ಕಾರವಾರ : ಮಳೆ ಕಡಿಮೆಯಾದರೂ ಮಳೆಯಿಂದ ಆದ ಅನಾಹುತಗಳಿಂದ ಉತ್ತರಕನ್ನಡದ ಜನ ಇನ್ನೂ ಸುಧಾರಿಸಿಕೊಳ್ಳಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೆಡೆಗೆ ಗ್ರಾಮಕ್ಕೆ ಗ್ರಾಮಗಳು ಮುಳುಗಡೆ ಯಾಗಿದ್ದರೆ, ಇನ್ನೊಂದೆಡೆ ರಸ್ತೆ ಸಂಪರ್ಕ ಸುಧಾರಿಸುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಅಂಕೋಲಾ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟ ಪ್ರದೇಶದಲ್ಲಿ ಹತ್ತಾರು ಕಡೆಗಳಲ್ಲಿ ಗುಡ್ಡ ಕುಸಿದಿದೆ. ಇದರಿಂದ ಕರಾವಳಿ ಹಾಗೂ ಮಲೆನಾಡು ಭಾಗಗಳಿಗೆ ಅಗತ್ಯ ವಸ್ತು ಸೇರಿ ಸರಕು ಸಾಮಗ್ರಿಗಳನ್ನು ಸಾಗಿಸಲು ಸಮಸ್ಯೆಯಾಗಿದೆ.
ಅಂಕೋಲಾದ ಬಾಳೆಗುಳಿಯಿಂದ ಯಲ್ಲಾಪುರ ತಲುಪುವ 80 ಕಿ. ಮೀ ಮಾರ್ಗದಲ್ಲಿ 16 ಕಿ.ಮೀನಷ್ಟು ರಸ್ತೆಗೆ ಹಾನಿಯಾಗಿದೆ. 14 ಕಡೆ ಗುಡ್ಡದ ಮಣ್ಣು ರಸ್ತೆಗೆ ಜಾರಿದ್ದು, 2 ಕಡೆಗಳಲ್ಲಿ ಭಾರಿ ಪ್ರಮಾಣದಲ್ಲಿ ಹೆದ್ದಾರಿಯೂ ಕುಸಿದುಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹೆದ್ದಾರಿ 63ರ ಮೂಲಕವೇ ಮಂಗಳೂರಿನಿಂದ ಕಾರವಾರದವರೆಗೆ ಸರಕು ಸಾಗಣೆ ಸೇರಿದಂತೆ ಗ್ಯಾಸ್ ಟ್ಯಾಂಕರ್‌ಗಳು ಸಂಚಾರ ಮಾಡುತ್ತವೆ. ಆದರೆ ಮಳೆಯ ಅರ್ಭಟಕ್ಕೆ ಘಟ್ಟ ಪ್ರದೇಶದ ಹಲವೆಡೆ ರಸ್ತೆಯ ಮೇಲೆ ಧರೆ ಕುಸಿದು ಬಿದ್ದಿದೆ. ಮಳೆಗಾಲ ಮುಗಿಯುವವರೆಗೂ ಕುಸಿತ ಮುಂದುವರೆಯುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ತಾತ್ಕಾಲಿಕ ದುರಸ್ತಿಗೆ ಮುಂದಾಗಿದೆ.
ಅರಬೈಲ್ ಘಟ್ಟದಲ್ಲಿ ತೀವ್ರ ಕುಸಿತವಾದ ಹಿನ್ನೆಲೆಯಲ್ಲಿ ಬೈಕ್, ಕಾರು, ಟೆಂಪೋ ಸೇರಿದಂತೆ ಸಣ್ಣ ವಾಹನಗಳ ಓಡಾಟಕ್ಕೆ ಮಾತ್ರ ತಾತ್ಕಾಲಿಕವಾಗಿ ಅವಕಾಶ ಮಾಡಿಕೊಡಲಾಗಿದೆ.
ಭಾರಿ ವಾಹನಗಳ ಓಡಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ಹೆದ್ದಾರಿ ಮೇಲೆ ಕುಸಿದಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯ ಮಾಡುತ್ತಿದ್ದಾರೆ.