ಕುಮಟಾ: ಮಕ್ಕಳ ಕಳ್ಳತನದ ಆರೋಪ ಹಾಗೂ ಮಕ್ಕಳ ಕಳ್ಳತನದ ಯತ್ನಗಳು ಇತ್ತೀಚಿನ ದಿನಗಳಲ್ಲಿ ಸ್ವಲ್ಪಮಟ್ಟಿಗೆ ಕಡಿಮೆಯಾಗಿತ್ತು. ಆದರೆ ಉಡುಪಿಯಿಂದ ಎರಡು ವರ್ಷದ ಮಗುವನ್ನು ಅಪಹರಿಸಿಕೊಂಡು ಬಂದಿದ್ದ ಆರೋಪಿಯನ್ನು ಕುಮಟಾ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಮಗುವಿಗೆ ತಿಂಡಿ ಕೊಡಿಸುವುದಾಗಿ ಹೇಳಿ ಪುಟ್ಟ ಮಗುವನ್ನು ಅಪಹರಣ ಮಾಡಿ ಪರಾಯಾಗುತ್ತಿದ್ದ ಆರೋಪಿಯನ್ನು ಕುಮಟಾ ಪೋಲೀಸರು ಕುಮಟಾ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಎರಡು ವರ್ಷದ ನಾಲ್ಕು ತಿಂಗಳ ಶಿವರಾಜ್ ಎನ್ನುವ ಮಗುವನ್ನು ರಕ್ಷಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಪರಶುರಾಮ್ ಹರಿಜನ ಎನ್ನಲಾಗಿದ್ದು, ಈತ ಬಾದಾಮಿಯವನು ಎಂದು ತಿಳಿದುಬಂದಿದೆ.
ಉಡುಪಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ದಂಪತಿಯ ಪರಿಚಯ ಮಾಡಿಕೊಂಡಿದ್ದ ಆರೋಪಿ, ಸಮಯ ನೋಡಿ, ತಿಂಡಿಕೊಡಿಸುವುದಾಗಿ ಹೇಳಿ ಮಗುವನ್ನು ಕರೆದುಕೊಂಡು ಬಂದು ಅಪಹರಿಸಿದ್ದ. ಎಷ್ಟು ಹೊತ್ತು ಕಳೆದರು ಮಗು ಬಾರದೆ ಇರುವುದನ್ನು ನೋಡಿ, ಆತಂಕಗೊಂಡ ಪೋಷಕರು ಪೊಲೀಸರಿಗೆ ಮಾಹಿತಿ ನೋಡಿದ್ದರು. ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದ ಪೊಲೀಸರು ಕಾರ್ಯಾಚರಣೆಗಿಳಿದಿದ್ದರು.
ಉಡುಪಿ ಪೋಲೀಸರು ನೀಡಿದ ಮಾಹಿತಿ ಮೇರೆಗೆ ತಕ್ಷಣ ಕುಮಟಾ ಪೊಲೀಸರು ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತ ಯಾವ ಉದ್ದೇಶದಿಂದ ಮಗುವನ್ನು ಅಪಹರಿಸಿದ್ದಾನೆ ಎಂಬುದು ಇನ್ನೂ ತಿಳಿದುಬಂದಿಲ್ಲ.