ಕುಮಟಾ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕುಮಟಾ ಘಟಕದ ವತಿಯಿಂದ ಪಟ್ಟಣದ ನಾದಶ್ರೀ ಕಲಾಕೇಂದ್ರದಲ್ಲಿ ಪತ್ರಿಕಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಾಮಾಜಿಕ ಕಾರ್ಯಕರ್ತ ಹಾಗೂ ಉದ್ಯಮಿ ಮುರಳೀಧರ ಪ್ರಭು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುರಳೀಧರ ಪ್ರಭುರವರು ಪತ್ರಿಕಾ ರಂಗ ಎನ್ನುವುದು ಪ್ರಜಾಪ್ರಭುತ್ವದ ನಾಲ್ಕನೇಯ ಅಂಗ ಎಂದೇ ಬಿಂಬಿತವಾಗಿದೆ. ಆದರೆ ಕಾರ್ಯಾಂಗ ನ್ಯಾಯಾಂಗದಲ್ಲಿ ಕಾರ್ಯ ಮಾಡುವವರಿಗೆ ಸಂಬಳಗಳಿದೆ, ಶಾಸಕಾಂಗದಲ್ಲಿ ಸೌಲತ್ತುಗಳಿದೆ, ಪತ್ರಿಕಾ ರಂಗದವರು ಮಾತ್ರ ಯಾವುದನ್ನೂ ಬಯಸದೇ ಕಾರ್ಯ ಮಾಡುತ್ತಿದ್ದಾರೆ. ಹೀಗಾಗಿ ಪತ್ರಕರ್ತರು ತಮಗಾಗಿಯೂ ಧ್ವನಿ ಎತ್ತುವುದು ಇಂದಿನ ಅಗತ್ಯತೆಯಂತೆ ಭಾಸವಾಗುತ್ತಿದೆ ಎಂದರು.

ಪ್ರಸ್ತುತ ಪತ್ರಕರ್ತರ ಸಾಂಪತ್ತಿಕ ಪರಿಸ್ಥಿತಿ ತೀರಾ ಕಷ್ಟವಾಗಿದೆ ಎಂಬ ವಿಷಯ ತಿಳಿದು ಆಶ್ಚರ್ಯವಾಯಿತು. ಕಾರ್ಯಕ್ಕೆ ಸೂಕ್ತ ಸಂಬಳ, ನಿವೃತ್ತಿ ವೇತನಗಳು ಇಲ್ಲದೆ ಪತ್ರಕರ್ತರು ಕಷ್ಟಪಡುವ ಪರಿಸ್ಥಿತಿ ಬಗ್ಗೆ ಖೇಧ ವ್ಯಕ್ತಪಡಿಸಿದ ಅವರು. ಸದಾಕಾಲ ಸಮಾಜದ ಧ್ವನಿಯಾಗಿ ಕಾರ್ಯ ಮಾಡುವ ಪತ್ರಕರ್ತರು, ತಮ್ಮ ಬದುಕಿನ ಬಗ್ಗೆಯೂ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ ಎಂದರು.

RELATED ARTICLES  ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿಯವರಿಗೆ ಮಾತೃ ವಿಯೋಗ

ಯಾವುದೇ ಒಂದು ಪ್ರದೇಶದ ಅಥವಾ ಜನರ ಅಭಿವೃದ್ಧಿಯಾಗಬೇಕಾದರೆ ಆ ಕುರಿತಾದ ಪೂರ್ವಾಪರದ ಯೋಜನೆಗಳು ಬೇಕು. ಅಂತಹ ಯೋಜನೆಗಳನ್ನು ರೂಪಿಸಲು ಚಿಂತಕರ ಕೂಟ ರಚನೆಯಾಗಬೇಕಿದ್ದು, ಶಾಸಕರು ಹಾಗೂ ಸಂಸದರುಗಳಿಗೂ ಈ ವಿಷಯವನ್ನು ಗಮನಕ್ಕೆ ತಂದಿರುವೆನಾದರೂ ಅವರು ಈ ಬಗ್ಗೆ ಕಾರ್ಯ ಮಾಡುವ ಮನಸ್ಥಿತಿ ಹೊಂದಿಲ್ಲದಂತೆ ಭಾಸವಾಗುತ್ತಿದೆ. ಡೆವಲಪ್ಮೆಂಟ್ ಕೌನ್ಸಿಲ್ ರಚನೆ ಮಾಡುವತ್ತ ಪತ್ರಕರ್ತರು ಕಾರ್ಯಮಾಡಿದರೆ ಹೊಸ ಸಮಾಜಮುಖಿ ಚಿಂತನೆಗೆ ದಾರಿಯಾಗಲಿದೆ ಎಂದರು. ಇ-ಸ್ವತ್ತು, ಒಳಚರಂಡಿ, ಆಧಾರ್ ಕಾರ್ಡ್ ಈರೀತಿಯ ಸರಕಾರಿ ಯೋಜನೆಗಳಲ್ಲಿ ಆಗುತ್ತಿರುವ ಗೊಂದಲಗಳ ಬಗ್ಗೆ ಪತ್ರಕರ್ತರು ಧ್ವನಿಯೆತ್ತುತ್ತಿದ್ದೀರಾದರೂ, ಥಿಂಕ್ ಟ್ಯಾಂಕ್ ರಚನೆಮಾಡಿ ಮೊದಲೇ ಇವಕ್ಕೆಲ್ಲವೂ ಯೋಜನೆ ರೂಪುಗೊಂಡು ನಂತರ ಅನುಷ್ಠಾನಕ್ಕೆ ಬರುವಂತಾಗಬೇಕಿದೆ ಎಂದರು.

ಅತಿಥಿಗಳಾಗಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉತ್ತರಕನ್ನಡ ಜಿಲ್ಲಾ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಭಟ್ಕಳ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಪತ್ರಿಕೆಗಳು ಕಷ್ಟದಲ್ಲಿದೆ. ಪತ್ರಕರ್ತರೂ ಕಷ್ಟದಲ್ಲಿ ಇದ್ದಾರೆ. ಕೊರೋನಾ ಈ ಕಾಲದಲ್ಲಿ ಪತ್ರಿಕೆಗಳನ್ನು ನಡೆಸುವುದು ಕಷ್ಟವಾಗಿದೆ. ಪತ್ರಕರ್ತರಿಗೆ ಕಾರ್ಮಿಕರಿಗೆ ಸಿಗುವ ಕನಿಷ್ಠ ಸೌಲಭ್ಯ ಸಿಗುತ್ತಿಲ್ಲ. ಇದಕ್ಕೆ ಕಾರಣ ನಮ್ಮ ಸಂಘಟಿತ ಹೋರಾಟದ ಕೊರತೆ ಎಂದರು. ಪತ್ರಕರ್ತರು ಸಮಾಜದ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿ, ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡಬೇಕೆನ್ನುವ ಸಲಹೆಗಳು ಬಂದಿದ್ದು, ಅವುಗಳನ್ನು ಅನುಷ್ಠಾನ ಮಾಡುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡೋಣ ಎಂದರು.

RELATED ARTICLES  ಸ್ನಾನ ಮಾಡುವ ವೀಡಿಯೋ ಬೇಕೆಂದು ಮಹಿಳೆಯನ್ನು ಪೀಡಿಸುತ್ತಿದ್ದ ವ್ಯಕ್ತಿ..?

IMG 20210724 WA0001

ಬಾರ್ಡೋಲಿ ಪ್ರಶಸ್ತಿ ಪುರಸ್ಕೃತ ವರದಿಗಾರ ಎಂ.ಜಿ ನಾಯ್ಕ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕುಮಟಾ ತಾಲೂಕು ಅಧ್ಯಕ್ಷ ಸುಬ್ರಾಯ ಭಟ್ಟ ಅಧ್ಯಕ್ಷತೆ ವಹಿಸಿ ಸಾಂದರ್ಭಿಕವಾಗಿ ಮಾತನಾಡಿದರು. ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯ ಫಯಾಜ್ ಮುಲ್ಲಾ ವೇದಿಕೆಯಲ್ಲಿದ್ದರು. ಜಯದೇವ ಬಳಗಂಡಿ ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಾರ್ಥನೆ ಗೈದರೆ, ಪ್ರವೀಣ ಹೆಗಡೆ ಸ್ವಾಗತಿಸಿದರು, ಎಂ.ಜಿ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಜಿ.ಡಿ ಶಾನಭಾಗ ವಂದಿಸಿದರು. ಗಣೇಶ ಜೋಶಿ ಕಾರ್ಯಕ್ರಮ ನಿರೂಪಿಸಿದರು.