ಕುಮಟಾ: ಜಿಲ್ಲೆಯಲ್ಲಿ ಪೂರೈಕೆಯಾಗುವ ಕೋವಿಡ್ ಲಸಿಕೆಯಲ್ಲಿ 50 % 2ನೇ ಡೋಸ್ ಗೆ ಮೀಸಲಿಟ್ಟು ಲಸಿಕೆ ಲಭ್ಯತೆಯ ಆಧಾರದ ಮೆಲೆ 18 ವರ್ಷ ಮೇಲ್ಪಟ್ಟ ಎಲ್ಲಾ ವಯೋಮಾನದವರಿಗೆ 1 ನೇ ಡೋಸ್ ಲಸಿಕಾಕರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಕುಮಟಾ ತಾಲೂಕಿನ ಅನೇಕ ಕಡೆಗಳಲ್ಲಿ ಸಾರ್ವಜನಿಕರು ಲಸಿಕೆಗಾಗಿ ಮುಗಿಬಿದ್ದ ಘಟನೆ ನಡೆದಿದೆ.
ಕುಮಟಾ ಪುರಭವನದ ಕಿತ್ತೂರು ರಾಣಿ ಚೆನ್ನಮ್ಮಪಾರ್ಕ್ ನಲ್ಲಿ ಕೋವಾಕ್ಸಿನ್ 700 ಡೋಸ್ ಲಭ್ಯವಿದ್ದು, ಬೆಳ್ಳಂಬೆಳಿಗ್ಗೆಯೇ ಅಪಾರ ಸಂಖ್ಯೆಯ ಜನರು ಇಲ್ಲಿಗೆ ಆಗಮಿಸಿದ್ದಾರೆ.18 ವರ್ಷ ಮೇಲ್ಪಟ್ಟ ಎಲ್ಲಾ ವಯೋಮಾನದವರಿಗೆ 1 ನೇ ಡೋಸ್ ಲಸಿಕಾಕರಣ ಆರಂಭವಾದ ಬೆನ್ನಲ್ಲೆ, ಬಹುತೇಕ ಎಲ್ಲಾ ಕೇಂದ್ರಗಳಲ್ಲಿ ಅಪಾರ ಜನಸಂದಣಿಯೇ ನೆರೆದಿದೆ.
ಕುಮಟಾ ತಾಲೂಕಿನ ಧಾರೇಶ್ವರ, ಕುಮಟಾ ಸರ್ಕಾರಿ ಆಸ್ಪತ್ರೆ, ಹಾಗೂ ಲಸಿಕಾಕರಣ ನಡೆಯುವ ಹೆಗಡೆ, ಕೋಡ್ಕಣಿ ಹಾಗೂ ಅಘನಾಶಿನಿಯಲ್ಲಿ ಜನರು ಸರತಿ ಸಾಲಿನಲ್ಲಿ ನಿಂತು ಲಸಿಕಾಕರಣದಲ್ಲಿ ಭಾಗವಹಿಸಿರುವುದು ಕಂಡು ಬಂದಿದೆ.
ಶಿರಸಿಯಲ್ಲಿ ಲಸಿಕೆ ಗೊಂದಲ
ಶಿರಸಿಯಲ್ಲಿ ನಿನ್ನೆ ಆರೋಗ್ಯ ಇಲಾಖೆಯಿಂದ ನೀಡಿದ ಮಾಹಿತಿಯಂತೆ ಶಿರಸಿಯ ಅಂಬೇಡ್ಕರ್ ಭವನದಲ್ಲಿ 400 ಡೋಸ್ ಕೋವಿಶೀಲ್ಡ ವ್ಯಾಕ್ಸಿನ್ ನೀಡಲಾಗುವುದು ಎಂದು ಮಾಹಿತಿ ಜನತೆಗೆ ಸಿಕ್ಕಿತ್ತು ಎನ್ನಲಾಗಿದೆ. ಆದರೆ ಅದು ಕೇವಲ ಶಾಲಾ ಮಕ್ಕಳಿಗಾಗಿ ಎಂದು ಬಂದವರನ್ನು ಹಿಂದಿರುಗಿಸಿ ಕಳುಹಿಸಲಾಗಿದ್ದು ಈ ಬಗ್ಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಓರ್ವರು ಇಲಾಖೆ ನಿನ್ನೆ ನೀಡಿದ ಮಾಹಿತಿಯಲ್ಲಿ ಎಲ್ಲಿಯೂ ಇದು ಕೇವಲ ಶಾಲಾ ಮಕ್ಕಳಿಗಾಗಿ ಎಂದು ನಮೂದು ಮಾಡದೇ, ಜನರಿಗೆ ಪರ್ಯಾಪ್ತ ಮಾಹಿತಿಯೂ ನೀಡದೇ, ಇಂದು ಬೆಳಿಗ್ಗೆ ಏಕಾಏಕಿ ಕೇವಲ ಮಕ್ಕಳಿಗಾಗಿ ಎಂದಿದ್ದು, ಹಲವು ಗೊಂದಲಗಳಿಗೆ ಕಾರಣವಾಗಿದೆ ಎಂದಿದ್ದಾರೆ. ಈ ಬಗ್ಗೆ ಸ್ಥಳೀಯ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಹರಿದಾಡುತ್ತಿದೆ.
ವ್ಯಾಕ್ಸಿನ್ ನೀಡುವ ವ್ಯವಸ್ಥೆಯನ್ನು ಸರಿಪಡಿಸುವ ಪ್ರಮಾಣಿಕ ಪ್ರಯತ್ನ ಮಾಡಲಾಗುತ್ತಿದೆಯಾದರೂ ಜನರು ಒಮ್ಮೆಲೇ ಲಸಿಕೆಗಾಗಿ ಮುಗಿ ಬೀಳುತ್ತಿರುವ ಕಾರಣ ಅನೇಕ ಗೊಂದಲಗಳು ಏರ್ಪಡುತ್ತಿದೆ ಎನ್ನಲಾಗಿದೆ. ಇಲಾಖೆ ಸಾಧ್ಯವಾದಷ್ಟು ಮಾಹಿತಿ ನೀಡುವ ಕಾರ್ಯ ಮಾಡುತ್ತಿದೆ ಎನ್ನಲಾಗಿದೆ.