ಯಲ್ಲಾಪುರ : ಮೀನು ಮಾರುಕಟ್ಟೆ ಇ-ಟೆಂಡರ್ ಕರೆಯುವ ಪ್ರಶ್ನೆಯೇ ಇಲ್ಲ, ಈ ಬಗ್ಗೆ ತಿಳಿವಳಿಕೆ ಇಲ್ಲದೆ ಬೇರೆ ಪಕ್ಷದ ಅನುಭವಿ ನಾಯಕರು ಜನರಿಗೆ ತಪ್ಪು ಮಾಹಿತಿ ಕೊಡುತ್ತಿದ್ದಾರೆ ಎಂದು ಪ.ಪಂ ಅಧ್ಯಕ್ಷ ಶಿರೀಷ ಪ್ರಭು ಆಪಾದಿಸಿದರು..
ಅವರು ಸೋಮವಾರ ಮಧ್ಯಾಹ್ನ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ವಿಷಯ ತಿಳಿಸಿದರು. ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುವಾಗ ಜನಸಾಮಾನ್ಯರಿಗೆ ಅಡೆತಡೆ ಯಾಗುವುದು ಸಹಜ, ಹಾಗಂತ ಜನಸಾಮಾನ್ಯರು ಈ ಬಗ್ಗೆ ತಕರಾರು ತೆಗೆಯುತ್ತಿಲ್ಲ. ವಿರೋದ ಪಕ್ಷದ ಮುಖಂಡರು ಜನರಿಗೆ ತಪ್ಪು ಮಾಹಿತಿ ನೀಡಿ ಅನಾವಶ್ಯಕವಾಗಿ ಸಮಸ್ಯೆಯನ್ನು ಸೃಷ್ಟಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಪಟ್ಟಣ ವ್ಯಾಪ್ತಿಯಲ್ಲಿ ಎಸ್ ಎಫ್ ಸಿ ₹ 152 ಲಕ್ಷ 14ನೇ ಹಣಕಾಸು ಯೋಜನೆಯಲ್ಲಿ ₹ 256 ಲಕ್ಷ , 14ನೇ ಹಣಕಾಸು ಗುಣಮಟ್ಟದ (performanc) ಯೋಜನೆಯಲ್ಲಿ ₹ 79.83 ಲಕ್ಷ, ನಗರೋತ್ಥಾನ 3ನೇ ಹಂತದ ಯೋಜನೆಯಲ್ಲಿ ₹ 3 ಕೋ, ಶಾಸಕರು ವಿಶೇಷ ಅನುದಾನದಲ್ಲಿ ₹ 2.5 ಕೋ ಹೀಗೆ ಒಟ್ಟು ₹ 7.5 ಕೋ ಹಣ ಬಂದಿದೆ, ಈ ಹಣದಲ್ಲಿ ಕಾಮಗಾರಿಗಳನ್ನು ವಾರ್ಡ್ ಹಂಚದೆ, ಒಂದೊಂದೇ ವಾರ್ಡನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ವಾರ್ಡ್ ಸಂಖ್ಯೆ 3, 9, 7, 4 ಶೇ 100 ರಷ್ಟು ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಉದ್ಯಮ ನಗರ ಆಶ್ರಯಕಾಲನಿ, ಕಾಳಮ್ಮನಗರ ಮತ್ತು ಅಕ್ಬರ್ ಗಲ್ಲಿಗಳಲ್ಲಿ ಶೇಕಡಾ 60ರಷ್ಟು ಕಾಂಕ್ರೀಟ್ ರಸ್ತೆಯ ಕೆಲಸವಾಗಿದೆ. ಇನ್ನುಳಿದ ಕೆಲಸವನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದ ಅವರು, ಶಾಸಕ ಶಿವರಾಮ ಹೆಬ್ಬಾರ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಜನರಿಗೆ ನೀಡಿದ ಭರವಸೆಯಂತೆ ನಡೆದುಕೊಳ್ಳುತ್ತಿದ್ದಾರೆ. ಯಲ್ಲಾಪುರ ಪಟ್ಟಣವನ್ನು ಸಂಪೂರ್ಣ ಕಾಂಕ್ರೀಟ್ ರಸ್ತೆಯನ್ನಾಗಿ ಪರಿವರ್ತಿಸಿ, ನಂತರ ಮುಂದಿನ ಚುನಾವಣೆಯ ಪ್ರಚಾರಕ್ಕೆ ಬರಲಿದ್ದೇವೆ ಎಂದು ಹೇಳಿದ್ದರು. ಅದೇ ರೀತಿ ನಡೆದುಕೊಂಡಿದ್ದಾರೆ. ಹದಿನೈದು ವರ್ಷದ ಬಿಜೆಪಿ ಅವಧಿಯಲ್ಲಿ ಏನು ಅಭಿವೃದ್ಧಿಯಾಗಿದೆ ಮತ್ತು ಶಿವರಾಮ ಹೆಬ್ಬಾರ್ ಅವಧಿಯಲ್ಲಿ ಎಷ್ಟು ಅಭಿವೃದ್ಧಿಯಾಗಿದೆ ಎನ್ನುವುದರ ಕುರಿತು ನಾವು ಬಹಿರಂಗ ಚರ್ಚೆಗೆ ಸಿದ್ಧರಿದ್ದೇವೆ ಎಂದು ಪ.ಪಂ ಕುರಿತು ಟೀಕಾಕಾರರಿಗೆ ಮಾಧ್ಯಮದ ಮೂಲಕ ಸವಾಲು ಒಡ್ಡಿದರು.
ವಿರೋಧ ಪಕ್ಷದ ಪಕ್ಷದವರು ಪಟ್ಟಣ ಪಂಚಾಯಿತಿಯಲ್ಲಿ ಸಾಕಷ್ಟು ಹಣವಿಲ್ಲ ಎಂದು ಪ್ರಚಾರ ಮಾಡುತ್ತಿದ್ದಾರೆ ಇದು ಸುಳ್ಳು, ಪಟ್ಟಣ ಪಂಚಾಯತದಲ್ಲಿ ಅಭಿವೃದ್ಧಿಗೆ ಸಾಕಷ್ಟು ಹಣವಿದೆ. ನಮ್ಮ ಅವಧಿಯ ಪಟ್ಟಣ ಪಂಚಾಯಿತಿ ಪಕ್ಷಪಾತ ಮಾಡುತ್ತಿಲ್ಲ. ಎಲ್ಲ ವಾರ್ಡುಗಳಿಗೆ ಅಷ್ಟೇ ಪ್ರಾಮುಖ್ಯತೆ ನೀಡುತ್ತಿದ್ದೇವೆ. ಜನಪ್ರತಿನಿಧಿಯನ್ನು ಗಣನೆಗೆ ತೆಗೆದುಕೊಳ್ಳದೆ ಜನರನ್ನು ಗಣನೆಗೆ ತೆಗೆದುಕೊಂಡು ಬೇರೆ ಪಕ್ಷದ ಪ್ರತಿನಿಧಿಗಳ ವಾರ್ಡ್ ಗಳಿದ್ದಾಗಲೂ ಸಹಿತ ವಾರ್ಡುಗಳ ಅಭಿವೃದ್ಧಿಗೆ ಮಹತ್ವ ನೀಡುತ್ತಿದ್ದೆವೆ ಎಂದು ಹೇಳಿದರು.
ಶಾಶ್ವತ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆ ಕೇವಲ 1.65 ಕಿಲೋಮೀಟರ್ ಅಷ್ಟೆ ಬಾಕಿ ಇದ್ದು, ಮಳೆಗಾಲದ ಕಾರಣಕ್ಕೆ ಕಾಮಗಾರಿಯನ್ನು ನಿಲ್ಲಿಸಲಾಗಿದೆ. ಮಳೆ ಕಡಿಮೆಯಾದ ನಂತರ ಡಿಸೆಂಬರ್ ಅಂತ್ಯದೊಳಗೆ ಸಂಪೂರ್ಣ ಕಾಮಗಾರಿಯನ್ನು ಮುಗಿಸಲಾಗುವುದು. ನಂತರ ಅಗೆದಿರುವ ರಸ್ತೆಗಳ ದುರಸ್ತಿ ಕಾರ್ಯ ನಡೆಯಲಿದೆ ಎಂದು ಅವರು ತಿಳಿಸಿದರು.
ಪಟ್ಟಣ ವ್ಯಾಪ್ತಿಯ ಶಿರಸಿ ಅರ್ಬನ್ ಬ್ಯಾಂಕ್ ಎದುರಿನಲ್ಲಿ ತಹಸೀಲ್ದಾರ್ ಕಚೇರಿ ಪ್ರಾಂಗಣದ ಒಳಗೆ ಹಾಗೂ ಆಯ್ ಬಿ ರಸ್ತೆಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಹಣ ಮಂಜೂರಿಯಾಗಿದೆ. ಆದರೆ ಸ್ಥಳದ ಕೊರತೆಯಿಂದಾಗಿ ಕಾಮಗಾರಿ ಹಿನ್ನಡೆಯಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಾಹಿತಿ ನೀಡಿದರು. ತಾಂತ್ರಿಕ ಕಾರಣದಿಂದಾಗಿ ಆಯ್ ಬಿ ರಸ್ತೆಯ ಅಪೂರ್ಣಗೊಂಡ ವಾಣಿಜ್ಯ ಸಂಕೀರ್ಣವನ್ನು ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ಮುಂದುವರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಖಾದಿ ಮಂಡಳಿ ನಿರ್ದೇಶಕ ವಿಜಯ್ ಮಿರಾಶಿ ಸುದ್ದಿ ಗೋಷ್ಠಿಯಲ್ಲಿದ್ದರು.