ಭಟ್ಕಳ: ಮೇಯಲು ಬಿಟ್ಟ ದನವೊಂದನ್ನು ಕಾಡಿನ ನಡುವೆ ಕತ್ತರಿಸಿ ಮಾಂಸವನ್ನು ಕದ್ದೊಯ್ಯಲು ಯತ್ನಿಸುತ್ತಿರುವಾಗಲೇ, ದನವನ್ನು ಹುಡುಕುತ್ತ ಬಂದ ಮಾಲಕನನ್ನು ಕಂಡ ಆರೋಪಿಗಳು ಸ್ಕೂಟರ್‍ನಲ್ಲಿ ಪರಾರಿಯಾಗಿರುವ ಘಟನೆ ತಾಲೂಕಿನ ಮಾರುಕೇರಿ ಕೋಟಖಂಡ ಕ್ರಾಸ್ ಸಮೀಪ ಮಂಗಳವಾರ ಸಂಜೆ ನಡೆದಿದೆ.

ತಾಲೂಕಿನ ಮಾರುಕೇರಿ ಕೋಟಖಂಡ ನಿವಾಸಿ ಸುಕ್ರ ಸಣ್ಣು ಗೊಂಡ ಎಂಬುವವರಿಗೆ ಸೇರಿದ ದನ ಇದಾಗಿದ್ದು, ಇವರು ಸ್ಥಳಕ್ಕೆ ಬರುವ ಮೊದಲೇ ಗೋಕಳ್ಳರು ರುಂಡವನ್ನು ದೇಹದಿಂದ ಬೇರ್ಪಡಿಸಿರುವುದು ಕಂಡು ಬಂದಿದೆ. ಕೊಲ್ಲಲ್ಪಟ್ಟ ದನವು ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೇ 3ನೇ ಕರುವಿಗೆ ಜನ್ಮ ನೀಡಿತ್ತು. ಉಳಿದ ಜಾನುವಾರುಗಳೊಂದಿಗೆ ಕಾಡಿನ ಪ್ರದೇಶಕ್ಕೆ ಮೇಯಲು ತೆರಳಿದ್ದ ಸದರಿ ಆಕಳು ಸಂಜೆಯಾದರೂ ಕೊಟ್ಟಿಗೆಗೆ ಬಾರದೇ ಇದ್ದಾಗ ಅದನ್ನು ಹುಡುಕುತ್ತ ಹೊರಟ ಸುಕ್ರ ಗೊಂಡರಿಗೆ ದೂರದಲ್ಲಿ ಮರ, ಗಿಡಗಂಟಿಗಳ ನಡುವೆ ಅನಾಮಿಕರು ಆಕಳನ್ನು ಕತ್ತರಿಸುವುದನ್ನು ಕಂಡು ಅತ್ತ ಓಡಿದ್ದಾರೆ. ಅವರು ಸ್ಥಳಕ್ಕೆ ಬರುವಷ್ಟರಲ್ಲಿ ಆರೋಪಿಗಳು ರಸ್ತೆಯಂಚಿನಲ್ಲಿ ಈ ಮೊದಲೇ ನಿಲ್ಲಿಸಿಟ್ಟ ಸ್ಕೂಟರ್‍ನಲ್ಲಿ ಪರಾರಿಯಾಗಿದ್ದಾರೆ. ಆರೋಪಿಗಳನ್ನು ಹಿಡಿಯುವಂತೆ ಸುಕ್ರಗೊಂಡ ಕೂಗಿಕೊಂಡರಾದರೂ ಯಾವುದೇ ಫಲ ನೀಡಿಲ್ಲ ಎಂದು ತಿಳಿದು ಬಂದಿದೆ.

RELATED ARTICLES  ದಿನಾಂಕ 26/06/2019 ರ ದಿನ ಭವಿಷ್ಯ ಇಲ್ಲಿದೆ.

ದನದ ಹತ್ಯೆ ಮಾರುಕೇರಿ ಕೋಟಖಂಡ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಚಲನವನ್ನು ಉಂಟು ಮಾಡಿದ್ದು, ಅಲ್ಲಿನ ನಿವಾಸಿಗಳು ಸ್ಥಳದಲ್ಲಿ ಜಮಾಯಿಸಿ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾರುಕೇರಿ ಗ್ರಾಪಂ ಅಧ್ಯಕ್ಷ ಮಾಸ್ತಿ ಗೊಂಡ, ಸ್ಥಳೀಯ ಮುಖಂಡ ಎಮ್.ಡಿ.ನಾಯ್ಕ ಮತ್ತಿತರು ಸ್ಥಳಕ್ಕೆ ಆಗಮಿಸಿ ಆರೋಪಿಗಳ ಪತ್ತೆಗೆ ಆಗ್ರಹಿಸಿದರು. ಸಿಪಿಐ ದಿವಾಕರ, ಎಸೈ ಭರತ್, ಎಸೈ ಸುಮಾ ಸಿಬ್ಬಂದಿಗಳೊಡನೆ ಸ್ಥಳಕ್ಕೆ ದೌಡಾಯಿಸಿ ಬಂದಿದ್ದು, ಘಟನೆಯ ಬಗ್ಗೆ ದನದ ಮಾಲಕರಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಪಶುವೈದ್ಯ ಡಾ.ವಿವೇಕಾನಂದ ಹೆಗಡೆ ಅವರನ್ನು ಸ್ಥಳಕ್ಕೆ ಕರೆಯಿಸಿಕೊಳ್ಳಲಾಗಿದ್ದು, ಪಂಚನಾಮೆ ನಡೆಸಲಾಗಿದೆ. ಈ ಕುರಿತು ಮಾತನಾಡಿರುವ ಸಿಪಿಐ ದಿವಾಕರ, ಜಾನುವಾರು ಅಕ್ರಮ ಸಾಗಾಟಕ್ಕೆ ಬ್ರೇಕ್ ಹಾಕಿದ್ದೇವೆ. ಕಾಡಿನ ನಡುವೆ ದನವನ್ನು ಹತ್ಯೆಗೈದ ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸುವುದಾಗಿ ತಿಳಿಸಿದ್ದಾರೆ.

RELATED ARTICLES  ಹಾಡು ಹಗಲೇ ಅಂಗಡಿ ಕಳುವು ! ಲಕ್ಷಾಂತರ ರೂ ಲಪಟಾಯಿಸಿದ ಕಳ್ಳರು.

Source: FaceBook