ಬೆಂಗಳೂರು: ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿದ್ದ ಎಸ್.ಎಸ್ ಎಲ್.ಸಿ ಪರೀಕ್ಷೆ ದಿನಾಂಕ ನಿಗದಿಯಾಗಿದ್ದು, ಆ ಬಗ್ಗೆ ಆಧಿಕೃತ ಮಾಹಿತಿ ಹೊರಬಿದ್ದಿದೆ.

ಈ ಬಾರಿ ಎರಡು ದಿನ ಪರೀಕ್ಷೆ ನಡೆಯಲಿದೆ. ಜು.19ರಂದು ಕೋರ್ ವಿಷಯಗಳ ಪರೀಕ್ಷೆ (ಸಮಾಜ ವಿಜ್ಞಾನ, ಗಣಿತ, ವಿಜ್ಞಾನ) ಜು. 22ರಂದು ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.

ಕರ್ನಾಟಕದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸಲು ತೀರ್ಮಾನಿಸಿರುವ ಶಿಕ್ಷಣ ಇಲಾಖೆ ಇಂದು ಮಹತ್ವದ ಸಭೆ ನಡೆಸಿ ನಿರ್ಧಾರ ಕೈಗೊಂಡಿದೆ. ಜುಲೈ ತಿಂಗಳ ಮೂರನೇ ವಾರದಲ್ಲಿ ಆಯೋಜಿಸಲು ಉದ್ದೇಶಿಸಲಾಗಿರುವ ಎಸ್​ಎಸ್​ಎಲ್​ಸಿ ಪರೀಕ್ಷೆಯ ಅಧಿಕೃತ ವೇಳಾಪಟ್ಟಿಯನ್ನು ಇಂದು (ಜೂನ್ 28) ನಡೆದ ಸಭೆಯಲ್ಲಿ ಅಂತಿಮಗೊಳಿಸಲಾಗಿದ್ದು, ಜುಲೈ 19 ರಂದು ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಪರೀಕ್ಷೆ ಬೆಳಗ್ಗೆ 10.30ರಿಂದ 1.30ರ ತನಕ ಹಾಗೂ ಭಾಷಾ ವಿಷಯಗಳ ಪರೀಕ್ಷೆ 22ರಂದು ಬೆಳಗ್ಗೆ 10.30ರಿಂದ 1.30ರ ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಿಸಿದ್ದಾರೆ.

ಸುರಕ್ಷಿತ ವಾತಾವರಣದಲ್ಲಿ ಎಸ್‌ಎಸ್‌ಎಲ್​ಸಿ ಪರೀಕ್ಷೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಜಿಲ್ಲಾಧಿಕಾರಿಗಳು, ಸಿಇಒ, ಎಸ್​ಪಿ, ಡಿಎಚ್‌ಒಗಳು ಸೇರಿದಂತೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಮತ್ತು ರಾಜ್ಯದ ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಪಾಲ್ಗೊಂಡಿದ್ದರು.
ಈ ವರ್ಷ 8,76,581 ವಿದ್ಯಾರ್ಥಿಗಳು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಲಿದ್ದಾರೆ, ಕಳೆದ ಬಾರಿ 8 ಲಕ್ಷದ 46 ಸಾವಿರ ವಿದ್ಯಾರ್ಥಿಗಳಿದ್ದರು.

RELATED ARTICLES  ಕೈಕೊಟ್ಟ ಮಳೆರಾಯ, ಕಂಗಾಲಾಗಿದ್ದಾನೆ ಅನ್ನದಾತ!

ಎಸ್​ಎಸ್​ಎಲ್​ಸಿ ಪರೀಕ್ಷೆಗೆಂದೇ ಈ ವರ್ಷ 73,066 ಪರೀಕ್ಷಾ ಕೊಠಡಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಕಳೆದ ಬಾರಿಯಂತೆಯೇ ಈ ಬಾರಿಯೂ ಪರೀಕ್ಷಾ ಕೇಂದ್ರಗಳು ಮಕ್ಕಳ ಸುರಕ್ಷಾ ಕೇಂದ್ರವಾಗಿರಲಿವೆ. ಕರ್ನಾಟಕ ಪ್ರೌಢ ಪರೀಕ್ಷಾ ಮಂಡಳಿ ಪರೀಕ್ಷಾ ತುರ್ತು ಸಿದ್ಧತೆಯನ್ನು ಆರಂಭಿಸಿದೆ. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಕೊರೊನಾ ನಿಯಮಗಳನ್ನು ಪಾಲಿಸಲು ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಆರು ಆಡಿಗೆ ಒಂದರಂತೆ ಆಸನ ವ್ಯವಸ್ಥೆ ಮಾಡಲಾಗುತ್ತಿದ್ದು, ಕೊಠಡಿಯಲ್ಲಿ ಗಾಳಿ, ಬೆಳಕಿನ ವ್ಯವಸ್ಥೆ ಸಮರ್ಪಕವಾಗಿರುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಜತೆಗೆ, ಸಿಸಿಟಿವಿ ಕ್ಯಾಮರಾ ಅಳವಡಿಕೆ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ.

ಕಳೆದ ಬಾರಿ ಜೂನ್​ 26 ರಿಂದ ಜುಲೈ 4ರ ತನಕ ಎಸ್​ಎಸ್​ಎಲ್​ಸಿ ಪರೀಕ್ಷೆ ಮಾಡಲಾಗಿತ್ತು. ಅದು ಯಾವುದೇ ಅವಘಡ ಇಲ್ಲದೇ ಯಶಸ್ವಿಯೂ ಆಗಿ ಎಲ್ಲರ ಮೆಚ್ಚುಗೆ ಗಳಿಸಿತ್ತು. ಈ ವರ್ಷ ಪರಿಸ್ಥಿತಿ ಭಿನ್ನವಾಗಿದೆ, ಪರೀಕ್ಷೆ ಮಾದರಿಯೂ ಬದಲಾಗಿದೆ. ಇದಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಸೂಕ್ತ ಸಲಹೆಯನ್ನೂ ಪಡೆಯಲಾಗಿದೆ. ಈ ಬಾರಿ ಎರಡು ದಿನ ಪರೀಕ್ಷೆ ನಡೆಯಲಿದ್ದು ಒಂದು ದಿನ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಇನ್ನೊಂದು ದಿನ ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ. ಇದರಲ್ಲಿ ಬಹು ಆಯ್ಕೆ ಪ್ರಶ್ನೆಗಳನ್ನು ನೀಡುವ ಕುರಿತು ಈಗಾಗಲೇ ಶಿಕ್ಷಣ ಇಲಾಖೆ ಮಾಹಿತಿ ನೀಡಿದ್ದು, ಎಲ್ಲಾ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರಶ್ನೆಗಳನ್ನು ರೂಪಿಸಲಾಗುವುದು. ಯಾವ ವಿದ್ಯಾರ್ಥಿಯನ್ನೂ ನಪಾಸು ಮಾಡುವ ಉದ್ದೇಶ ನಮಗಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಎಲ್ಲಾ ವಿಷಯಗಳ ಬಹು ಆಯ್ಕೆ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟವಾಗಿದ್ದು, ಪರೀಕ್ಷಾ ಸ್ವರೂಪದ ಬಗ್ಗೆ ಗೊಂದಲವಿರುವ ವಿದ್ಯಾರ್ಥಿಗಳು ಇದನ್ನು ನೋಡಿಕೊಂಡು ಅಭ್ಯಾಸ ಮಾಡಬಹುದಾಗಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

RELATED ARTICLES  ಮಕ್ಕಿಮನೆ ಕಲಾವೃಂದ ದಿಂದ ವಿನೂತನ ಶೈಲಿಯಲ್ಲಿ ಯಕ್ಷೋಲ್ಲಾಸ ಎಂಬ ಯಕ್ಷನಾಟ್ಯ ನಾಟ್ಯದ ಪ್ರಸ್ತುತಿ

ಮಾದರಿ ಪ್ರಶ್ನೆಪತ್ರಿಕೆ ಶಿಕ್ಷಣ ಇಲಾಖೆಯ ವೆಬ್​ಸೈಟ್​ನಲ್ಲಿ ಲಭ್ಯವಿದ್ದು, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಪ್ರಥಮ ಭಾಷೆ ಕನ್ನಡ, ಪ್ರಥಮ ಭಾಷೆ ಉರ್ದು, ಪ್ರಥಮ ಭಾಷೆ ಇಂಗ್ಲಿಷ್, ಪ್ರಥಮ ಭಾಷೆ ಸಂಸ್ಕೃತ, ದ್ವಿತೀಯ ಭಾಷೆ ಇಂಗ್ಲಿಷ್, ದ್ವಿತೀಯ ಭಾಷೆ ಕನ್ನಡ, ತೃತೀಯ ಭಾಷೆ ಹಿಂದಿ, ತೃತೀಯ ಭಾಷೆ ಇಂಗ್ಲಿಷ್ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆ ನೀಡಲಾಗಿದೆ. ಪ್ರತಿ ವಿಷಯಕ್ಕೆ ತಲಾ 40 ಅಂಕಗಳಂತೆ ಒಟ್ಟು 120 ಅಂಕದ 2 ಪ್ರಶ್ನೆಪತ್ರಿಕೆಗಳನ್ನು ಈ ಬಾರಿ ನೀಡಲಾಗುತ್ತಿದ್ದು, 3 ಗಂಟೆಗಳ ಕಾಲ ಪರೀಕ್ಷೆ ಜರುಗಲಿದೆ. ಪರೀಕ್ಷೆಯಲ್ಲಿ ಎಲ್ಲ ಪ್ರಶ್ನೆಗಳು ಬಹು ಆಯ್ಕೆಗೆ ಸಂಬಂಧಿಸಿದವುಗಳೇ ಆಗಿರಲಿದ್ದು, ಉತ್ತರಗಳನ್ನು OMR ಶೀಟ್​ನಲ್ಲಿ ನಮೂದಿಸಬೇಕಿದೆ. ಇದಕ್ಕೆ ಸಂಬಂಧಿಸಿದಂತೆ ಒಎಮ್​ಆರ್​ ಶೀಟ್ ಮಾದರಿಯನ್ನೂ ಇಲಾಖೆ ಪ್ರಕಟ ಮಾಡಿದೆ.

ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪರೀಕ್ಷಾ ಕೇಂದ್ರಗಳ ಸಿದ್ಧತೆ ನಡೆಯುತ್ತಿದೆ. ತುರ್ತಾಗಿ ಪರೀಕ್ಷಾ ಕೇಂದ್ರಗಳ ರಚನೆ ಮಾಡಿ ಮಾಹಿತಿ ನೀಡುವಂತೆ ರಾಜ್ಯದ ಎಲ್ಲಾ ನೋಡಲ್ ಅಧಿಕಾರಿಗಳು, ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕರ್ನಾಟಕ ಪ್ರೌಢ ಪರೀಕ್ಷಾ ಮಂಡಳಿ ನಿರ್ದೇಶಕರು ಸೂಚನೆ ನೀಡಿದ್ದಾರೆ. ಈ ಬಾರಿಯ ಎಸ್‌ಎಸ್‌ಎಲ್​ಸಿ ಪರೀಕ್ಷೆಗೆ ಕಳೆದ ಸಲಕ್ಕಿಂತ ಹೆಚ್ಚಿನ ಶಿಕ್ಷಕರ ಅವಶ್ಯಕತೆ ಇದೆ. ಹೀಗಾಗಿ ಕೊವಿಡ್ ಕಾರ್ಯಕ್ಕೆ ನಿಯೋಜನೆಗೊಂಡಿರುವ ಶಿಕ್ಷಕರು ಹಾಗು ಸಿಬ್ಬಂದಿ ವರ್ಗವನ್ನು ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.