ಹೊನ್ನಾವರ : ಕೋವಿಡ್ ನಿಯಮ ಉಲ್ಲಂಘನೆ ಮಾಡಿದ ಕುಟುಂಬಗಳ ಮೇಲೆ ಅಧಿಕಾರಿಗಳು ಪ್ರಕರಣ ದಾಖಲಿಸಿದ ಘಟನೆ ವರದಿಯಾಗಿದೆ. ಮೈಕ್ರೋ ಕಂಟೇನ್ಮೆಂಟ್ ವಲಯ ಎಂದು ಘೋಷಣೆಯಾಗಿರುವ ತಾಲೂಕಿನ ಮಂಕಿಯ ಹೊಸಹಿತ್ಲದಲ್ಲಿ ಕೋವಿಡ್-19 ನಿಯಮ ಉಲ್ಲಂಘಿಸಿದ ಎರಡು ಕುಟುಂಬಗಳ ನಾಲ್ವರ ಮೇಲೆ ಎಫ್.ಐ.ಆರ್. ದಾಖಲಿಸಲಾಗಿದೆ.
ನೇತ್ರಾವತಿ ಬೈರು ಹರಿಕಂತ್ರ, ಬೈರು ಕನ್ನಾ ಹರಿಕಂತ್ರ, ಭಾರತಿ ಬೈರು ಹರಿಕಂತ್ರ ರೋಹಿಣಿ ಮಂಜುನಾಥ ಹರಿಕಂತ್ರ ಎಂಬುವವರ ಮೇಲೆ ಮಂಕಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಜಯ ಭಂಡಾರಕರ ದೂರನ್ನಾಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಎರಡೂ ಕುಟುಂಬಕ್ಕೆ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಗಟ್ಟುವ ನಿಯಮ ಉಲ್ಲಂಘನೆಯಡಿ ಪ್ರಕರಣ ದಾಖಲಿಸಲಾಗಿದೆ.
ಘಟನೆ ಏನು?
ಮಂಕಿ ಹೊಸಹಿತ್ಲದ ವಿಷ್ಣು ಬೈರಾ ಹರಿಕಂತ್ರ ಕೊರೋನಾ ಸೋಂಕಿನಿoದ ಬಳಲುತ್ತಿದ್ದು ಹೊನ್ನಾವರದ ಸೇಂಟ್ ಇಗ್ನೇಷಿಯಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ನಂತರ ಇವರ ಮನೆಯವರನ್ನು ಪರೀಕ್ಷೆಗೊಳಪಡಿಸಿ ನೇತ್ರಾವತಿ ಹರಿಕಂತ್ರ, ಬೈರು ಹರಿಕಂತ್ರ, ಭಾರತಿ ಹರಿಕಂತ್ರ ಇವರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಾಗುವಂತೆ ಜುಲೈ 28 ರಂದು ಸೂಚಿಸಲಾಗಿತ್ತು.
ದಾಖಲಾಗದ ಕಾರಣ ತಹಸೀಲ್ದಾರ ನೇತೃತ್ವದ ತಂಡ ಜುಲೈ 31 ರಂದು ಭೇಟಿ ನೀಡಿದಾಗ ದಾಖಲಾಗುವುದಾಗಿ ಒಪ್ಪಿಕೊಂಡಿದ್ದರು. ಅಗಷ್ಟ 1ರಂದು ಮುಖ್ಯಾಧಿಕಾರಿಯವರ ನೇತೃತ್ವದ ತಂಡ ಭೇಟಿ ನೀಡಿ ಅಂಬುಲೆನ್ಸ್ ತಂದಾಗ ಅನಗತ್ಯ ವಾದಗಳನ್ನು ಮಾಡಿ ದಾಖಲಾಗಲು ನಿರಾಕರಿಸಿದ್ದಾರೆ. ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಜಯ ಭಂಡಾರಕರ ವರದಿ ನೀಡಿದ್ದು ಈ ಮೂವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ರೋಹಿಣಿ ಹರಿಕಂತ್ರ ಜುಲೈ 29 ರಂದು ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಿಸಿದ್ದರು. ವರದಿ ಬರುವವರೆಗೆ ಎಲ್ಲಿಗೂ ಹೋಗದೇ ಹೋಂ ಐಸೋಲೇಶನ್ ದಲ್ಲಿರುವಂತೆ ಆರೋಗ್ಯಾಧಿಕಾರಿಗಳು, ಆಶಾಕಾರ್ಯಕರ್ತೆ ತಿಳಿಸಿದ್ದರು. ಅದನ್ನು ಮೀರಿ ಗೋವಾಕ್ಕೆ ಮನೆಗೆಲಸಕ್ಕೆ ಕೆಎಸ್‌ಆರ್‌ಟಿಸಿ ಬಸ್‌ದಲ್ಲಿ ತೆರಳಿದ್ದರು. ನಂತರ ಆರೋಗ್ಯ ಇಲಾಖೆಯವರು ಪಾಸಿಟಿವ್ ವರದಿ ಬಂದಿರುವುದನ್ನು ಮೊಬೈಲ್ ಕರೆ ಮಾಡಿ ತಿಳಿಸಿದಾಗ ಗೋವಾದಿಂದ ಮಂಕಿಗೆ ವಾಪಸ್ ಹೊರಟಿದ್ದರು.
ಈ ನಡುವೆ ಅಧಿಕಾರಿಗಳು, ರೋಹಿಣಿಯವರನ್ನು ನೇರವಾಗಿ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಲು ಹಾಗೂ ಅವರು ಪ್ರಯಾಣಿಸುತ್ತಿರುವ ಬಸ್ ಸಂಖ್ಯೆ, ಪ್ರಯಾಣಿಕರ ವಿವರ ಪಡೆಯಲು ತಯಾರಿ ನಡೆಸಿಕೊಂಡಿದ್ದರು. ಆದರೆ ರೋಹಿಣಿ ಮೊಬೈಲ್ ಸ್ವಿಚ್ ಆಪ್ ಮಾಡಿಕೊಂಡು, ಯಾರ ಗಮನಕ್ಕೂ ಬಾರದಂತೆ ಮನೆಸೇರಿಕೊಂಡಿದ್ದಾರೆ. ನಂತರ ಮುಖ್ಯಾಧಿಕಾರಿಯವರ ನೇತೃತ್ವ ತಂಡ ಅವರ ಮನೆಗೆ ಭೇಟಿ ತಿಳಿಸಿದರೂ ಯಾವ ಬಸ್ ನಲ್ಲಿ ಬಂದಿದ್ದು ಇತ್ಯಾದಿ ಯಾವ ಮಾಹಿತಿಯನ್ನೂ ನೀಡದೇ ಅನಗತ್ಯವಾದ ವಾದಗಳನ್ನು ಮಾಡಿ ಕೋವಿಡ್ ಕೇರ್ ಸೆಂಟರಿಗೂ ದಾಖಲಾಗಲು ನಿರಾಕರಿಸಿದ್ದಾರೆ ಎಂದು ಮುಖ್ಯಾಧಿಕಾರಿ ಅಜಯ ಭಂಡಾರಕರ ಕೋವಿಡ್-19 ನಿಯಮ ಉಲ್ಲಂಘನೆ ಮಾಡಿದ ಕುರಿತು ವರದಿ ಸಲ್ಲಿಸಿದ್ದು ಎಫ್.ಐ.ಆರ್. ದಾಖಲಿಸಲಾಗಿದೆ.