ಕುಮಟಾ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಮಾರಿಕಾಂಬಾ ಜ್ಞಾನ ವಿಕಾಸ ಕೇಂದ್ರದ ವತಿಯಿಂದ ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆ ಮತ್ತು ಕೋವಿಡ್ ಮುಂಜಾಗ್ರತಾ ಕ್ರಮ ಅನುಸರಿಸುವ ಬಗ್ಗೆ ಪಟ್ಟಣದ ದೇವರಹಕ್ಕಲಿನ ಲಕ್ಷ್ಮೀ ಉಪ್ಪಾರ ಅವರ ಮನೆಯಲ್ಲಿ ಮಾಹಿತಿ ಕಾರ್ಯಾಗಾರ ಯಶಸ್ವಿಯಾಗಿ ಸಂಪನ್ನವಾಯಿತು.
ಈ ಕಾರ್ಯಾಗಾರದಲ್ಲಿ ಮಾತನಾಡಿದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದಿನೇಶ ನಾಯ್ಕ ಮಳೆಗಾಲದಲ್ಲಿ ಸಾಮಾನ್ಯವಾಗಿ ಸೊಳ್ಳೆಗಳಿಂದ ಹಲವು ರೋಗಗಳು ಉಲ್ಬಣಗೊಳ್ಳಲಿದ್ದು, ಮನೆಯಲ್ಲಿಯೇ ಸಿಗುವ ಮನೆಮದ್ದು ಬಳಸಿಕೊಂಡು ಅವುಗಳನ್ನು ತಡೆಗಟ್ಟಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದು ಅಭಿಪ್ರಾಯಪಟ್ಟರು.
ಕೊರೊನಾ ಸಾಂಕ್ರಾಮಿಕ ರೋಗವನ್ನು ಯಾವತ್ತೂ ನಿರ್ಲಕ್ಷಿಸಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಿಸಬೇಕು. ಅಂತೆಯೇ, ಕೊರೊನಾ ರೋಗವನ್ನು ಸಂಪೂರ್ಣವಾಗಿ ತೊಲಗಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರದ ಸೇವಾ ಪ್ರತಿನಿಧಿ ನೀತಾ ಸ್ವಾಗತಿಸಿದರು. ಸಮನ್ವಯಾಧಿಕಾರಿ ಆಶಾಚಂದ್ರ ನಿರೂಪಿಸಿದರು. ದೀಪಾ ವಂದಿಸಿದರು.