ಕುಮಟಾ : ತಾಲೂಕಿನ ಹಿರೇಗುತ್ತಿ ಎಂಬ ಗಂಡುಮೆಟ್ಟಿದ ನೆಲದಲ್ಲಿ ಜನಿಸಿ ಏನಾದರೂ ಸಾಧಿಸಬೇಕೆಂಬ ಛಲದಲ್ಲಿಯೇ ಮುನ್ನಡೆದು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ, ಮುಖ್ಯಾಧ್ಯಾಪಕಿಯಾಗಿ ನಂತರ ಸುಂಕಸಾಳ ಪ್ರೌಢಶಾಲೆಯ ಸಹಶಿಕ್ಷಕಿಯಾಗಿ ಸಾರ್ಥಕ ಸೇವೆ ಸಲ್ಲಿಸಿ ಇಂದು ಸೇವಾ ನಿವೃತಿಯಾಗುತ್ತಿರುವ ತಿಮ್ಮಕ್ಕ ಶಂಕರ ನಾಯಕ(ತಿಮ್ಮಕ್ಕೋರು) ನಿಜಕ್ಕೂ ಸರಳ ಸಜ್ಜನಿಕೆಯ ಸಹೃದಯಿ ಮಹಿಳೆ ಎಂದರೆ ತಪ್ಪಾಗಲಾರದು.
ಇವರು ಸಾಮಾನ್ಯ ಕೃಷಿಕ ಕುಟುಂಬದಲ್ಲಿAದ ಬಂದರೂ ಹೃದಯವೈಶಾಲ್ಯ ಹೊಂದಿರುವವರು. ೧೯೬೦ರಂದು ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಹಿರೇಗುತ್ತಿ ಶಾಲೆಯಲ್ಲಿ ಮುಗಿಸಿ ಸೆಕೆಂಡರಿ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ನಂತರ ಅಂಕೋಲಾ ಜೆ.ಸಿ ಕಾಲೇಜಿನಲ್ಲಿ ಪಿ.ಯು.ಸಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಬಿ.ಎ, ಬಿ.ಇಡಿ, ಎಮ್.ಎ ಪದವಿ ಪಡೆದರು. ಸಮಯ ವ್ಯರ್ಥ ಮಾಡದೇ ೦೯-೦೭-೧೯೮೧ರಲ್ಲಿ ಕಾನಳ್ಳಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ನೇಮಕವಾಗಿ ಸೇವೆಯಾರಂಭಿಸಿದರು.
೦೯-೦೭-೧೯೮೧ ರಿಂದ ೧೨-೦೧-೨೦೧೯ ರವರೆಗೆ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕಾರೆಬೈಲ್, ತೆನೆಬೊಳೆ, ಹಿರೇಗುತ್ತಿ ಶಾಲೆ. ಕುಮಟಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಗೋಕರ್ಣ ವಲಯದ ಶಿಕ್ಷಣ ಸಂಯೋಜಕಿಯಾಗಿ ಕರ್ತವ್ಯ ನಿರ್ವಹಿಸಿದರು. ನಂತರ ೨೦೦೯ ರಿಂದ ೩೦-೦೬-೨೦೨೧ರವರೆಗೆ ಪ್ರೌಢಶಾಲಾ ಶಿಕ್ಷಕರಾಗಿ ಸುಂಕಸಾಳದಲ್ಲಿ. ಒಟ್ಟೂ ೩೯ ವರ್ಷ ೧೧ ತಿಂಗಳು ೨೨ ದಿನ ಅಂದರೆ ೪೦ ವರ್ಷಗಳ ಸುದೀರ್ಘ ಕಾರ್ಯನಿರ್ವಹಿಸಿ ವಿದ್ಯಾರ್ಥಿ ಹಾಗೂ ಜನಮನ್ನಣೆ ಗಳಿಸಿದರು. ಶಿಕ್ಷಣಾಧಿಕಾರಿಗಳ ಮೆಚ್ಚುಗೆಗೂ ಪಾತ್ರರಾದರು.
ಇಂಗ್ಲೀಷ್ ವಿಷಯವನ್ನು ಉತ್ತಮವಾಗಿ ಬೋಧಿಸುತ್ತಿದ್ದರು. ಗಣಿತ ಭೋದನೆಯಲ್ಲಿಯೂ ಪರಿಣಿತಿಯಿತ್ತು. ಸಂಪನ್ಮೂಲ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದರು. ಇವರಿಂದ ಕಲಿತ ವಿದ್ಯಾರ್ಥಿಗಳು ಇಂದೂ-ಎAದೂ ಅವರನ್ನೂ ನೆನಪಿಸುತ್ತಾರೆ. ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರ ಜೊತೆ ಆತ್ಮೀಯವಾದ ಪ್ರೀತಿ, ಸೌಹಾರ್ದತೆ ಹೊಂದಿದ್ದ ಇವರು ಶಿಕ್ಷಣ ಇಲಾಖೆಯೊಂದಿಗೆ ಸೌಹಾರ್ದಯುತ ಸಂಬಂಧವಿಟ್ಟುಕೊಂಡಿದ್ದರು.
ತಮ್ಮ ಸೇವಾ ಅವಧಿಯಲ್ಲಿ ಶಾಲೆಯ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಪ್ರಗತಿಯ ಜೊತೆಗೆ ಶಾಲೆಯ ಶ್ರೇಯೋಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದರು. ತನ್ನ ಶಿಕ್ಷಕ ವೃತ್ತಿಯ ಜೊತೆಗೆ ಹಲವಾರು ಪ್ರವೃತ್ತಿಗಳನ್ನೂ ಬೆಳೆಸಿಕೊಂಡಿದ್ದ “ತಿಮ್ಮಕ್ಕೋರು” ಸಾಹಿತ್ಯದ ಅಭಿರುಚಿ ಹೊಂದಿದವರಾಗಿದ್ದಾರೆ. ಅನೇಕ ಪ್ರಶಸ್ತಿ, ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ೧೯೯೯-೨೦೦೦ನೇ ಸಾಲಿನಲ್ಲಿ ಅಂಕೋಲಾ ತಾಲೂಕಿನ “ಉತ್ತಮ ಶಿಕ್ಷಕ ಪ್ರಶಸ್ತಿ”, ೨೦೦೦-೨೦೦೧ ರಲ್ಲಿ “ಜಿಲ್ಲಾ ಉತ್ತಮ ಶಿಕ್ಷಕಿ” ಪ್ರಶಸ್ತಿ ಅದೇ ವರ್ಷ “ಪುಟಾಣಿ ವಿಜ್ಞಾನ” ವಿಜ್ಞಾನ ಪರಿಷತ್ತು ಚಿತ್ರದುರ್ಗರವರಿಂದ “ವಿಜ್ಞಾನಮಿತ್ರ” ರಾಜ್ಯಪ್ರಶಸ್ತಿ ಪಡೆದಿದ್ದಾರೆ.
ವೈಯಕ್ತಿಕ ಸ್ವಾರ್ಥವನ್ನು ಬದಿಗೊತ್ತಿ ಕುಟುಂಬದ ಏಳಿಗೆಗಾಗಿ ಶ್ರಮಿಸಿದವರು. ಅವರು ಅಳವಡಿಸಿಕೊಂಡ ಗುಣಗಳು ಜೀವನದ ಅನುಭವಗಳು ಸಮಾಜಕ್ಕೆ ಮಾದರಿಯಾಗಿದೆ. ಒಳ್ಳೆಯ ಗೃಹಿಣಿಯಾಗಿ, ಆದರ್ಶ ಶಿಕ್ಷಕಿಯಾಗಿ ಸಾಮಾಜಿಕ ಚಟುವಟಿಕೆಯಲ್ಲಿ ಭಾಗಿಯಾಗಿ ತನ್ನಿಂದಾದ ಅಳಿಲು ಸೇವೆಯನ್ನು ನೀಡುತ್ತಾ ಬಂದಿರುವವರು.
ಅವರ ಪತಿ ಅಶೋಕ ನಾಯಕ ಶಿಕ್ಷಕರಾಗಿ ನಿವೃತ್ತಿ ಹೊಂದಿರುವರು. ಮಗ ಮತ್ತು ಸೊಸೆ ಸರ್ಕಾರಿ ನೌಕರಿಯಲ್ಲಿದ್ದಾರೆ.
ಹುಟ್ಟೂರು ಹಿರೇಗುತ್ತಿ ಹಾಗೂ ಸದ್ಯ ವಾಸವಾಗಿರುವ ಊರು ಆಂದ್ಲೆಯಲ್ಲಿ ತಮ್ಮದೇ ಆದ ವಿದ್ಯಾರ್ಥಿ ಬಳಗ ಹೊಂದಿರುವ “ತಿಮ್ಮಕ್ಕೋರು” ಇಂದು(೩೦-೦೭-೨೦೨೧) ಸೇವಾ ನಿವೃತ್ತಿಗೊಳ್ಳುತ್ತಿರುವ ಅವರ ನಿವೃತ್ತಿ (ಪ್ರವೃತ್ತಿ) ಜೀವನ ಇನ್ನಷ್ಟು ಕ್ರೀಯಾಶೀಲವಾಗಿರಲೆಂದು ಶುಭ ಹಾರೈಸೊಣ.
ಎನ್ ರಾಮು ಹಿರೇಗುತ್ತಿ