ಕುಮಟಾ: ಅಳಿವಿನಂಚಿನಲ್ಲಿರುವ ವಿಶೇಷ ತಳಿಗಳ ಗಿಡಗಳನ್ನು ಹೆಚ್ಚೆಚ್ಚು ಬೆಳೆಸುವ ವಿಚಾರವಾಗಿ ಅರಣ್ಯ ಇಲಾಖೆ ಚಿಂತನೆ ನಡೆಸುತ್ತಿದೆ. ಅವುಗಳಿಗೆ ರಕ್ಷಣೆ ಸಿಗುವ ಜಾಗದಲ್ಲಿ ಜನರು ಸಸಿಗಳನ್ನು ನೆಟ್ಟು ಬೆಳೆಸಿದರೆ ನಮ್ಮ ಯೋಜನೆ ಉತ್ತಮ ರೀತಿಯಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ ಎಂದು ಎ.ಸಿ.ಎಫ್. ಗುರುದತ್ತ ಶೇಟ್ ಹೇಳಿದರು.

ಅವರು ಭಾನುವಾರ ತಾಲ್ಲೂಕಿನ ಹೊಸಾಡ ಗೋಶಾಲೆಯಲ್ಲಿ ಅಮೃತಧಾರಾ ಗೋಬ್ಯಾಂಕ್, ಕುಮಟಾ ಅರಣ್ಯ ಇಲಾಖೆ ಹಾಗೂ ಮೂರೂರು ಕಲ್ಲಬ್ಬೆ ವಲಯದ ಸಹಯೋಗದಲ್ಲಿ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಲ್ಲಿ ಇಲಾಖೆ ನೀಡುವ ಸಸಿಗಳನ್ನು ನೆಟ್ಟು ಆದಾಯ ಗಳಿಸುವ ಅವಕಾಶವೂ ಇದೆ. ರೈತ ಕುಟುಂಬಗಳಿಗೆ ನರೇಗಾ ಯೋಜನೆಯಡಿಯಲ್ಲಿ ಕೂಡ ವಿಶೇಷ ಉಪಯೋಗವಿದೆ. ಪ್ರಚಾರದ ಕೊರತೆಯಿಂದ ಜನರಿಗೆ ಇಂತಹ ಯೋಜನೆಗಳು ಸಂಪೂರ್ಣವಾಗಿ ತಲುಪಿಲ್ಲ ಎಂದು ಹೇಳಿದರು.

RELATED ARTICLES  16 ವಿದ್ಯಾರ್ಥಿಗಳು 600 ಕ್ಕೆ 600 ಅಂಕ : ಕುಮಟಾ ಸರಸ್ವತಿ ಪಿ.ಯು ಕಾಲೇಜ್ ವಿದ್ಯಾರ್ಥಿಗಳ ಸಾಧನೆ.

ಉತ್ತರ ಕರ್ನಾಟಕ ಭಾಗದಲ್ಲಿ ಗೋಶಾಲೆ ನಿರ್ಮಾಣ ಮಾಡಿದರೆ ಗೋಹತ್ಯೆ ಹೆಚ್ಚಳವನ್ನು ತಡೆಗಟ್ಟಬಹುದು. ಆ ಭಾಗದಲ್ಲಿ ನೀರಿನ ಕೊರತೆ ಹಾಗೂ ಜಾನುವಾರುಗಳನ್ನು ನೋಡಿಕೊಳ್ಳಲು ಅಸಾಧ್ಯವಾದ ಕಾರಣ ಸಾಕಲಾಗದೆ ಮಾರಾಟ ಮಾಡುತ್ತಾರೆ. ಇದು ಗೋಹತ್ಯೆಗೆ ಪ್ರಚೋದನೆ ಸಿಗಲು ಕಾರಣವಾಗಿದೆ. ರಾಘವೇಶ್ವರ ಶ್ರೀಗಳು ಈಗಾಗಲೇ ಹಲವೆಡೆ ಗೋಶಾಲೆಗಳನ್ನು ನಿರ್ಮಿಸಿ ಗೋವುಗಳನ್ನು ರಕ್ಷಣೆ ಮಾಡುವ ಮಹತ್ ಕಾರ್ಯದಲ್ಲಿ ತೊಡಗಿದ್ದಾರೆ. ಹಾಗಾಗಿ ಉತ್ತರಕರ್ನಾಟಕ ಭಾಗದಲ್ಲೂ ಒಂದು ಗೋಶಾಲೆ ನಿರ್ಮಾಣವಾದರೆ ಗೋರಕ್ಷಣೆಗೆ ಅತ್ಯಂತ ಅನುಕೂಲವಾಗಬಹುದು ಎಂದರು.

RELATED ARTICLES  ಸುನಿಲ್ ನಾಯ್ಕ ಪರ ಸ್ಟಾರ್ ಪ್ರಚಾರಕರಾದ ಶಾಸ್ತ್ರಿ ದಂಪತಿ: ಜೋರಾಗಿದೆ ಮತ ಬೇಟೆ.

ಕಾರ್ಯದರ್ಶಿ ಅರುಣ ಹೆಗಡೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಉಪಾಧ್ಯಕ್ಷ ಆರ್.ಜಿ.ಭಟ್ಟ ಸಾಂದರ್ಭಿಕ ಮಾತುಗಳನ್ನಾಡಿದರು. ರವಿ ಹೆಗಡೆ, ಸುಬ್ರಹ್ಮಣ್ಯ ಹೆಗಡೆ ಅಜ್ಜಿಗದ್ದೆ, ಡಾ.ಸುರೇಶ ಹೆಗಡೆ, ಗೋಶಾಲೆ ವ್ಯವಸ್ಥಾಪಕ ಗಣಪತಿ ಹೆಗಡೆ, ರಾಘವೇಂದ್ರ ಹೆಗಡೆ ಕಲ್ಲಬ್ಬೆ ಇದ್ದರು.

ಪ್ರತಿಯೊಂದು ಗಿಡಗಳಿಗೆ ಫಲಕಗಳನ್ನು ಹಾಕಿ ಮೂರು ಭಾಷೆಗಳಲ್ಲಿ ಆಯಾ ಗಿಡಗಳ ಮಹತ್ವದ ಬಗ್ಗೆ ಬರೆದು ನೋಡುಗರಿಗೆ ಅವುಗಳ ತಿಳುವಳಿಕೆ ಮೂಡಿಸುವ ಕಾರ್ಯ ರಾಘವೇಶ್ವರ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯಲಿದೆ.
– ಸುಬ್ರಾಯ ಭಟ್ಟ, ಗೋಶಾಲೆ ಸಮಿತಿ ಪ್ರಧಾನ ಕಾರ್ಯದರ್ಶಿ