ಶಿರಸಿ: ವಿಶ್ವಸಂಸ್ಥೆಯ ಈ ವರ್ಷದ ‘ಈಕ್ವೆಟರ್ 2021’ ಪ್ರಶಸ್ತಿಯನ್ನು ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದ ರಾಂಪತ್ರೆ ಜಡ್ಡಿ ಸಂರಕ್ಷಣಾ ಕಾರ್ಯಕ್ಕೆ ನೀಡಿ ಗೌರವಿಸಿದೆ.
ನರಸಿಂಹ ಹೆಗಡೆ ನೇತೃತ್ವದ ತಂಡ ಹಲವು ವರ್ಷಗಳ ಕಾಲ ಸ್ನೇಹಕುಂಜ ಸಂಸ್ಥೆಯ ಮುಖೇನ ರಾಂಪತ್ರೆ ಜಡ್ಡಿ ಪಾರಿಸಾರಿಕ ಪುನಶ್ಚೇತನ ಕೆಲಸವನ್ನು ಜನಸಹಭಾಗಿತ್ವದಲ್ಲಿ ಕೈಗೊಂಡು ಯಶಸ್ವಿಯಾಗಿಸಿತ್ತು. 130 ದೇಶಗಳ 600 ಕ್ಕೂ ಹೆಚ್ಚು ನಾಮ ನಿರ್ದೇಶಿತಗೊಂಡವುಗಳಲ್ಲಿ ಅಂತಿಮವಾಗಿ ಸ್ನೇಹಕುಂಜ ಸಂಸ್ಥೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಾಮಾನ್ಯವಾಗಿ ವಿಶ್ವಸಂಸ್ಥೆಯ ಕೇಂದ್ರ ಕಛೇರಿ ನ್ಯೂಯಾರ್ಕನಲ್ಲಿ ವಾರಗಳ ಕಾಲ ನಡೆಯುವ ವಾರ್ಷಿಕ ಅಧಿವೇಶನದಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿತ್ತು. ಆದರೆ ಕೊರೋನಾ ಕಾರಣ ಪ್ರಶಸ್ತಿ ಸಮಾರಂಭ ಆನ್‍ಲೈನ್ ನಡೆಯಲಿದ್ದು, ಪ್ರಶಸ್ತಿಯ ಮೊತ್ತ ಹತ್ತು ಸಾವಿರ ಅಮೇರಿಕನ್ ಡಾಲರ್ ಆಗಿದೆ (ಸುಮಾರು ಏಳೂವರೆ ಲಕ್ಷ ರೂಪಾಯಿಗಳು).
ನಿಸರ್ಗ ಆಧಾರಿತ ಹವಾಮಾನ ವೈಪರೀತ್ಯ ತಡೆಗೆ ಕೈಗೊಂಡ ಕೆಲಸಗಳು, ಜೀವ ವೈವಿಧ್ಯತೆಯ ರಕ್ಷಣೆ, ಸ್ಥಳೀಯ ಜನರ ಸುಸ್ಥಿರ ಜೀವನಾಭಿವೃದ್ಧಿ ಕ್ರಮಕ್ಕೆ ಪ್ರೋತ್ಸಾಹ, ಇವನ್ನೆಲ್ಲ ನವೀನ ರೀತಿಯಲ್ಲಿ ಕಾರ್ಯಗತಗೊಳಿಸಿರುವುದು, ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಧ್ಯೇಯಕ್ಕೆ ಸ್ಥಳೀಯ ಕೊಡುಗೆ ಇವು ಪ್ರಶಸ್ತಿಗೆ ಮಾನದಂಡಗಳು.
ಅಪರೂಪದ ರಾಂಪತ್ರೆ ಜಡ್ಡಿ ಕಾಡುಗಳನ್ನು ಗುರುತಿಸಿ ನಕಾಶೆ ತಯಾರಿಸಿರುವುದು, ಅವುಗಳು ಎದುರಿಸುತ್ತಿರುವ ಸಮಸ್ಯೆ ಮತ್ತು ಪರಿಹಾರೋಪಾಯಗಳು, ಸ್ಥಳೀಯರೊಡನೆ ಸೇರಿ ಅಲ್ಲಿಯದೇ ಸಸ್ಯಗಳ ನರ್ಸರಿ ತಯಾರಿಕೆ, ಅವುಗಳನ್ನು ಸೂಕ್ತ ಮತ್ತು ಅವನತಿ ಹೊಂದುತ್ತಿರುವ ಜಡ್ಡಿ ಕಾಡುಗಳಲ್ಲಿ ವೈಜ್ಞಾನಿಕವಾಗಿ ನೆಟ್ಟು ಬೆಳೆಸುವ ಕೆಲಸವನ್ನು ಮಾಡಲಾಗಿತ್ತು. ನಿರಂತರವಾಗಿ ಅವುಗಳ ಸಂರಕ್ಷಣಾ ಮಹತ್ವವನ್ನು ಕಾರ್ಯಾಗಾರ, ತರಬೇತಿ ಏರ್ಪಡಿಸುವ ಮುಖಾಂತರ ತಿಳಿಸುವ ಪ್ರಯತ್ನ ಮಾಡಲಾಗಿತ್ತು.
ಇದರ ಜೊತೆಯಲ್ಲಿ ಅರಣ್ಯಾವಲಂಬಿ ಜೀವನಾಭಿವೃದ್ದಿ ಕ್ರಮಗಳನ್ನು ಪ್ರೋತ್ಸಾಹಿಸುವುದು ಸಾಂಘಿಕ ಜೇನು ಕೃಷಿ, ಉಪವನ ಉತ್ಪನ್ನಗಳ ಮೌಲ್ಯವರ್ಧನೆ, ಶುದ್ಧ ಇಂಧನ ಬಳಸಿ ಕಿರು ಉದ್ದಿಮೆಗಳನ್ನು ಪ್ರೋತ್ಸಾಹಿಸುವ ಕೆಲಸಗಳನ್ನು ಕೈಗೊಳ್ಳಲಾಗಿತ್ತು.
ಐ.ಎಫ್.ಎಚ್.ಡಿ ಸಂಸ್ಥೆಯ ಮುಖ್ಯಸ್ಥೆ ಅರುಣಾ, ಇತರ ಸಹೋದ್ಯೋಗಿಗಳಾದ ನಿಕು ಹಾಗೂ ಪ್ರತೀಕ್ ಪೂರಕ ಮಾಹಿತಿಯನ್ನು ವಿಶ್ವಸಂಸ್ಥೆಗೆ ಸಲ್ಲಿಸುವಲ್ಲಿ ನೆರವಾಗಿದ್ದರು.
ಅಪರೂಪದ ಜೌಗು ಪ್ರದೇಶದ ಕಾಡಿನ ಸಂರಕ್ಷಣೆ, ಜಾಗತಿಕ ಹವಾಮಾನ ವೈಪರೀತ್ಯ ತಡೆಗೆ ಪ್ರಯತ್ನ, ಆರ್ಥಿಕ ಹಾಗೂ ಅಭಿವೃದ್ಧಿ ಮಾದರಿಯಲ್ಲಿ ಧನಾತ್ಮಕ ಬದಲಾವಣೆಯನ್ನು ತಳಮಟ್ಟದಿಂದ ಹಿಡಿದು ನೀತಿ ನಿರೂಪಕರವರೆಗೆ ಕೊಂಡೊಯ್ದದ್ದು ಹಾಗೂ ಇವು ಭೂಗೃಹ ಎದುರಿಸುತ್ತಿರುವ ಸವಾಲು ಎದುರಿಸಲು ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಪುನಶ್ಚೇತನಕ್ಕೆ ಪೂರಕ ಅಂಶಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆಯೆಂದು ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮದ ಮುಖ್ಯಸ್ಥರಾದ ಅಚಿಮ್ ಸ್ಟೈನರ್ ನ್ಯೂ ಯಾರ್ಕನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.