ಬೆಂಗಳೂರು: ಅಭಿನಯ ಶಾರದೆ ಎಂದು ಪ್ರೀತಿಯಿಂದ ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದ ಹಿರಿಯ ನಟಿ ಜಯಂತಿ ನಿಧನರಾಗಿದ್ದಾರೆ. ಸೋಮವಾರ ನಸುಕಿನ ಜಾವ ಬೆಂಗಳೂರಿನ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.ಅವರಿಗೆ 76 ವರ್ಷ ವಯಸ್ಸಾಗಿತ್ತು.

ನಟಿ ಜಯಂತಿ ಜನಿಸಿದ್ದು ಬಳ್ಳಾರಿಯಲ್ಲಿ ಜನವರಿ 6, 1945 ರಂದು. ಇವರ ನಿಜನಾಮ ಕಮಲಾ ಕುಮಾರಿ. ಇವರ ತಂದೆ ಬಾಲಸುಬ್ರಹ್ಮಣ್ಯಂ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲೀಷ್ ಪ್ರೊಫೆಸರ್ ಆಗಿದ್ದರು. ತಾಯಿ ಸಂತಾನಲಕ್ಷ್ಮೀ. ಕಮಲಾ ಕುಮಾರಿ ಇನ್ನೂ ಚಿಕ್ಕವರಿದ್ದಾಗಲೇ ಅವರ ತಂದೆ-ತಾಯಿ ದೂರಾದರು. ಪತಿಯಿಂದ ದೂರ ಸರಿದ ಸಂತಾನಲಕ್ಷ್ಮೀ ಮಕ್ಕಳ ಜೊತೆ ಚೆನ್ನೈಗೆ ತೆರಳಿದರು. ಅಲ್ಲಿ, ಪುತ್ರಿ ಕಮಲಾ ಕುಮಾರಿಯನ್ನ ಡ್ಯಾನ್ಸ್ ಕ್ಲಾಸ್‌ಗೆ ಸೇರಿಸಿದರು. ಕಮಲಾ ಕುಮಾರಿ ಕ್ಲಾಸಿಕಲ್ ಡ್ಯಾನ್ಸರ್ ಆಗಬೇಕು ಅನ್ನೋದು ತಾಯಿಯ ಆಸೆ ಆಗಿತ್ತು.

RELATED ARTICLES  ಉತ್ತರಕನ್ನಡದಲ್ಲಿ ಇಂದು 52 ಮಂದಿಗೆ ಕೋವಿಡ್ ದೃಢ

ಚಿಕ್ಕವಯಸ್ಸಿನಲ್ಲೇ ಚಿತ್ರೀಕರಣದ ಸ್ಟುಡಿಯೋಗಳಿಗೆ ತೆರಳುತ್ತಿದ್ದ ಬಾಲಕಿ ಕಮಲಾ ಕುಮಾರಿಯನ್ನ ಖ್ಯಾತ ನಟ ಎನ್‌.ಟಿ.ರಾಮಾ ರಾವ್ ನೋಡಿದ್ದರು. ಒಮ್ಮೆ ಕಮಲಾ ಕುಮಾರಿಯನ್ನ ಕರೆದು ತೊಡೆ ಮೇಲೆ ಕೂರಿಸಿಕೊಂಡು ”ನನಗೆ ಹೀರೋಯಿನ್ ಆಗ್ತೀಯಾ” ಅಂತ ಎನ್.ಟಿ.ರಾಮಾ ರಾವ್ ಕೇಳಿದ್ದರು. ಮುಂದೆ ಕಮಲಾ ಕುಮಾರಿ ಬಣ್ಣದ ಬದುಕಿಗೆ ಕಾಲಿಟ್ಟರು. ಜಯಂತಿ ಎಂದೇ ಜನಪ್ರಿಯರಾಗಿ ಎನ್.ಟಿ.ರಾಮಾ ರಾವ್ ಜೊತೆ ‘ಜಗದೇಕ ವೀರುಣಿ ಕಥಾ’, ‘ಕುಲ ಗೌರವಂ’, ‘ಕೊಂಡವೀಟಿ ಸಿಂಹಂ’, ‘ಜಸ್ಟಿಸ್ ಚೌಧರಿ’ ಚಿತ್ರಗಳಲ್ಲಿ ಅಭಿನಯಿಸಿದರು.

ಮೊದಲು ತೆಲುಗು ಮತ್ತು ತಮಿಳಿನ ಕೆಲ ಚಿತ್ರಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ ಕಮಲಾ ಕುಮಾರಿಗೆ ಕನ್ನಡ ಚಿತ್ರರಂಗದಿಂದ ದೊಡ್ಡ ಅವಕಾಶ ನೀಡಿದ್ದು ನಿರ್ದೇಶಕ ವೈ.ಆರ್.ಸ್ವಾಮಿ. ಡ್ಯಾನ್ಸ್ ಕ್ಲಾಸ್‌ನಲ್ಲಿ ಕಮಲಾ ಕುಮಾರಿ ಅವರ ನೃತ್ಯ ನೋಡಿ ‘ಜೇನು ಗೂಡು’ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದರು. ನಿರ್ದೇಶಕ ವೈ.ಆರ್.ಸ್ವಾಮಿ ಅವರೇ ಕಮಲಾ ಕುಮಾರಿಗೆ ‘ಜಯಂತಿ’ ಎಂದು ಹೆಸರಿಟ್ಟರು. ಅಲ್ಲಿಂದ ಜಯಂತಿಯ ಪಯಣ ಕನ್ನಡ ಚಿತ್ರರಂಗದಲ್ಲಿ ಶುರುವಾಯಿತು. ‘ಜೇನು ಗೂಡು’ ಸಿನಿಮಾ ಹಿಟ್ ಆಯ್ತು. ಕನ್ನಡ ಚಿತ್ರರಂಗದಲ್ಲಿ ಜಯಂತಿ ಭದ್ರವಾಗಿ ನೆಲೆಯೂರಿದರು.

RELATED ARTICLES  ದಿನಾಂಕ 12/05/2019ರ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ ನೋಡಿ.

ಬಳಿಕ ಡಾ.ರಾಜ್‌ಕುಮಾರ್ ಜೊತೆಗೆ ‘ಚಂದವಳ್ಳಿಯ ತೋಟ’ ಸಿನಿಮಾದಲ್ಲಿ ನಾಯಕಿಯಾಗಿ ಜಯಂತಿ ಅಭಿನಯಿಸಿದರು. ವರನಟ ಡಾ.ರಾಜ್‌ಕುಮಾರ್ ಜೊತೆಗೆ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಖ್ಯಾತಿ ಜಯಂತಿ ಅವರದ್ದು.

‘ಕಲಾವತಿ’, ‘ತುಂಬಿದ ಕೊಡ’, ‘ಬೆಟ್ಟದ ಹುಲಿ’, ‘ಮಿಸ್ ಲೀಲಾವತಿ’, ‘ಎಡಕಲ್ಲು ಗುಡ್ಡದ ಮೇಲೆ’, ‘ಧರ್ಮ ದಾರಿ ತಪ್ಪಿತು’, ‘ಮಸಣದ ಹೂ’ ಮುಂತಾದ ಚಿತ್ರಗಳು ಜಯಂತಿಗೆ ಜನಪ್ರಿಯತೆ ತಂದುಕೊಟ್ಟಿತು.