ಶಿರಸಿ : ಅಕ್ರಮ ಗೋ ಮಾಂಸ ಸಾಗಾಟ ಹಾಗೂ ಅಕ್ರಮ ಗೋ ಸಾಗಾಟ ಜಾಲಗಳು ಉತ್ತರಕನ್ನಡದ ಅನೇಕ ಕಡೆಗಳಲ್ಲಿ ಕಾರ್ಯಮಾಡಿದ್ದು ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಪೊಲೀಸ್ ಇಲಾಖೆಯ ಕ್ಷಿಪ್ರ ಕಾರ್ಯಾಚರಣೆಯಿಂದ ಈಗಾಗಲೇ ಅನೇಕ ಗೋ ಸಾಗಾಟ ಹಾಗೂ ಗೋ ಮಾಂಸ ಸಾಗಾಟ ಪ್ರಕರಣಗಳನ್ನು ಬೇಧಿಸುತ್ತಿದ್ದರೂ, ಶಿರಸಿಯಲ್ಲಿ ಇಂದು ಬೆಳಗಿನ ಜಾವ ಅಕ್ರಮ ಗೋ ಸಾಗಾಟ ಪ್ರಕರಣ ನಡೆದಿದೆ ಎಂದು ಸ್ಥಳೀಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಐಶಾರಾಮಿ ಕಾರಿನಲ್ಲಿ ಬಂದ ಗೋ ಕಳ್ಳರು ಬೆಳಗಿನ ಜಾವ ಗೋ ಕಳ್ಳತನಕ್ಕೆ ಮುಂದಾಗಿದ್ದಾರೆ. ರಸ್ತೆಯ ಸನಿಹದಲ್ಲಿದ್ದ ಗೋಗಳನ್ನು ಕಾರಿನಲ್ಲಿ ತುಂಬಿಕೊಂಡು ಎಸ್ಕೇಪ್ ಆಗಿದ್ದು, ಈ ಘಟನೆ ಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿದೆ.
ತಾಲೂಕಿನ ಮರಾಟಿಕೊಪ್ಪದ ಮುಖ್ಯ ರಸ್ತೆಯಲ್ಲಿ ಇಂದು ಬೆಳಗಿನಜಾವ ದನಗಳ್ಳರು ಸುಮಾರು 3-50ರ ಸುಮಾರಿಗೆ ನಾಲ್ಕು ದನಗಳನ್ನು ಕದ್ದೊಯ್ದಿದ್ದಾರೆ. ಬಹುಬೆಲೆಯ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಕೃತ್ಯದ ಬಗ್ಗೆ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಆರಂಭಗೊಂಡಿದೆ.
ಆಶ್ಚರ್ಯವೆಂದರೆ ಅದೇ ಸ್ಥಳದಲ್ಲಿ ಗೋರಕ್ಷಕರ ಪಡೆಯೇ ಇದ್ದು, ಹೊಂಚು ಹಾಕಿ ಕಳ್ಳತನ ಮಾಡಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಮಣ್ಣೆತ್ತಿನ ಅಮಾವಾಸ್ಯೆ ದಿನವೇ ಈ ದುರ್ಘಟನೆ ನಡೆದಿದ್ದು ಸುತ್ತಮುತ್ತಲಿನ ಜನರು ದಿಗ್ಭ್ರಾಂತರಾಗಿದ್ದಾರೆ.