ಗೋಕರ್ಣ: ಜುಲೈ24 ರಿಂದ ಪ್ರಾರಂಭವಾಗುವ ವಿಶ್ವವಿದ್ಯಾ ಚಾತುರ್ಮಾಸ್ಯದ ಆಮಂತ್ರಣ ಪತ್ರಿಕೆಯನ್ನು ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಲೋಕಾರ್ಪಣೆಗೊಳಿಸಿದರು.
ದಕ್ಷಿಣದ ಕಾಶಿ ಎಂದೇ ಖ್ಯಾತವಾಗಿರುವ ಗೋಕರ್ಣದ ಅಶೋಕೆಯಲ್ಲಿ ಮೂಲಮಠದ ಪವಿತ್ರ ಪರಿಸರದಲ್ಲಿ ನಡೆಯಲಿರುವ ರಾಘವೇಶ್ವರ ಶ್ರೀ ಗಳವರ 28 ನೇ ಚಾತುರ್ಮಾಸ್ಯ ವ್ರತವು ” ವಿಶ್ವವಿದ್ಯಾ ಚಾತುರ್ಮಾಸ್ಯ” ಎಂಬ ಅಭಿದಾನದಿಂದ ನಡೆಯಲಿದ್ದು ಶ್ರೀ ಶಂಕರರು ಮೂರು ಬಾರಿ ಪದಸ್ಪರ್ಶ ಮಾಡಿದ ಪುಣ್ಯಭೂಮಿಯಲ್ಲಿ ಚಾತುರ್ಮಾಸ್ಯ ನಡೆಯುತ್ತಿರುವುದು ವಿಶೇಷವಾಗಿದೆ. ದಿನಾಂಕ 24-7-2021 ಶನಿವಾರದಿಂದ 20-9-2021 ಸೋಮವಾರದವರೆಗೆ ನಡೆಯಲಿರುವ ಈ ಚಾತುರ್ಮಾಸ್ಯಕ್ಕೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರುಕುಲಗಳು ಕೇಂದ್ರಬಿಂದುವಾಗಿರುತ್ತವೆ.
ಆಮಂತ್ರಣ ಪತ್ರಿಕೆಯ ಲೋಕಾರ್ಪಣಾ ಸಮಾರಂಭದಲ್ಲಿ ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷರಾದ ಡಿ.ಡಿ.ಶರ್ಮಾ. ಕಾರ್ಯದರ್ಶಿಗಳಾದ ಶ್ರೀಕಾಂತ ಪಂಡಿತ್. ಕೋಶಾಧ್ಯಕ್ಷರಾದ ಸುಬ್ರಾಯ ಭಟ್ಟ ಮೂರೂರು. ಹವ್ಯಕ ಮಹಾಮಂಡಲದ ಅಧ್ಯಕ್ಷರಾದ ಆರ್.ಎಸ್.ಹೆಗಡೆ.ಹರಗಿ. ಕಾರ್ಯದರ್ಶಿಗಳಾದ ನಾಗರಾಜ ಭಟ್ಟ. ಚಾತುರ್ಮಾಸ್ಯ ಸಮಿತಿ ಹಾಗೂ ಮಹಾಮಂಡಲದ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.