ಕಾರವಾರ: ಪುರಾಣ ಪ್ರಸಿದ್ಧ ಶಿವದೇವಾಲಯ ಗೋಕರ್ಣದ ಮಹಾಬಲೇಶ್ವರ ದೇವಾಲಯದಲ್ಲಿ ಅಂತರಗಂಗೆಯು ಒಂದೇ ವರ್ಷದಲ್ಲಿ ಎರಡು ಬಾರಿ ಆತ್ಮಲಿಂಗವನ್ನು ಸ್ಪರ್ಶಿಸಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಗೋಕರ್ಣದ ಪ್ರಸಿದ್ಧ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ನೀರು ತುಂಬಿದೆ ಎನ್ನಲಾಗಿದೆ.
ಆತ್ಮಲಿಂಗ ಜಲಾವೃತಗೊಂಡು ನಿತ್ಯ ಪೂಜಾ ವಿಧಿ ವಿಧಾನಕ್ಕೆ ಕೆಲಕಾಲ ವಿಳಂಬವಾಗಿತ್ತು. ಈ ಸಂಬoಧ ತಕ್ಷಣ ದೇವಾಲಯದ ಸಿಬ್ಬಂದಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವರ ಉಪಸ್ಥಿತಿಯಲ್ಲಿ ಸಿಬ್ಬಂದಿಗಳೇ ದೇವಾಲಯದ ಒಳಗಿನಿಂದ ನೀರು ಹೊರಹಾಕುವ ಮೂಲಕ , ದೇವಾಲಯವನ್ನು ಸ್ವಚ್ಛಗೊಳಿಸಿದ್ದಾರೆ.
ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಗೋಕರ್ಣ ಮಹಾಬಲೇಶ್ವರನ ಗರ್ಭಗುಡಿಯಲ್ಲಿ ನೀರು ತುಂಬಿದ ದಾಖಲೆಗಳಿಲ್ಲ. ಆದರೆ ಆಡಳಿತದ ನಿರ್ಲಕ್ಷ್ಯದಿಂದ ಇದೇ ವರ್ಷದಲ್ಲಿ ಎರಡನೇ ಬಾರಿ ನೀರು ಗರ್ಭಗುಡಿ ಪ್ರವೇಶಿಸಿದೆ.
ವಿಷಯ ತಿಳಿದ ದೇವಸ್ಥಾನದ ಆಡಳಿತ ಮಂಡಳಿ ದೇವರ ಪೂಜಾ ಕಾರ್ಯಕ್ಕೆ ತೊಂದರೆಯಾಗದಂತೆ ನೀರನ್ನು ಖಾಲಿ ಮಾಡಿ ಸ್ವಚ್ಛಗೊಳಿಸಿದೆ. ಅಭಿಷೇಕದ ನೀರು ಸೋಮಸೂತ್ರ ನಾಲೆಯ ಮೂಲಕ ಸಮುದ್ರಕ್ಕೆ ಹೋಗುತ್ತದೆ. ಪ್ರತಿ ವರ್ಷ ನೀರು ಹೋಗಲು ನಾಲಾದಲ್ಲಿ ಸ್ವಚ್ಛ ಕಾರ್ಯ ಮಾಡಲಾಗುತ್ತದೆ. ಈ ಬಾರಿ ಈ ಕೆಲಸವಾಗಿಲ್ಲ. ಗರ್ಭಗುಡಿಯ ನೀರು ಹೋಗುವ ಭಾಗದ ಸ್ಥಳವನ್ನು ಬಂದ್ ಮಾಡಿರುವುದೂ ಕೂಡ ನೀರು ಗರ್ಭಗುಡಿ ಪ್ರವೇಶಿಸಲು ಕಾರಣ ಎಂದು ಸ್ಥಳೀಯರು ದೂರಿದ್ದಾರೆ.
ಗರ್ಭಗುಡಿಯ ನೀರು ಹೋಗುವ ಭಾಗದ ಸ್ಥಳವನ್ನು ಕೂಡ ಬಂದ್ ಮಾಡಲಾಗಿದೆ ಎನ್ನಲಾಗಿದ್ದು, ಜಲವಡೆದಾಗ ನೀರು ನಾಲದಲ್ಲಿ ಹೋಗದೇ ಹಿಮ್ಮುಖವಾಗಿ ಚಲಿಸಿ ಗರ್ಭಗುಡಿಗೆ ಬರುತ್ತಿದೆ ಎಂಬುದು ಕೆಲ ಸಾರ್ವಜನಿಕರ ದೂರು. ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸಿಕೊಡಬೇಕೆಂದು ಭಕ್ತರು ಆಗ್ರಹಿಸಿದ್ದಾರೆ.