ಕುಮಟಾ: ಹುಬ್ಬಳ್ಳಿಯ ಪಿಆರ್‌ಎನ್ ಚಾರಿಟೇಬಲ್ ಟ್ರಸ್ಟ್ (ಪಿಆರ್‌ಎನ್ ಗ್ರೂಪ್) ವತಿಯಿಂದ ಕುಮಟಾ ಮತ್ತು ಹೊನ್ನಾವರ ಭಾಗದ ಚಿಕ್ಕ ಮಕ್ಕಳಿಗಾಗಿ ನೀಡಲ್ಪಟ್ಟ ನ್ಯೂಟ್ರಿಷೆನ್ ಫುಡ್ ಕಿಟ್‌ಗಳನ್ನು ಶಾಸಕ ದಿನಕರ ಶೆಟ್ಟಿ ಶನಿವಾರ ಪಟ್ಟಣದ ಪುರಭವನದಲ್ಲಿ ಸಾಂಕೇತಿಕವಾಗಿ ಮಕ್ಕಳಿಗೆ ಹಸ್ತಾಂತರಿಸಿದರು.
ನಂತರ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ದಾನಿಗಳು ಕ್ಷೇತ್ರದ ಜನತೆಯ ಹಿತ ದೃಷ್ಟಿಯಿಂದ ಸಾಕಷ್ಟು ಸಹಕಾರ ನೀಡಿದ್ದಾರೆ. ಅದೇ ರೀತಿ ಹಿರೇಗುತ್ತಿ ಮೂಲದ ಹುಬ್ಬಳ್ಳಿಯ ಪಿಆರ್‌ಎನ್ ಗ್ರೂಪ್‌ನ ಮಾಲಿಕರಾದ ಪ್ರಕಾಶ ನಾಯಕ ಅವರು ಹಲವು ರೀತಿಯಲ್ಲಿ ತಮ್ಮ ಸ್ವಂತ ಊರು, ಊರಿನ ತಾಲೂಕಾಸ್ಪತ್ರೆಗೆ ಅಂಬ್ಯುಲೆನ್ಸ್ ಹಾಗೂ ಹಲವು ಶಾಲೆಗೆ ಪೀಠೋಪಕರಣಗಳು ಸೇರೆದಂತೆ ಇನ್ನಿತರ ಅಭಿವೃದ್ಧಿಗಾಗಿ ಸಾಕಷ್ಟು ದಾನ ನೀಡಿ, ಮಾನವೀಯತೆ ಮೆರೆದಿದಿರುವುದು ಶ್ಲಾಘನೀಯ ಎಂದರು.
ಮುಂಬರುವ ಕೊರೊನಾ ಮೂರನೆಯ ಅಲೆಯನ್ನು ಮಕ್ಕಳು ನಿರಾಳವಾಗಿ ಎದುರಿಸುವ ನಿಟ್ಟಿನಲ್ಲಿ ಪ್ರಕಾಶ ನಾಯಕ ಅವರು ನೀಡಿದ ನ್ಯೂಟ್ರಿಷೆನ್ ಫುಡ್ ಕಿಟ್ ಸಹಕಾರಿಯಾಗಲಿದ್ದು, ಕುಮಟಾ ಮತ್ತು ಹೊನ್ನಾವರ ಭಾಗದ ಎಲ್ಲ ಚಿಕ್ಕ ಮಕ್ಕಳಿಗೆ ಇದನ್ನು ನೀಡಲಿದ್ದೇವೆ. ಮಕ್ಕಳು ಇದರ ಪ್ರಯೋಜನ ಪಡೆದುಕೊಂಡು ವಿಜ್ಞಾನಿಗಳು ನೀಡಿದ ಮೂರನೆಯ ಅಲೆ ಎದುರಿಸಲು ಸನ್ನದ್ಧರಾಗಬೇಕು ಎಂದರು.
ದಾನಿ ಹಾಗೂ ಉದ್ಯಮಿ ಪ್ರಕಾಶ ನಾಯಕ ಮಾತನಾಡಿ, ಸ್ವಂತ ಊರಿನ ಅಭಿವೃದ್ಧಿಗೆ ನನ್ನಿಂದಾದ ಸಹಾಯ-ಸಹಕಾರ ನೀಡಬೇಕೆಂಬ ಕನಸು ಈಗ ಈಡೇರುತ್ತಿದೆ. ನಮ್ಮ ಗ್ರೂಪ್ ವತಿಯಿಂದ ಮುಂದಿನ ದಿನಗಳಲ್ಲಿಯೂ ಸಹ ನಿರಂತರವಾಗಿ ಇಂತಹ ಕಾರ್ಯಗಳು ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಕುಮಟಾ ಮತ್ತು ಹೊನ್ನಾವರ ತಾಲೂಕಿನ ಶಿಸು ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕಿನ ಮಕ್ಕಳು ಸೇರಿದಂತೆ ಇನ್ನಿತರರು ಇದ್ದರು.