್ಪಷ್ಟ ಕಲ್ಪನೆಗಳಿದ್ದು, ಸೂರ್ಯ ನಮಗೆ ಕಾಣಿಸುವಾಗ ಸೂರ್ಯೋದಯ ಹಾಗೂ ಕಾಣಿಸದಾಗ ಸೂರ್ಯಾಸ್ತ ಎನ್ನುತ್ತೇವೆ. ಆದರೆ ವಾಸ್ತವವಾಗಿ ಸೂರ್ಯೋದಯ ಸೂರ್ಯಾಸ್ತಗಳಿಲ್ಲ ಎನ್ನುವುದನ್ನು ಪ್ರತಿಪಾದಿಸಿರುವುದು ಈ ಕ್ಷೇತ್ರದಲ್ಲಿ ಹೊಂದಿದ್ದ ಪರಿಣತಿಗೆ ನಿದರ್ಶನ ಎಂದು ಹೇಳಿದರು.
ಬೆಂಗಳೂರಿನ ಪೀಣ್ಯದ ಪುಟ್ಟ ಕೈಗಾರಿಕಾ ಶೆಡ್‍ನಲ್ಲಿ ಹುಟ್ಟಿದ ಇಸ್ರೋ ಸಂಸ್ಥೆ ವಿಕ್ರಮ ಸಾರಾಬಾಯ್, ಸತೀಶ್ ಧವನ್, ಯು.ಆರ್.ರಾವ್ ಅವರಂಥ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ವಿಶ್ವದ ಪ್ರಮುಖ ಬಾಹ್ಯಾಕಾಶ ಸಂಸ್ಥೆಯಾಗಿ ಬೆಳೆದು ಬಂದ ಬಗೆಯನ್ನು ವಿವರಿಸಿದ ಅವರು, ಮಹಾತ್ಮರ ಕ್ರಿಯಾಸಿದ್ಧಿ ಸಲಕರಣೆಗಳನ್ನು ಅವಲಂಬಿಸಿರದೇ ಅವರ ಅಂತಃಶಕ್ತಿಯನ್ನು ಅವಲಂಬಿಸಿರುತ್ತದೆ. ಹೀಗೆ ವಿದ್ಯಾರ್ಥಿಗಳು ಇರುವ ಸೌಲಭ್ಯವನ್ನೇ ಬಳಸಿಕೊಂಡು ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕ್ಷಣ ಕ್ಷಣದಿಂದ ವಿದ್ಯಾರ್ಜನೆ ಮತ್ತು ಕಣ ಕಣದಿಂದ ದ್ರವ್ಯಾರ್ಜನೆ ಮಾಡಬೇಕು ಎಬ ಸಂಸ್ಕøತ ಸುಭಾಷಿತದಂತೆ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ವಹಿಸಿದಾಗ ಮಾತ್ರ ಒಳ್ಳೆಯ ಸಾಧನೆ ಮಾಡಲು ಸಾಧ್ಯ ಎಂದರು. ಇಸ್ರೋದಲ್ಲಿನ ವೃತ್ತಿ ಅವಕಾಶಗಳ ಬಗ್ಗೆಯೂ ಅವರು ಮಾರ್ಗದರ್ಶನ ಮಾಡಿದರು.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 05-12-2018) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ? .

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರು ಸಾನ್ನಿಧ್ಯ ವಹಿಸಿದ್ದರು. “ಆಕಾಶದ ಬಗ್ಗೆ ಮನುಷ್ಯನ ಕುತೂಹಲ ಅನಾದಿ ಕಾಲದ್ದು; ಅಂತರಿಕ್ಷದ ತಿಳಿವಳಿಕೆಯನ್ನು ನಮ್ಮ ಪುರಾಣ ಗ್ರಂಥಗಳಲ್ಲಿ ಸಾಕಷ್ಟು ಕಾಣಬಹುದು. ಉದಾಹರಣೆಗೆ ರಾಮಾಯಣದಲ್ಲಿ ಬಹಳಷ್ಟು ಕಡೆ ವಿಮಾನಗಳ ಉಲ್ಲೇಖವಿದೆ. ಅಂಥ ವ್ಯವಸ್ಥೆ ಆ ಕಾಲದಲ್ಲಿ ಇಲ್ಲದೇ ಕಲ್ಪಿಸಿಕೊಂಡು ಬರೆಯಲು ಸಾಧ್ಯವಿಲ್ಲ. ಹೀಗೆ ಪ್ರಾಚೀನ ಭಾರತದ ವಿಜ್ಞಾನ ಆಧುನಿಕ ವಿಜ್ಞಾನಕ್ಕಿಂತಲೂ ಶ್ರೇಷ್ಠ” ಎಂದು ಅಭಿಪ್ರಾಯಪಟ್ಟರು.

RELATED ARTICLES  ಗುಟ್ಕಾ ಹಗರಣ: ತಮಿಳು ನಾಡಿನಲ್ಲಿ 40 ಕಡೆ ಸಿಬಿಐ ದಾಳಿ.

ನಾಸಾ ವಿಜ್ಞಾನಿ ಕೆ.ಆರ್. ಶ್ರೀನಾಥ್, ಎಂ.ಎಸ್.ಶಿವಕುಮಾರ್ ಮತ್ತಿತರರು ಸಂವಾದದಲ್ಲಿ ಭಾಗವಹಿಸಿದ್ದರು. ವಿವಿವಿ ಆಡಳಿತಾಧಿಕಾರಿ ಸುರೇಂದ್ರ ಹೆಗಡೆ, ವಿದ್ಯಾ ಪರಿಷತ್ ಅಧ್ಯಕ್ಷ ಎಂ.ಆರ್.ಹೆಗಡೆ, ಉಪಾಧ್ಯಕ್ಷ ಮರುವಳ ನಾರಾಯಣ ಭಟ್, ಕಾರ್ಯದರ್ಶಿ ನೀಲಕಂಠ ಯಾಜಿ ಮತ್ತಿತರರು ಉಪಸ್ಥಿತರಿದ್ದರು. ವಿವಿವಿ ಪಾರಂಪರಿಕ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಯೋತಿಷ್ಯ ಮತ್ತು ವಾಸ್ತು ವಿಭಾಗದ ಸತ್ಯನಾರಾಯಣ ಭಟ್ ನಿರೂಪಿಸಿದರು.