ಕುಮಟಾ: ಮಳೆಗಾಲದಲ್ಲಿ ಒಂದಿಲ್ಲೊಂದು ಅಪಘಾತಗಳು ಸಾಮಾನ್ಯವಾದರೂ ಇಂದು ಉತ್ತರಕನ್ನಡದ ಹಲವೆಡೆ ವಿವಿಧ ಅಪಘಾತಗಳು ಸಂಭವಿಸಿದ್ದು ವರದಿಯಾಗಿದೆ.
ದೇವಿಮನೆ ಘಾಟ್ ನಲ್ಲಿ ಮರಕ್ಕೆ ಡಿಕ್ಕಿ ಹೊಡೆದ ಲಾರಿ
ತಾಲೂಕಿನ ದೇವಿಮನೆ ಘಾಟ್’ನಲ್ಲಿ ಬಾರೀ ಗಾತ್ರದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗಟಾರಕ್ಕೆ ಹೊಂದಿಕೊಂಡಿದ್ದ ಮರಕ್ಕೆ ಡಿಕ್ಕಿಹೊಡೆದ ದುರ್ಘಟನೆ ಇಂದು ಸಂಭವಿಸಿದೆ. ತಮಿಳುನಾಡು ನೋಂದಣಿ ವಾಹನ ಇದಾಗಿದ್ದು, ದೇವಿಮನೆ ಘಾಟ್ ನ ತಿರುವಿನಲ್ಲಿ ಈ ಇಯಂತ್ರಣ ತಪ್ಪಿದ ವಾಹನ ಎದುರಿನ ಮರಕ್ಕೆ ಅಪ್ಪಳಿಸಿದ್ದು, ಪ್ರಾಣಹಾನಿಯಾಗಿದ್ದರ ಕುರಿತು ವರದಿಯಾಗಿಲ್ಲ.
ಕಾರು ಮತ್ತು ಗೂಡ್ಸ್ ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿ
ಕಾರವಾರ ತಾಲೂಕಿನ ಬೈತಖೋಲ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರು ಮತ್ತು ಗೂಡ್ಸ್ ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿಯಾಗಿ ಪಾರ್ಶ್ವವಾಯು ಚಿಕಿತ್ಸೆಗೆ ತೆರಳುತ್ತಿದ್ದ ಮೂವರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಗಾಯಗೊಂಡವರನ್ನು ಗದಗ ಜಿಲ್ಲೆಯ ರೋಣ ಮೂಲದವರೆಂದು ಗುರುತಿಸಲಾಗಿದೆ. ಮೂವರು ಕಾರಿನಲ್ಲಿ ಕಾರವಾರದ ಹಳಗಾ ಆಸ್ಪತ್ರೆಗೆ ಪಾರ್ಶ್ವ ವಾಯು ಚಿಕಿತ್ಸೆಗೆ ತೆರಳುತ್ತಿದ್ದರು.
ಆದರೆ ಬೈತಖೋಲ್ ಬಳಿ ಗೂಡ್ಸ್ ರಿಕ್ಷಾಗೆ ಡಿಕ್ಕಿಯಾಗಿ ಹೆದ್ದಾರಿಯಲ್ಲಿ ಸಂಪೂರ್ಣ ಸಂಚಾರ ಬಂದಾಗಿದೆ. ವಾಹನವನ್ನು ತೆರೆಯಲು ಸಾಧ್ಯವಾಗದ ಕಾರಣ ಸುಮಾರು ಒಂದು ತಾಸಿಗೂ ಹೆಚ್ಚಿನ ಕಾಲ ಟ್ರಾಫಿಕ್ ಜಾಮ್ ಸಂಭವಿಸಿ ನಾಲ್ಕೈದು ಕಿ.ಮಿ ದೂರದ ವರೆಗೂ ವಾಹನಗಳು ಸಾಲುಗಟ್ಟಿದ್ದವು.