ಕುಮಟಾ: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 24ನೆಯ ಪೀಠಾಧಿಪತಿಯಾಗಿ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಗುರು ಪೀಠಾರೋಹಣ ಕಾರ್ಯಕ್ರಮವು ಜು.30 ರಂದು ಅಪರಾಹ್ನ 3.10ಕ್ಕೆ ಕಾಣಕೋಣದ ಪರ್ತಗಾಳಿಯ ಜೀವೋತ್ತಮ ಮಠದಲ್ಲಿ ಸರಳವಾಗಿ ನೆರವೇರಲಿದೆ ಎಂದು ಶ್ರೀಮಠ ತಿಳಿಸಿದೆ.
ಅಂದು ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನೆ, ಪೂರ್ವಾಹ್ನ ಶ್ರೀ ರಾಮದೇವ ವೀರ ವಿಠ್ಠಲ ದೇವರ ಮಹಾಪೂಜೆಯಿಂದ ಆರಂಭವಾಗುವ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನಮಾಡಿ ಸ್ವಾಮೀಜಿಯವರು ಸಿಂಹಾಸನದಲ್ಲಿ ಆಸೀನರಾಗುವರು. ಶ್ರೀಮಠದ ಶಾಖಾ ಮಠಗಳ ಸಮಿತಿಯಿಂದ ಪೀಠಾರೂಢ ಗುರುಗಳಿಗೆ ಪಟ್ಟಕಾಣಿಕೆ ಸಲ್ಲಿಸಿ, ಫಲ ಮಾಲಾದಿಗಳನ್ನು ಅರ್ಪಿಸಲಾಗುವುದು.
ಚಾರ್ತುಮಾಸಾಂಗವಾಗಿ, ಜು.31 ರಂದು ಸಾಯಂಕಾಲ 5 ಗಂಟೆಗೆ ಅವರು ಚಾರ್ತುಮಾಸ್ಯ ವೃತ ದೀಕ್ಷೆಯನ್ನು ಸ್ವೀಕರಿಸಲಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದ ನಿಯಮದಂತೆ ಸಮಾರಂಭವನ್ನು ವೈಭವೀಕರಿಸದೇ ಸಂಯೋಜನೆಗೊಳಿಸಲಾಗಿದೆ ಎಂದು ಶ್ರೀ ಮಠ ತಿಳಿಸಿದೆ.
ಗೋವಾದ ಪರ್ತಗಾಳಿಯ ಸ್ವಮಠದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ (ಜಿಎಸ್‌ಬಿ) ಪರ್ತಗಾಳಿ ಮಠಾಧೀಶರಾಗಿದ್ದ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ ಈ ಹಿಂದೆ ಮಠವನ್ನು ಮುನ್ನಡೆಸಿ ಕೆಲ ದಿನದ ಹಿಂದೆ ಹರಿಪಾದ ಸೇರಿದ್ದರು. ಇದೀಗ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 24ನೆಯ ಪೀಠಾಧಿಪತಿಯಾಗಿ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಗುರು ಪೀಠಾರೋಹಣ ಕಾರ್ಯಕ್ರಮ ನಡೆಯಲಿದ್ದು, ಅವರು ಮಠ ಹಾಗೂ ಸಮಾಜದ ಸದ್ಭಕ್ತರಿಗೆ ಮಾರ್ಗದರ್ಶನ ಮಾಡಿ ಮುನ್ನಡೆಸಲಿದ್ದಾರೆ.