ಯಲ್ಲಾಪುರ : ಯಲ್ಲಾಪುರ ಮೂಲಕ ಮಂಗಳೂರಿಗೆ ಚಲೋ ಬೈಕ್ ರ್ಯಾಲಿಗೆ ಪೊಲೀಸರು ತಡೆ ಒಡ್ಡಿದ್ದರಿಂದ, ಯಲ್ಲಾಪುರದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು.

ಬಿಜೆಪಿ ಕಾರ್ಯಕರ್ತರು ಟಯರ್ ಸುಟ್ಟು ರಸ್ತೆ ತಡೆ ನಡೆಸ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಮಂಗಳವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ 63ರ ಕಾಮಾಕ್ಷಿ ಆಟೋಮೊಬೈಲ್ಸ್ ಎದುರಿಗೆ ಸಭೆ ನಡೆಸಿದ ಬಿಜೆಪಿ ಕಾರ್ಯಕರ್ತರು, ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಅರಣ್ಯ ಸಚಿವ ರಮಾನಾಥ್ ರೈ ವಿರುದ್ಧ ವಾಗ್ದಾಳಿ ನಡೆಸಿದರು. ಮಂಗಳೂರಿನ ದೇಶ ವಿರೋಧಿ ಸಂಘಟನೆಯಾದ ಪಿಎಫ್ಐ ಹಾಗೂ ಕೆಎಫ್ಡಿ ಸಂಘಟನೆಯನ್ನು ರಮಾನಾಥ್ ರೈ ಸಿದ್ದರಾಮಯ್ಯ ಪರೋಕ್ಷವಾಗಿ ಬೆಳೆಸುತ್ತಿದ್ದಾರೆ. ಇಂತಹ ಬೆಂಬಲದಿಂದ ಹಿಂದೂ ಸಂಘಟನೆಯ ಮುಖಂಡರ ಕೊಲೆಯಾಗುತ್ತಿದೆ. ಒಟ್ಟು ಇಪ್ಪತ್ತು ಏಳು ಹಿಂದೂ ಮುಖಂಡರ ಕೊಲೆಗಳು ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದಿದ್ದು, ಯಾವುದೇ ತನಿಖೆ ಸಹಿತ ಸರಿಯಾದ ಮಾರ್ಗದಲ್ಲಿ ನಡೆದಿಲ್ಲ. ಈ ಎಲ್ಲ ಕೊಲೆ ಪ್ರಕರಣಗಳನ್ನು ಸಿಬಿಐ ಅಥವಾ ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕೆಂದು ಅವರು ಆಗ್ರಹಿಸಿದರು. ಕರಾವಳಿ ಜಿಲ್ಲೆಗಳಲ್ಲಿ ಆತಂಕ ಸೃಷ್ಟಿಸುತ್ತಿರುವ ಈ ಸಂಘಟನೆಗಳನ್ನು ನಿಷೇದಿಸಬೇಕು. ಕರಾವಳಿ ಜಿಲ್ಲೆಗಳ ಅಹಿತಕರ ಘಟನೆಗೆ ನಿಷೇಧಿತ ರಾಷ್ಟ್ರ ವಿರೋಧಿ ಸಂಘಟನೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಸಚಿವ ರಮಾನಾಥ್ ರೈ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿದರು.

IMG 20170905 WA0021

ಯಾವುದೇ ಕಾರಣಕ್ಕೂ ಮಂಗಳೂರು ಚಲೋ ರ್ಯಾಲಿಯನ್ನು ತಡೆಯಲು ಸರಕಾರದಿಂದ ಸಾಧ್ಯವಿಲ್ಲ ಬಿಜೆಪಿ ಕಾರ್ಯಕರ್ತರು ಯಾವುದೇ ಮಾರ್ಗದ ಮೂಲಕ ಏಳನೇ ತಾರೀಖಿನ ಮಂಗಳೂರು ಚಲೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಯೇ ಸಿದ್ಧ ಎಂದು ಅವರು ಹೇಳಿದರು.

RELATED ARTICLES  ಹೊನ್ನಾವರ, ಕುಮಟಾ, ಅಂಕೋಲಾದಲ್ಲಿ ನಾಳಿನ ಕೊರೋನಾ ಲಸಿಕಾ ವಿವರ

ಪೂರ್ವ ನಿಗದಿ ಪಡಿಸಿದಂತೆ ನಾಳೆ ಬುಧವಾರ ಅಂಕೋಲಾ ಕುಮಟಾ ಹೊನ್ನಾವರ ಮತ್ತು ಭಟ್ಕಳದಲ್ಲಿ ಬಿಜೆಪಿ ಕಾರ್ಯಕರ್ತರ ಬೃಹತ್ ಸಭೆ ನಡೆಯಲಿದೆ. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳು ರಾಜ್ಯ ಕಾಂಗ್ರೆಸ್ ಸರ್ಕಾರದ ವಿಫಲತೆ ಹಾಗೂ ಹೇಡಿತನದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಪ್ರತಿಕೃತಿ ದಹನ : ಬಿಜೆಪಿ ಯುವಮೋರ್ಚಾ ಹಮ್ಮಿಕೊಂಡಿದ್ದ ಮಂಗಳೂರು ಚಲೋ ಬೈಕ್ ರ್ಯಾಲಿಗೆ ಪರವಾನಿಗೆ ನೀಡದ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಬಿಜೆಪಿ ಕಾರ್ಯಕರ್ತರು ಆಕ್ರೋಶಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರತಿಕೃತಿ ದಹಸಿದರು. ಇದೇ ಸಂದರ್ಭದಲ್ಲಿ ರಸ್ತೆ ಮೇಲೆ ಟೈರ್ ಗಳನ್ನು ಸುಟ್ಟು ರಾಷ್ಟ್ರೀಯ ಹೆದ್ದಾರಿ 63ವನ್ನು ಕೆಲ ಸಮಯ ಸಂಚಾರಕ್ಕೆ ಅಡಚಣೆ ಉಂಟು ಮಾಡಲಾಯಿತು. ನಂತರ ಪೊಲೀಸರು ನೀರು ಸುರಿದು ಟೈರಗಳನ್ನು ತೆರವುಗೊಳಿಸಿದರು.

IMG 20170905 WA0023

ಬಿಜೆಪಿ ಕಾರ್ಯಕರ್ತರ ಬಂಧನ : ಸಭಾ ಕಾರ್ಯಕ್ರಮದ ನಂತರ ಬೈಕ್ ರ್ಯಾಲಿ ಮೂಲಕ ಮಂಗಳೂರು ಚಲೋ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸ್ಥಳೀಯ ಯುವಕರನ್ನು ಪೊಲೀಸರು ವಶಕ್ಕೆ ಪಡೆದರು. ಇದನ್ನು ವಿರೋಧಿಸಿದ ಇನ್ನು ಕೆಲವು ಬಿಜೆಪಿ ಕಾರ್ಯಕರ್ತರು ಪೊಲೀಸ್ ವಾಹನಗಳ ಎದುರು ಕುಳಿತು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕೆಲ ಸಮಯ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು ನಂತರ ಪ್ರತಿಭಟನೆ ನಡೆಸುತ್ತಿದ್ದ ಎಲ್ಲ ಕಾರ್ಯಕರ್ತರನ್ನು ಇನ್ನೊಂದು ವಾಹನದಲ್ಲಿ ತೆಗೆದು ಕೊಂಡು ಹೋಗಿ ಎಪಿಎಂಸಿ ಹತ್ತಿರ ಪೊಲೀಸರು ಬಿಟ್ಟರು..

RELATED ARTICLES  ಹೊನ್ನಾವರದ ಹಡಿನಬಾಳ ಸಮೀಪ ಗುಡ್ಡ ಕುಸಿತ

ಪೊಲೀಸರು ಪ್ರತಿಭಟನಾಕಾರರನ್ನು ಬಸ್ಸಿನಲ್ಲಿ ತುಂಬಯವ ಸಂದರ್ಭದಲ್ಲಿ ಬಸ್ ಒಂದರ ಗಾಜು ಒಡೆದು ಪುಡಿ ಪುಡಿಯಾಯಿತು.

ಈ ಮೊದಲೇ ಪ್ರಕಟಿಸದಂತೆ ಬಿಜೆಪಿಯ ಜಿಲ್ಲೆಯ ವಿವಿಧ ಮುಖಂಡರುಗಳ ನೇತೃತ್ವದಲ್ಲಿ ಪಟ್ಟಣದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಸಭೆ ನಡೆಸುವುದೆಂದು ನಿರ್ಣಯಿಸಲಾಗಿತ್ತು. ಇದಕ್ಕೆ ಅವಕಾಶ ನೀಡದ ಪೊಲೀಸರು ಸಭೆ ನಡೆಯದಂತೆ ತಡೆದರು. ಪೊಲೀಸರ ಈ ನಡೆಯನ್ನು ಪ್ರತಿಭಟಿಸಿದ ಬಿಜೆಪಿ ಮುಖಂಡರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ರಸ್ತೆ ತಡೆ ನಡೆಸಿ ರಸ್ತೆ ಮಧ್ಯದಲ್ಲಿಯೇ ಸಭೆ ನಡೆಸಿದರು. ಸಾವಿರಾರು ಕಾರ್ಯಕರ್ತರು ಈ ಸಭೆಯಲ್ಲಿ ಪಾಲ್ಗೊಂಡು ಸರ್ಕಾರ ವಿರುದ್ಧ ಘೋಷಣೆ ಕೂಗಿದರು.

ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಶಾಸಕರಾದ ವಿ.ಎಸ್ ಪಾಟೀಲ್ ಮತ್ತು ಸುನಿಲ್ ಹೆಗಡೆ, ಬಿಜೆಪಿ ಜಿಲ್ಲಾ ವಕ್ತಾರ ಪ್ರಮೋದ ಹೆಗಡೆ, ರಾಜ್ಯ ಕಾರ್ಯಕಾರಿಣಿ ಸದಸ್ಯ ನರಸಿಂಹ ಹೊಣೆಮನೆ, ಬಿಜೆಪಿ ಪ್ರಮುಖರಾದ ಉಮೇಶ್ ಭಾಗ್ವತ, ಜಿಲ್ಲಾ ಯುವ ಮೋರ್ಚಾ ಅದ್ಯಕ್ಷ ಮಂಜುನಾಥ ಜನ್ನು, ಪ್ರಮುಖರಾದ ಗುರುಪ್ರಸಾದ್ ಹೆಗಡೆ, ಶ್ಯಾಮಿಲಿ ಪಾಟಣಕರ್ ಪ್ರಸಾದ್ ಹೆಗ್ಡೆ ಮುಂತಾದವರು ಬಂಧನಕ್ಕೊಳಗಾದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ ಸ್ಥಳದಲ್ಲಿದ್ದು ಪೊಲೀಸ್ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು. ಶಿರಸಿ ಡಿಎಸ್ಪಿ ನಾಗೇಶ ಶೆಟ್ಟಿ ಯಲ್ಲಾಪುರ ಪಿಐ ಮಂಜುನಾಥ್ ನಾಯಕ್ ಮುಂಡಗೋಡ ಪಿಐ ಕಿರಣಕುಮಾರ್, ಯಲ್ಲಾಪುರ ಪಿಎಸ್ಐ ಶ್ರೀಧರ್ ಎಸ್ ಆರ್, ಶಿರಸಿ ಗ್ರಾಮೀಣ ಪಿಎಸ್ಐ ಸೀತಾರಾಮ ಬನವಾಸಿ ಪಿಎಸ್ಸೈ ಮೋಹಿನಿ ಶೆಟ್ಟಿ ಮುಂತಾದವರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು