ಗೋಕರ್ಣ: ಸಾಹಸ ಮಾಡದೇ ಸಾಧನೆ ಸಾಧ್ಯವಿಲ್ಲ; ಸಾಹಸ ಮಾಡಿ ಬದುಕಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಇಂಥ ಬದುಕನ್ನು ಯುವಜನಾಂಗಕ್ಕೆ ಸ್ಫೂರ್ತಿಯಾಗುವಂತೆ ಬದುಕಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಸಲಹೆ ನೀಡಿದರು.

ವಿಷ್ಣುಗುಪ್ತ ವಿಶ್ವವಿದ್ಯಾಪೀಠ ವತಿಯಿಂದ ಹಮ್ಮಿಕೊಂಡಿದ್ದ ಜ್ಞಾನ ವಿಜ್ಞಾನ ಚಿಂತನ ಸತ್ರ ಮಾಲಿಕೆಯ ಐದನೇ ವಿಚಾರ ಸಂಕಿರಣ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಉಚಿತ ಸೇತುಬಂಧ ಶಿಕ್ಷಣ ಕಾರ್ಯಕ್ರಮ ಸಮಾರೋಪದ ಸಾನ್ನಿಧ್ಯ ವಹಿಸಿ ಪರಮಪೂಜ್ಯರು ಆಶೀರ್ವಚನ ನೀಡಿದರು.
ಸಾಹಸದಲ್ಲಿ ರಿಸ್ಕ್ ಕೂಡಾ ಇದೆ. ಆದರೆ ಇಂಥ ರಿಸ್ಕ್ ತೆಗೆದುಕೊಂಡಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ಬದುಕಿನಲ್ಲಿ ಸ್ಪಷ್ಟತೆ ಮುಖ್ಯ. ಅಂತೆಯೇ ವಿದ್ಯಾರ್ಥಿಗಳಿಗೆ ಓದಿದ ವಿಷಯಗಳಲ್ಲಿ ಸ್ಪಷ್ಟತೆ ಅಗತ್ಯ. ಸೇತುಬಂಧ ಉಚಿತ ಶಿಕ್ಷಣದ ಮೂಲಕ ವಿವಿವಿ ವಿದ್ಯಾರ್ಥಿಗಳಿಗೆ ಈ ಸ್ಪಷ್ಟತೆ ಕಂಡುಕೊಳ್ಳುವ ನಿಟ್ಟಿನಲ್ಲಿ ನೆರವಾಗಿದೆ ಎಂದು ಹೇಳಿದರು.

RELATED ARTICLES  ನಾವಿದ್ದೇವೆ ಬಳಗದಿಂದ ಹನುಮನಿಗೆ ಕಣಜ ಸೇವೆ ಸಮರ್ಪಣೆ!

‘ಸಾಹಸೇ ಶ್ರೀಃ’ ವಿಷಯವಾಗಿ ಮಾತನಾಡಿದ ಖ್ಯಾತ ಉದ್ಯಮಿ, ಸಮಾಜಸೇವಕ ಎಂ.ಎಸ್.ನರಹರಿ, “ಸಾಧಿಸುವ ಛಲ ಇದ್ದರೆ ಬಡತನ ಅಡ್ಡಿಯಾಗುವುದಿಲ್ಲ; ವಾರಾನ್ನ ಉಂಡು, ಪತ್ರಿಕೆಗಳನ್ನು ಹಂಚಿ, ಟ್ಯೂಷನ್ ಹೇಳಿಕೊಡುವ ಮೂಲಕ ಕಲಿಕೆಯ ವೇಳೆಯೇ ಗಳಿಕೆಗೆ ಮುಂದಾದೆ. ಇದು ಶಿಕ್ಷಣದ ಜತೆಗೆ ಜೀವನ ಶಿಕ್ಷಣವನ್ನೂ ಕಲಿಸಿತು. ಹೂ.ವೆ.ಶೇಷಾದ್ರಿ, ಎ.ಕೃಷ್ಣಪ್ಪ ಅವರಂಥವರ ಜತೆ ಬೆಳೆದ ಸಂಸ್ಕಾರ ಜೀವನದಲ್ಲಿ ನೆರವಾಯಿತು. ಹೀಗೆ ಶೈಕ್ಷಣಿಕ ವಿಷಯಗಳ ಜತೆಗೆ ಸಂಸ್ಕಾರ ನಮ್ಮ ಜೀವನದಲ್ಲಿ ನೆರವಿಗೆ ಬರುತ್ತದೆ” ಎಂದು ಬಣ್ಣಿಸಿದರು.

ಹೊಟ್ಟೆಪಾಡಿಗಾಗಿ ಇಡೀ ದಿನ ದುಡಿಯುವ ಜಾಯಮಾನ ಬದಲಾಗಬೇಕು. ಉದ್ಯೋಗಿಗಳು ಉಳಿತಾಯವನ್ನು ಹವ್ಯಾಸವಾಗಿ ಮಾಡಿಕೊಳ್ಳಿ. ಇಂದು ಕ್ರೆಡಿಟ್‍ಕಾರ್ಡ್, ವೈಯಕ್ತಿಕ ಸಾಲ ಯೋಜನೆಗಳು ನಮ್ಮ ಗಳಿಕೆಯನ್ನು ತಿಂದು ಹಾಕಿ ಬಿಡುತ್ತವೆ. ಉಳಿತಾಯವಿಲ್ಲದೇ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ. ಗಳಿಕೆಯ ಅರ್ಧದಷ್ಟನ್ನಾದರೂ ಉಳಿತಾಯ ಮಾಡಬೇಕು. ಕಷ್ಟಕಾಲಕ್ಕೆ ಇದು ನೆರವಾಗುತ್ತದೆ ಎಂದು ಕಿವಿಮಾತು ಹೇಳಿದರು.

RELATED ARTICLES  ಸ್ಥಳೀಯ ಸಂಸ್ಥೆಗಳ ಚುನಾವಣೆ : ಮದ್ಯ ಮಾರಾಟಕ್ಕೆ ಬೀಳಲಿದೆ ಬ್ರೇಕ್.

ವಿಮೆ ನಮ್ಮ ವೈಯಕ್ತಿಕ ಹಾಗೂ ಕುಟುಂಬದ ಜೀವನಕ್ಕೆ ಸುರಕ್ಷೆ ನೀಡುತ್ತದೆ. ಆದ್ದರಿಂದ ಆರೋಗ್ಯ ಹಾಗೂ ಜೀವವಿಮೆ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಿ. ಇದು ನಮಗೆ ಮಾತ್ರವಲ್ಲದೇ ಸಮಾಜದಲ್ಲಿ ಅಕಾಲಿಕ ಸಂಕಷ್ಟಕ್ಕೆ ತುತ್ತಾದವರಿಗೂ ನೆರವಿಗೆ ಬರುತ್ತದೆ. ಅಂತೆಯೇ ಕನಿಷ್ಠ ದುಡಿಮೆಯ ಒಂದು ಪಾಲನ್ನು ಸಮಾಜಕ್ಕಾಗಿ ಮೀಸಲಿಡುವ ಮೂಲಕ ಸಮಾಜದ ಋಣ ತೀರಿಸಿ ಪ್ರಚಾರದ ಗೀಳು ಬೆಳೆಸಿಕೊಳ್ಳಬೇಡಿ ಎಂದು ಸಲಹೆ ಮಾಡಿದರು.
ವಿವಿವಿ ವಿದ್ಯಾ ಪರಿಷತ್ ಅಧ್ಯಕ್ಷ ಎಂ.ಆರ್.ಹೆಗಡೆ, ಉಪಾಧ್ಯಕ್ಷ ಮರುವಳ ನಾರಾಯಣ ಭಟ್, ಸೇತುಬಂಧದ ಸಂಯೋಜಕ ಶ್ರೀಶ ಭಟ್ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾಪರಿಷತ್ ಕಾರ್ಯದರ್ಶಿ ನೀಲಕಂಠ ಯಾಜಿ ಸ್ವಾಗತಿಸಿದರು. ವಿದ್ಯಾ ಜಿ.ಭಟ್ ನಿರೂಪಿಸಿದರು. ವಿದ್ಯಾರ್ಥಿನಿ ಪಲ್ಲವಿ ಪ್ರಾರ್ಥಿಸಿದರು.