ಭಟ್ಕಳ: ನ್ಯಾಯಾಲಯದ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿ ಕಡತಗಳು ಸುಟ್ಟು ಕರಕಲಾದ ಘಟನೆ ವರದಿಯಾಗಿದೆ.
ಭಟ್ಕಳಪಟ್ಟಣದ ರಂಗಿನಕಟ್ಟೆಯಲ್ಲಿರುವ ಭಟ್ಕಳ ಜೆ.ಎಂ.ಎಫ್.ಸಿ. ನ್ಯಾಯಾಲಯ ಕಟ್ಟಡದಲ್ಲಿ ಇಂದು ಮುಂಜಾನೆ ಅಗ್ನಿ ಅವಘಡ ನಡೆದಿದೆ. ಬೆಂಕಿ ಅವಘಡದಿಂದಾಗಿ ನ್ಯಾಯಾಲಯದ ಮುಂದಿನ ಭಾಗ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು ದಾಖಲೆಗಳು ಸಂಪೂರ್ಣ ಸುಟ್ಟು ಕರಕಲಾಗಿರಬಹುದು ಎಂದು ಪ್ರಾಥಮಿಕ ಮಾಹಿತಿ ಲಭಿಸಿದೆ.
ನ್ಯಾಯಾಲಯದಲ್ಲಿದ್ದ ಸಾವಿರಾರು ಕೇಸುಗಳ ಕಡತಗಳು ಅವಘಡದಲ್ಲಿ ಸುಟ್ಟುಹೋಗಿದ್ದು ಕಾಗದಕ್ಕೆ ಬೆಂಕಿ ಹೊತ್ತಿಕೊಂಡ ಕಾರಣ ಬೆಂಕಿಯ ತೀವ್ರತೆ ಮತ್ತಷ್ಟು ಹೆಚ್ಚಾಗಿತ್ತು ಎನ್ನಲಾಗಿತ್ತು, ಆದರೆ ಯಾವುದೇ ಕೇಸಿನ ಕಡತಗಳು ಬೆಂಕಿಗೆ ಆಹುತಿಯಾಗಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿದೆ.
ಪ್ರಥಮ ಮಾಹಿತಿ ಪ್ರಕಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿರುವುದಾಗಿ ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದು , ಬೆಳಿಗ್ಗೆ 4.15ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಾಗ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಹಲವು ತಾಸುಗಳ ಪ್ರಯತ್ನದಿಂದ ಬೆಂಕಿ ನಂದಿಸಿದ್ದಾರೆ.
ಅಗ್ನಿ ಶಾಮಕದಳದ ಸಿಬ್ಬಂದಿ ಸಾಕಷ್ಟು ಕಡತಗಳನ್ನು ರಕ್ಷಿಸುವ ಪ್ರಯತ್ನ ಮಾಡಿದ್ದು ಸ್ಥಳಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಜಗದೀಶ ಶಿವಪೂಜಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿಯಬೇಕಿದೆ.