ಕಾರವಾರ: ನೂತನ ಸಿ.ಎಂ ಬಸವರಾಜ ಬೊಮ್ಮಾಯಿ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ಅಂಕೋಲಾ ತಾಲ್ಲೂಕುಗಳಲ್ಲಿ ನೆರೆಹಾನಿಗೊಳಗಾದ ಪ್ರದೇಶಗಳಿಗೆ ಇಂದು  ಭೇಟಿ ನೀಡಿದರು.

1:30ರ ವೇಳೆಗೆ ಯಲ್ಲಾಪುರ ತಾಲ್ಲೂಕು ಆಸ್ಪತ್ರೆಗೆ ಆಗಮಿಸಿದ ಸಿಎಂಗೆ ಪೊಲೀಸರು ಗೌರವ ವಂದನೆಯನ್ನ ಸಲ್ಲಿಸಿದರು.

ಡಯಾಲಿಸಿಸ್ ಘಟಕ ಉದ್ಘಾಟನೆ.

ಯಲ್ಲಾಪುರದ ಸರಕಾರಿ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ” ಡಯಾಲಿಸಿಸ್ ಘಟಕ “ವನ್ನು  ಇಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ದೀಪ ಬೆಳಗಿಸುವುದರ ಮೂಲಕವಾಗಿ ಉದ್ಘಾಟಿಸಿದರು.

ಯಲ್ಲಾಪುರ ಭಾಗದ ಡಯಾಲಿಸಿಸ್ ರೋಗಿಗಳಿಗೆ ಅನೂಕುಲವಾಗುವ ದೃಷ್ಟಿಯಿಂದ ನಮ್ಮ ಸಂಸ್ಥೆಯ ಮೂಲಕವಾಗಿ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ನೂತನ ಡಯಾಲಿಸಿಸ್ ಘಟಕವನ್ನು ಪ್ರಾರಂಭಿಸಲಾಗಿದ್ದು ಎಲ್ಲಾ ಅತ್ಯಾಧುನಿಕ ವೈದ್ಯಕೀಯ ಪರಿಕರಗಳನ್ನು ಈ ಘಟಕ ಹೊಂದಿರಲಿದೆ.

ನೆರೆ ಸಂತ್ರಸ್ತರ ಮೂಲಭೂತ ಪೂರೈಕೆಗೆ ವಿಶೇಷ ಗಮನ ಎಂದ ಬೊಮ್ಮಾಯಿ

ಯಲ್ಲಾಪುರ: ಅತಿವೃಷ್ಟಿಯ ನಿರ್ವಹಣೆಗೆ ಸರ್ಕಾರದಲ್ಲಿ ಎನ್.ಡಿ.ಆರ್.ಎಫ್ ನ ನಿಧಿ ಸಾಕಷ್ಟಿದೆ. ಸದ್ಯ ಪ್ರಕೃತಿ ವಿಕೋಪ ನಿರ್ವಹಣೆಯ ಜತೆಗೆ ನೆರೆ ಸಂತ್ರಸ್ತರಿಗೆ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಬಗೆಗೆ ವಿಶೇಷ ಗಮನ ಹರಿಸಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಪಟ್ಟಣದ ಸರ್ಕಾರಿ ಆಸ್ಪತ್ರೆಯ ಬಳಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿ, ಹಲವೆಡೆ ಊರುಗಳೇ ನೆರೆಯ ಹೊಡೆತಕ್ಕೆ ಸಿಲುಕಿವೆ. ಗುಡ್ಡಗಳು ಕುಸಿದು ಮನೆಗಳೇ ನೆಲಸಮವಾಗಿವೆ. ದಾರಿಗಳು ಹಾಳಾಗಿದ್ದು, ನಲುಗಿ ಹೋದ ಸಂತ್ರಸ್ತರಿಗೆ ಮತ್ತೆ ಬದುಕು ಕಟ್ಟಿಕೊಡುವ ಕಾರ್ಯ ಆಗಬೇಕಾಗಿದೆ ಎಂದರು.

RELATED ARTICLES  ಮಾಧ್ಯಮಗಳು ರಾಜಕೀಯೇತರ ಸುದ್ದಿಗಳಿಗೂ ಪ್ರಮುಖ್ಯತೆ ನೀಡಬೇಕು: ಪ್ರಧಾನಿ

ಪ್ರವಾಹ ನಿರ್ವಹಣೆಗೆ ವಿಶೇಷ ಅನುದಾನಕ್ಕಾಗಿ ಕೇಂದ್ರದ ಬಳಿ ಆಗ್ರಹಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಸದ್ಯ ಎನ್.ಡಿ.ಆರ್.ಎಫ್ ನಿಧಿಯಡಿ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುವುದು. ಪ್ರವಾಹದಿಂದ ಉಂಟಾದ ಹಾನಿಯ ಸಮೀಕ್ಷೆ ನಡೆಸಿ, ನಂತರ ಹೆಚ್ಚಿನ ಅನುದಾನ ಕೇಳಲಾಗುವುದು ಎಂದರು. ಶಾಸಕ ಶಿವರಾಮ ಹೆಬ್ಬಾರ್, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ವಾ.ಕ.ರ.ಸಾ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ ಇತರರಿದ್ದರು.

ನಂತರ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟದಲ್ಲಿ ಉಂಟಾಗಿರುವ ಭೂಕುಸಿತ ಪ್ರದೇಶವನ್ನು ವೀಕ್ಷಣೆ ಮಾಡಿದರು. ಜುಲೈ 23ರಂದು ಸುರಿದ ಧಾರಾಕಾರ ಮಳೆಗೆ ಘಟ್ಟ ಪ್ರದೇಶದ ಹತ್ತಕ್ಕೂ ಅಧಿಕ ಪ್ರದೇಶದಲ್ಲಿ ಭೂಕುಸಿತ ಉಂಟಾಗಿತ್ತು. ಈಗಾಗಲೇ ಕುಸಿತವಾಗಿರುವ ಪ್ರದೇಶಗಳಲ್ಲಿ ತೆರವು ಕಾರ್ಯವನ್ನ ಕೈಗೊಳ್ಳಲಾಗಿದ್ದು ಶಾಶ್ವತ ಕಾಮಗಾರಿ ನಡೆಸಲು ಸುಮಾರು 70 ಕೋಟಿಗೂ ಅಧಿಕ ಮೊತ್ತಕ್ಕೆ ಹೆದ್ದಾರಿ ಪ್ರಾಧಿಕಾರ ಬೇಡಿಕೆ ಇಟ್ಟಿದೆ. ನಂತರ ಗುಳ್ಳಾಪುರ ಗ್ರಾಮದಲ್ಲಿ ನೆರೆಯಿಂದ ಕುಸಿದುಬಿದ್ದ ಸೇತುವೆ ಪ್ರದೇಶಕ್ಕೆ ಸಿಎಂ ಭೇಟಿ ನೀಡಿ ಪರಿಶೀಲಿಸಿದರು.

RELATED ARTICLES  ನಿಜವಾದ ಗೋರಕ್ಷಕರು ಸರ್ಕಾರ, ಸುಪ್ರೀಂ ಕೋರ್ಟ್‌ಗೆ ಹೆದರಬೇಕಿಲ್ಲ: ಮೋಹನ್ ಭಾಗವತ್

ಅಂಕೋಲಾ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 63 ರ ಅರಬೈಲ್ ಘಟ್ಟದಲ್ಲಿ ಕುಸಿದ ಗುಡ್ಡವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಿಶೀಲನೆ ನಡೆಸಿದರು. ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಉತ್ತರಕನ್ನಡಕ್ಕೆ ಆಗಮಿಸಿದ ಅವರು ಯಲ್ಲಾಪುರದ ಕಳಚೆ ಗ್ರಾಮದಲ್ಲಿ ಗುಡ್ಡ ಕುಸಿತ ಪ್ರದೇಶಕ್ಕೆ ತೆರಳಿ ವೀಕ್ಷಣೆ ನಡೆಸಿ ಸ್ಥಳೀಯರಿಂದ ಮಾಹಿತಿ ಪಡೆದ ಅವರು ಬಳಿಕ ಅಂಕೋಲಾಗೆ ತೆರಳುವಾಗ ಮಾರ್ಗ ಮಧ್ಯೆದಲ್ಲಿ ಹೆದ್ದಾರಿಯಲ್ಲಿ ಕುಸಿತವಾದ ಪ್ರದೇಶಗಳ ವೀಕ್ಷಣೆ ನಡೆಸಿದರು.


ಅಂಕೋಲಾ ತಾಲೂಕಿನ ನೆರೆಪೀಡಿತ ಶಿರೂರು ಗ್ರಾಮಕ್ಕೆ ಭೇಟಿ ಕೊಟ್ಟು, ಕಾಳಜಿ ಕೇಂದ್ರದಲ್ಲಿರುವ ನೋವು ಆಲಿಸಿದರು. ಅಂಕೋಲಾದ ನಾಡವರ ಸಮುದಾಯ ಭವನದಲ್ಲಿ ಪ್ರಕೃತಿ ವಿಕೋಪ ಮತ್ತು ಪರಿಹಾರ ಕುರಿತು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಜಿಲ್ಲಾಮಟ್ಟದ ಸಮಾಲೋಚನೆ ಸಭೆ ನಡೆಸಿದರು.

ಪ್ರಮುಖ ಸುದ್ದಿಗಳನ್ನು ಓದಿ