ಹೊನ್ನಾವರ : ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಒಂದಿಲ್ಲೊಂದು ಅವಾಂತರ ಸೃಷ್ಟಿಯಟಗುತ್ತಿದೆ. ಎಡಬಿಡದೆ ಸುರಿಯುತ್ತಿರುವ ಮಳೆಗೆ ಜನಜೀವನ ಅಲ್ಲೊಲ ಕಲ್ಲೋಲವಾಗಿದೆ.
ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮ ಪಂಚಾಯತ ವ್ಯಾಪ್ತಿಯ ಹೊರೆಸಾಲದಲ್ಲಿ ರಸ್ತೆಯ ಮೇಲೆ ಗುಡ್ಡ ಕುಸಿತವಾಗಿ ಅಲ್ಲಿ ವಾಸಿಸುತ್ತಿರುವ ಮನೆಯವರಿಗೆ ಮತ್ತು ರಸ್ತೆಯ ಮೇಲೆ ಓಡಾಡುವವರು ಕೆಲಕಾಲ ಆತಂಕ ಪಡುವ ವಾತಾವರಣ ನಿರ್ಮಾಣವಾಗಿತ್ತು.
ಹೊರೆಸಾಲ ರಸ್ತೆಯ ಮೇಲೆ ಪ್ರತಿದಿನ ಸಾವಿರಾರು ಜನ ಸಂಚರಿಸುತ್ತಿದ್ದು, ಸುಮಾರು ಅರ್ಧ ಕಿ. ಮೀ. ಅಷ್ಟು ಗುಡ್ಡ ಕಟಾವು ಮಾಡಿ ರಸ್ತೆ ನಿರ್ಮಿಸಿರುವುದರಿಂದ ಸಂಚರಿಸಲು ಭಯ ಪಡುವಂತಾಗಿದೆ.
ಜಿಲ್ಲೆಯಲ್ಲಿ ಕಳೆದ ಕೆಲ ದಿನದಿಂದ ಮಳೆಯ ಆರ್ಭಟ ಜೋರಾಗಿದ್ದು, ಈ ಮಧ್ಯೆ ಇಲ್ಲಿ ಗುಡ್ಡ ಕುಸಿತ ಅಪಾಯ ಕಾಡುತ್ತಿದೆ. ಕೆಲವೆಡೆ ರಸ್ತೆ ಸಂಪರ್ಕ ಕಡಿತವಾಗುವ ಹಂತದಲ್ಲಿದೆ ಎನ್ನಲಾಗಿದೆ.
ಗುಡ್ಡದ ಅಂಚಿನಲ್ಲಿ ೫ ರಿಂದ ೬ ಮನೆಗಳಿದ್ದು , ಇದು ಇನ್ನಷ್ಟು ಆತಂಕ ಹೆಚ್ಚಿಸಿದೆ. ಈಗಾಗಲೇ ಈ ಹಿಂದೆ ೩ ಲಕ್ಷ ರೂ. ವೆಚ್ಚದಲ್ಲಿ ಐವತ್ತು ಮೀ. ರಷ್ಟು ತಡೆಗೋಡೆ ನಿರ್ಮಿಸಿದ್ದಾರೆ. ಇನ್ನೂ ಬಾಕಿ ಉಳಿದ ಗುಡ್ಡಕ್ಕೆ ತಡೆಗೋಡೆ ನಿರ್ಮಿಸಬೇಕಾಗಿದೆ.
ಅನಾಹುತ ಸಂಭವಿಸುವ ಮೊದಲು ಜನಪ್ರತಿನಿಧಿಗಳು ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಸಮಸ್ಯೆ ಬಗೆಹರಿಸಿ ಎನ್ನುವುದು ಸ್ಥಳೀಯರ ಅಗ್ರಹವಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಾಗಿದೆ.