ಕಾರವಾರ : ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸುವ ಸಿದ್ಧತೆಗಳು ನಡೆದಿದ್ದವು. ಆದರೆ ಇದೀಗಿನ ಮಾಹಿತಿಯ ಪ್ರಕಾರ ಕೊನೆಕ್ಷಣದಲ್ಲಿ ಕಾರ್ಯಕ್ರಮ ರದ್ದಾಗಿದೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಜುಲೈ 16ರಂದು ಜಿಲ್ಲೆಗೆ ಆಗಮಿಸಿ,ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವವರಿದ್ದರು.
ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ, ನಾಡದೊರೆಯ ಕೈಯಿಂದಲೇ ರೂ 150 ಕೋಟಿ ಅಂದಾಜು ವೆಚ್ಚದ ಆಸ್ಪತ್ರೆ ನಿರ್ಮಾಣ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಲು ವಿಶೇಷ ಪ್ರಯತ್ನ ನಡೆಸಿದ್ದರು. ಜಿಲ್ಲಾಡಳಿತ ಸಹ ಸಿಎಂ ಸ್ವಾಗತಕ್ಕೆ ನಗರವನ್ನು ಸಜ್ಜುಗೊಳಿಸುತಿತ್ತು.
ಪೂರ್ವನಿಗದಿಯಂತೆ ಜುಲೈ 16 ರಂದು ಮುಹೂರ್ತ ಪಿಕ್ಸ ಮಾಡಲಾಗಿತ್ತಾದರೂ, ಧಾರಾಕಾರವಾಗಿ ಸುರಿಯುತ್ತಿರುವ ಮಳೆ,ಪ್ರತಿಕೂಲ ಹವಾಮಾನ ಮತ್ತಿತರ ಕಾರಣಗಳಿಂದ ಸಿಎಂ ಭೇಟಿ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.
ಜುಲೈ23 ಇಲ್ಲವೇ ಬೇರೆ ದಿನಗಳಲ್ಲಿ ಸಿಎಂ ಕಾರವಾರಕ್ಕೆ ಬರಲಿದ್ದಾರೆ ಎನ್ನಲಾಗಿದೆ. ಸಿಎಂ ಬರುವಿಕೆಗಾಗಿ ಕಾದಿದ್ದ ಹಲವು ಜನಪ್ರತಿನಿಧಿಗಳು, ಪಕ್ಷದ ಮುಖಂಡರು,ಕಾರ್ಯಕರ್ತರಿಗೆ ಇದರಿಂದಾಗಿ ಬೇಸರವಾದಂತಾಗಿದೆ.
ಅನೇಕ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯ ನಿಮಿತ್ತ ಇನ್ನೊಮ್ಮೆಯಾದರೂ ಸಿ.ಎಂ ಉತ್ತರಕನ್ನಡಕ್ಕೆ ಆಗಮಿಸಲಿದ್ದಾರೆ ಎಂಬುದು ಜನತೆಗೆ ಸಂತೋಷದ ಸುದ್ದಿಯಾಗಿ ಉಳಿದಿದೆ.