ಪ್ರತಿವರ್ಷ ಸೆಪ್ಟೆಂಬರ್ ಐದರಂದು ಶಿಕ್ಷಕರ ದಿನಾಚರಣೆಯ ರೂಪದಲ್ಲಿ ಆಚರಿಸಲಾಗುತ್ತಿದೆ. 1962ರಿಂದಲೂ ಆಚರಿಸಿಕೊಂಡು ಬರುತ್ತಿರುವ ಈ ದಿನ ಭಾರತೀಯ ಶಿಕ್ಷಣ ವ್ಯವಸ್ಥೆಗೆ ಅಪ್ರತಿಮ ಯೋಗದಾದ ನೀಡಿದ ಶಿಕ್ಷಕ, ದಾರ್ಶನಿಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನವೂ ಹೌದು. “ಶಿಕ್ಷಕರು ಯಾವುದೇ ದೇಶದ ಅತ್ಯುತ್ತಮ ಮೆದುಳುಗಳಾಗಬೇಕು” ಎಂದು ಡಾ. ರಾಧಾಕೃಷ್ಣನ್ ಕರೆ ನೀಡಿದ್ದರು. ಈ ದಿನವನ್ನು ದೇಶದ ಭವಿಷ್ಯವಾದ ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರ ದಿನವನ್ನಾಗಿ ಆಚರಿಸುವ ಮೂಲಕ ನಾವೆಲ್ಲರೂ ಶಿಕ್ಷಕರಿಗೆ ನೀಡುವ ಗೌರವವಾಗಿದೆ.

ಶಿಕ್ಷಕರ ದಿನಾಚರಣೆಯನ್ನು ಆಚರಿಸಲು ಸಹಾ ಒಂದು ಸಕಾರಣವಿದೆ. ಒಮ್ಮೆ ಅವರ ವಿದ್ಯಾರ್ಥಿಗಳು ಬಳಿಬಂದು ತಮ್ಮ ಹುಟ್ಟಿದ ಹಬ್ಬವನ್ನು ಬಲು ವಿಜೃಂಬಣೆಯಿಂದ ಆಚರಿಸಲಿದ್ದೇವೆ, ತಾವು ಖಂಡಿತಾ ಬರಬೇಕು ಎಂದು ಆಹ್ವಾನಿಸಿದರಂತೆ. ಅದಕ್ಕುತ್ತರವಾಗಿ ಡಾ. ರಾಧಾಕೃಷ್ಣನ್ ರವರು ಈ ದಿನವನ್ನು ತನ್ನ ಹುಟ್ಟುಹಬ್ಬವನ್ನಾಗಿ ಆಚರಿಸುವ ಬದಲು ‘ಶಿಕ್ಷಕರ ದಿನ’ವೆಂದೇಕೆ ಆಚರಿಸಬಾರದು? ಇದರಿಂದ ನನಗೆ ಹೆಚ್ಚು ಸಂತೋಷವಾಗುತ್ತದೆ ಎಂದರಂತೆ.

ಅವರ ಮಾತನ್ನು ಗಂಭೀರವಾಗಿ ಪರಿಗಣಿಸಿದ ವಿದ್ಯಾರ್ಥಿಗಳು ಅಂದಿನಿಂದಲೇ ಈ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲು ಪ್ರಾರಂಭಿಸಿದರಂತೆ. ಅಂದಿನಿಂದ ಪ್ರತಿವರ್ಷದ ಸೆಪ್ಟೆಂಬರ್ ಐದರಂದು ಶಿಕ್ಷಕರ ದಿನಾಚರಣೆಯ ರೂಪದಲ್ಲಿ ದೇಶದಾದ್ಯಂತ ಆಚರಿಸಿಕೊಳ್ಳುತ್ತಾ ಬರಲಾಗಿದೆ. ಮಕ್ಕಳ ಭವಿಷ್ಯವನ್ನು ರೂಪಿಸುವ, ಪಠ್ಯಕ್ಕಿಂತಲೂ ಹೆಚ್ಚಾಗಿ ವಿದ್ಯಾರ್ಥಿಗಳಲ್ಲಿ ವಿವೇಕ, ತಾಳ್ಮೆ, ದೂರದೃಷ್ಟಿ, ಮಾನವತೆಯನ್ನು ಬೋಧಿಸುವ, ತನ್ಮೂಲಕ ವಿದ್ಯಾರ್ಥಿಗಳನ್ನು ಭವ್ಯ ದೇಶದ ಸತ್ಪಜೆಗಳನ್ನಾಗಿ ರೂಪಿಸುವಶಿಕ್ಷಕರಿಗೆ ವಂದನೆ ಸಲ್ಲಿಸುವ ನಿಟ್ಟಿನಲ್ಲಿ ಶಿಕ್ಷಕರ ದಿನಾಚರಣೆ ಅತಿ ಮಹತ್ವದ್ದಾಗಿದೆ. ಮಕ್ಕಳ ವಿದ್ಯಾಭ್ಯಾಸ ದೇಶದ ಭವಿಷ್ಯವನ್ನೇ ಬದಲಿಸಿಬಿಡಬಲ್ಲುದು. ಒಂದು ವೇಳೆ ಯಾವುದಾದರೂ ವ್ಯಕ್ತಿ ಜೀವನದಲ್ಲಿ ಅತ್ಯಂತ ಉನ್ನತ ಸ್ಥಾನ ಪಡೆದರೆ ಅದಕ್ಕೆ ತಳಹದಿಯಾದ ಶಿಕ್ಷಕರ ಶ್ರಮವನ್ನು ಯಾರೂ ಗಮನಿಸುವುದೇ ಇಲ್ಲ.

RELATED ARTICLES  ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ?ಯಾವ ರಾಶಿಯವರಿಗೆ ಏನು ಫಲ? ಅದೃಷ್ಟ ಸಂಖ್ಯೆ ಯಾವುದು?

ಇನ್ನೊಂದು ಬದಿಯಲ್ಲಿ ಸಮಾಜಕ್ಕೆ ಕಂಟಕನಾಗಬಹುದಾಗಿದ್ದ ವಿದ್ಯಾರ್ಥಿಯ ಮನವನ್ನು ತಿದ್ದಿ ತೀಡಿ ಸಮಾಜರಕ್ಷಕನಾಗಿರುವಾಗಲೂ ಯಾರೂ ಶಿಕ್ಷಕನನ್ನು ಗಮನಿಸುವುದಿಲ್ಲ. ಆದರೆ ಶಿಕ್ಷಕರ ಈ ಶ್ರಮಕ್ಕೆ ಒಂದು ಧನ್ಯವಾದ ಹೇಳುವುದಾದರೂ ಪ್ರತಿ ಪಾಲಕರ ಕರ್ತವ್ಯವಾಗಿದೆ. ಇದಕ್ಕೆ ಶಿಕ್ಷಕರ ದಿನಾಚರಣೆ ಅತ್ಯಂತ ಸೂಕ್ತವಾದ ಸಂದರ್ಭವಾಗಿದೆ. ಈ ಅಗತ್ಯವನ್ನು ಮನಗಂಡ ದೇಶದ ಎಲ್ಲಾ ಪ್ರಮುಖ ಶಾಲೆಗಳು ತಮ್ಮ ಹಿರಿಯ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಒಂದು ದಿನದ ಮಟ್ಟಿಗೆ ಶಿಕ್ಷಕನಾಗುವ ಅವಕಾಶವನ್ನು ಮಾಡಿಕೊಡುತ್ತವೆ.

ಹೀಗೊಂದು ಅವಕಾಶ ಸಿಕ್ಕ ವಿದ್ಯಾರ್ಥಿಯೊಬ್ಬ ಸಂತೋಷದ ಅತಿರೇಕದಲ್ಲಿ ‘ಇಂದು ನಾನು ನನಗಿಷ್ಟ ಬಂದವರನ್ನು ಹೊಡೆಯುತ್ತೇನೆ’ ಎಂದನಂತೆ. ಅಂದರೆ ಆತನ ದೃಷ್ಟಿಯಲ್ಲಿ ಶಿಕ್ಷಕ ಎಂದರೆ ‘ಶಿಕ್ಷೆ ನೀಡುವವನು’ ಎಂದೇ ಅರ್ಥವಾಗುತ್ತದೆ. ವಾಸ್ತವವಾಗಿ ಶಿಕ್ಷಕರು ಒಳ್ಳೆಯ ಮಾತಿನಲ್ಲಿ ಬಗ್ಗದ ಒರಟರನ್ನು ಪಳಗಿಸಲೆಂದೇ ಶಿಕ್ಷೆಯ ಮೊರೆ ಹೋಗುತ್ತಾರೆಯೇ ಹೊರತು ಶಿಕ್ಷೆ ನೀಡುವುದು ಯಾವ ಶಿಕ್ಷಕನಿಗೂ ಇಷ್ಟವಿಲ್ಲದ ಕಾರ್ಯ. ಈ ದಿನ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ತಮ್ಮ ನೆಚ್ಚಿನ ಶಿಕ್ಷಕರಿಗೆ ಉಡುಗೊರೆ ನೀಡಿ ಮೆಚ್ಚುಗೆ ಪಡೆಯುವ ಅವಕಾಶವಾದರೆ ಶಿಕ್ಷಕರಿಗೂ ತಾವು ವಿದ್ಯಾರ್ಥಿಗಳ ವಲಯದಲ್ಲಿ ಎಷ್ಟು ಜನಪ್ರಿಯರಾಗಿದ್ದೇವೆ ಎಂದು ಅರಿಯಲು ಸಾಧ್ಯವಾಗುತ್ತದೆ. ಕೆಲವು ವಿದ್ಯಾರ್ಥಿಗಳಂತೂ ತಮ್ಮ ನೆಚ್ಚಿನ ಶಿಕ್ಷಕರಿಗಾಗಿ ಕವನಗಳನ್ನೂ ಶುಭಸಂದೇಶಗಳನ್ನೂ ಬರೆದು ಪ್ರಕಟಿಸುವುದೂ ಇದೆ.

RELATED ARTICLES  ಬೈಕ್ ಅಪಘಾತ: ಪರಮೇಶ್ವರ ಹೆಗಡೆ ಸಾವು

ಹೆಚ್ಚಿನ ವಿದ್ಯಾರ್ಥಿಗಳು ಈ ಶುಭದಿನಕ್ಕಾಗಿ ಶಕುನಹಕ್ಕಿಯಂತೆ ಕಾಯುತ್ತಿರುತ್ತಾರೆ. ಏಕೆಂದರೆ ಈ ದಿನ ಅವರಿಗೆ ಒಂದು ದಿನದ ಮಟ್ಟಿಗೆ ಶಿಕ್ಷಕನಾಗಲು ಲಭ್ಯವಾಗುವ ಅವಕಾಶ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಬಲ್ಲುದು. ಈ ದಿನದಲ್ಲಿ ಶಿಕ್ಷಕ ಎದುರಿಸುವ ಒತ್ತಡ ಮತ್ತು ಭಾರ ಹೇಗಿರುತ್ತದೆ ಎಂಬುದನ್ನು ಅನುಭವಿಸಬಹುದು. ಓರ್ವ ಉತ್ತಮ ಶಿಕ್ಷಕನಾಗಲು ಕೇವಲ ಪುಸ್ತಕದ ಬದನೇಕಾಯಿಯನ್ನು ಬದನೇಕಾಯಿಯಂತೆ ಉದುರಿಸಿದರೆ ಸಾಲದು. ಬದಲಿಗೆ ಪಠ್ಯದ ವಿಷಯವನ್ನು ಸುಲಭವಾಗಿ ಅರ್ಥೈಸಿಕೊಳ್ಳುವಂತೆ ವಿವರಿಸಿ ಪಠ್ಯ ನೆನಪಿನಲ್ಲಿ ಉಳಿಯುವಂತೆ ಮಾಡಬೇಕು.

ವಿಷಯವನ್ನು ಉರು ಹೊಡೆಯದೇ ವಿದ್ಯಾರ್ಥಿ ತನ್ನ ಸ್ವಂತ ಪದಗಳಲ್ಲಿ ಬರೆಯುವಂತಿರಬೇಕು. ಇದನ್ನು ಸಾಧಿಸುವುದು ಅಷ್ಟು ಸುಲಭವಲ್ಲ, ಇದಕ್ಕಾಗಿ ಶಿಕ್ಷಕ ವಿದ್ಯಾರ್ಥಿಯ ಮಟ್ಟಕ್ಕಿಳಿದು ಅವರ ಸ್ನೇಹಿತನಾಗಬೇಕಾಗುತ್ತದೆ. ವಿದ್ಯಾರ್ಥಿಗಳಲ್ಲಿ ಎದುರಾಗುವ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಬೇಕಾಗುತ್ತದೆ. ಈ ಪರಿಯೇ ವಿದ್ಯಾರ್ಥಿಗಳಿಗೆ ಅತಿ ಇಷ್ಟವಾಗುತ್ತದೆ ಹಾಗೂ ಜೀವನಪರ್ಯಂತ ನೆನಪಿಡಲು ಸಾಧ್ಯವಾಗುತ್ತದೆ.

ಡಾ. ರಾಧಾಕೃಷ್ಣನ್‌ರವರನ್ನು ಅವರ ವಿದ್ಯಾರ್ಥಿಗಳು ಜೀವನಪರ್ಯಂತ ನೆನಪಿನಲ್ಲಿಟ್ಟುಕೊಂಡಿರುವುದೂ ಇದೇ ಕಾರಣಕ್ಕೆ. ಒಟ್ಟಾರೆ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ನಡುವಣ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಶಿಕ್ಷಕರ ದಿನಾಚರಣೆ ಈ ವರ್ಷವೂ ಸಂತೋಷಕರವಾಗಿ ನಡೆಯಲಿ, ಪ್ರತಿ ಶಿಕ್ಷಕ / ಶಿಕ್ಷಕಿ ತನ್ನ ಕೆಲಸದ ಪರಿಪೂರ್ಣತೆಯ ಭಾವವನ್ನು ಅನುಭವಿಸುವಂತಾಗಲಿ.