ಕಾರವಾರ : ಬೇರೆ ಬೇರೆ ಹೆಸರಿನಲ್ಲಿ ಬೇರೆ ಬೇರೆ ವೇಷದಲ್ಲಿ ಸಾಮಾನ್ಯ ಜನರನ್ನು ವಂಚಿಸುವ ಪ್ರಕರಣಗಳು ಒಂದೆಡೆಯಾದರೆ. ಶಾಸಕರಿಗೇ ಸುಳ್ಳು ಹೇಳಿ ವಂಚಿಸಿ ಹಣ ಪಡೆದಿದ್ದ ಆರೋಪಿಯನ್ನು ಇಂದು ಪೊಲೀಸರು ಪತ್ತೆ ಹಚ್ಚಿರುವ ಘಟನೆ ವರದಿಯಾಗಿದೆ.
ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಅವರ ಬಳಿ ಶಾಸಕ ಎನ್.ಮಹೇಶ್ ಅವರ ಆಪ್ತ ಸಹಾಯಕ ಎಂದು ಸುಳ್ಳು ಹೇಳಿ 50 ಸಾವಿರ ರೂಪಾಯಿ ಹಣ ಪಡೆದು ಮೋಸ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಮನಗರದ ಕನಕಪುರ ತಾಲ್ಲೂಕಿನ ದೊಡ್ಡಮಳಲವಾಡಿ ಗ್ರಾಮದ ಸಚಿನ್ ಗೌಡ ಎಂಬಾತ ಈತ ಮೊದಲು ಶಾಸಕಿ ರೂಪಾಲಿ ನಾಯ್ಕ ಅವರಿಗೆ ದೂರವಾಣಿ ಕರೆ ಮಾಡಿ, ಶಾಸಕ ಎನ್.ಮಹೇಶ್ ಅವರ ಪಿಎ ಎಂಬುದಾಗಿ ಹೇಳಿ, ಅರ್ಜೆಂಟಾಗಿ 50 ಸಾವಿರ ರೂಪಾಯಿ ಹಣ ಕೊಡುವಂತೆ ಹೇಳಿದ್ದಾನೆ.ಸ್ನೇಹಿತನ ಬ್ಯಾಂಕ್ ಬ್ಯಾಂಕ್ ಖಾತೆ ನಂಬರ್ ಮೆಸೇಜ್ ಮಾಡಿ, ಅದಕ್ಕೆ ಹಣ ಹಾಕಿಸಿಕೊಂಡಿದ್ದಾನೆ. ಇದಾದ ಬಳಿಕ ಸ್ನೇಹಿತ ಮಹೇಶ್‌ಗೆ ಒಂದು ಸಾವಿರ ರೂಪಾಯಿ ಕೊಟ್ಟು 49 ಸಾವಿರ ತೆಗೆದುಕೊಂಡಿದ್ದಾನೆ ಎನ್ನಲಾಗಿದೆ.
ಆದರೆ ಈ ಘಟನೆ ನಡೆದ ಬಳಿಕ ಶಾಸಕ ಎನ್.ಮಹೇಶ್ ಮತ್ತು ಶಾಸಕಿ ರೂಪಾಲಿ ನಾಯ್ಕ ಬೆಂಗಳೂರಿನಲ್ಲಿ ಮುಖಾಮುಖಿ ಭೇಟಿಯಾದಾಗ ಈ ಹಣ ಕೇಳಿದ ವಿಚಾರ ಚರ್ಚಿತವಾಗಿದೆ.
ಈ ವೇಳೆ ಶಾಸಕ ಮಹೇಶ್ ಪಿಎ ಮಹಾದೇವಸ್ವಾಮಿ ದೂರು ಕೊಟ್ಟಿದ್ದು, ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು, ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಶಾಸಕರಿಗೇ ವಂಚಿಸ ಹೊರಟವನು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.